ಅಭಿವೃದ್ಧಿಗೆ ಕಾಂಗ್ರೆಸ್, ಜೆಡಿಎಸ್, ಸಿಪಿಐ ವಿಫಲ
ಬಾಗೇಪಲ್ಲಿ: ಕಳೆದ 65 ವರ್ಷಗಳಿಂದ ಪುರಸಭೆಯ ಆಡಳಿತ ನಡೆಸಿದ ಕಾಂಗ್ರೆಸ್, ಸಿಪಿಐ(ಎಂ) ಮತ್ತು ಜೆಡಿಎಸ್ ಪಕ್ಷಗಳು ಪಟ್ಟಣವನ್ನು ಅಭಿವೃದ್ಧಿಪಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆಯೆಂದು ಬಿಜೆಪಿ ತಾಲೂಕು ಅಧ್ಯಕ್ಷ ಡಾ. ಜಿ.ಎಸ್. ಚೌಡರೆಡ್ಡಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೇ ಮೊದಲ ಬಾರಿಗೆ ರಾಜ್ಯ ಬಿಜೆಪಿ ಸರ್ಕಾರವು ಮುಖ್ಯಮಂತ್ರಿಗಳ ಅನುದಾನದಲ್ಲಿ ಪಟ್ಟಣದ ಅಭಿವೃದ್ಧಿಗಾಗಿ ಕೋಟ್ಯಂತರ ರು.ಗಳನ್ನು ಬಾಗೇಪಲ್ಲಿ ಪುರಸಭೆಗೆ ನೀಡಿತು. ಆದರೆ, ಈ ಹಿಂದೆ ಆಯ್ಕೆಯಾಗಿದ್ದ ಕಾಂಗ್ರೆಸ್, ಸಿಪಿಐ(ಎಂ) ಮತ್ತು ಜೆಡಿಎಸ್ ಸದಸ್ಯರ ನಿರ್ಲಕ್ಷ್ಯದಿಂದ ಪಟ್ಟಣದ ಅಭಿವೃದ್ಧಿ ಕುಂಠಿತವಾಗಿರುವ ನಿಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಜನ ಬದಲಾವಣೆ ಬಯಸಿದ್ದಾರೆ ಎಂದರು.
ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರ ಕೋಟಿಗಟ್ಟಲೇ ಹಣ ನೀಡಿದ್ದರೂ ಅಭಿವೃದ್ಧಿ ಮಾತ್ರ ಶೂನ್ಯ. ಇದಕ್ಕೆ ಪ್ರಮುಖ ಕಾರಣ ಈ ಹಿಂದೆ ಆಯ್ಕೆಯಾಗಿದ್ದ ಸದಸ್ಯರ ದುರಾಡಳಿತ ಹಾಗೂ ಅಕ್ರಮಗಳಿಗೆ ಪಟ್ಟಣದ ನಾಗರಿಕರು ಬಲಿಪಶು ಆಗಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಜಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲಾ ವರ್ಗಗಳಿಗೂ ಅನುಕೂಲವಾಗುವ ಜನಪರ ಯೋಜನೆ ಜಾರಿಗೊಳಿಸಿತು. ವೋಟಿಗಾಗಿ ಬರುವ ವಿವಿಧ ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತರ ವಿರೋಧಿ ಪಕ್ಷವೆಂದು ಬಿಜೆಪಿಗೆ ಹಣೆಪಟ್ಟಿ ಕಟ್ಟಿ ಮನೆ ಮನೆಗೂ ಬಂದು ಮತ ಕೇಳುತ್ತಾ ಪ್ರಚಾರ ಮಾಡುತ್ತಿವೆ. ಆದರೆ, ಇದು ಸತ್ಯಕ್ಕೆ ದೂರವಾದ ಸಂಗತಿ. ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅಲ್ಪಸಂಖ್ಯಾತರಿಗೆ 132ಕೋಟಿ ಮೀಸಲಿಟ್ಟ ಏಕೈಕ ಪಕ್ಷ ಬಿಜೆಪಿ ಎಂದರು.
1ನೇ ವಾರ್ಡಿನಿಂದ ಸಂಪತ್ತು, 2ನೇ ವಾರ್ಡ್ ಬಿ.ಮಾಧವಿ, 3ನೇ ವಾರ್ಡ್ ಆಧೀಲ್, 4 ಲಕ್ಷ್ಮೀಪತಿರೆಡ್ಡಿ, 5 ಮುದ್ದುಕೃಷ್ಣ, 6 ಪ್ರಭಾನಾಯ್ಡು,7 ಉಷಾರಾಣಿ, 8 ಲಕ್ಷ್ಮೀದೇವಮ್ಮ, 9 ಸುರೇಶ್ಬಾಬು, 10 ಬಾಬಾಜಾನ್, 11ಅನ್ನಪೂರ್ಣ, 12 ನರಸಿಂಹಮೂರ್ತಿ, 13 ವರಲಕ್ಷ್ಮೀ, 14 ಹರೀಶ್, 15 ರವೀಂದ್ರ, 16 ಲೋಕೇಶ್, 17 ಮಂಜುಳಮ್ಮ, 19 ಇಬ್ರಾಹಿಂ ಕಲೀಮ್, 20 ಮಂಜುನಾಥ ನಾಯಕ, 21 ರಾಮಲಕ್ಷ್ಮಮ್ಮ, 22 ನಾಗಮಣಿ, 23 ನೇ ವಾರ್ಡಿನಲ್ಲಿ ವೆಂಕಟೇಶ್ ಅವರನ್ನು ಕಣಕ್ಕೆ ಇಳಿಸಲಾಗಿದೆ. ಪುರಸಭೆಯ ಎಲ್ಲಾ 23 ವಾರ್ಡ್ಗಳಿಗೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕಾಗಿತ್ತು. ಆದರೆ, ಕೆಲವು ಕಾರಣಾಂತರಗಳಿಂದ 18 ನೇ ವಾರ್ಡ್ ಹೊರತುಪಡಿಸಿ 22 ವಾರ್ಡ್ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೂಳೂರು ಲಕ್ಷ್ಮೀ, ಮುಖಂಡರಾದ ಕೃಷ್ಣಪ್ಪ, ಬಾಬಾಜಾನ್, ನರಸಿಂಹಪ್ಪ, ಹರೀಶ್ ಮುಂತಾದವರು ಇದ್ದರು.