ಮಕ್ಕಳೊಂದಿಗೆ ಸ್ನೇಹಿತರಂತೆ ನಡೆದುಕೊಳ್ಳಿ: ಪೋಷಕರಿಗೆ ಕೃಷ್ಣಮೂರ್ತಿ ಕಿವಿಮಾತು
ಗುಡಿಬಂಡೆ: ಪೋಷಕರು ಮಕ್ಕಳಿಗೆ ಅಗತ್ಯ ಸವಲತ್ತುಗಳನ್ನು ಕಲ್ಪಿಸಿದರೆ ಮಾತ್ರ ಸಾಲದು ಅವರೊಂದಿಗೆ ಸ್ನೇಹಿತರಂತೆ ನಡೆದುಕೊಂಡು ಮನೆಯ ಆಶಾಕಿರಣಗಳಂತೆ ಬೆಳೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಸ್.ಎಂ. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಾಗತೀಕರಣ ಹೆಚ್ಚಿದಂತೆಲ್ಲಾ ಮಕ್ಕಳು ಪಠ್ಯೇತರ ಚಟುವಟಿಕೆಗಳಾದ ಟಿ.ವಿ, ಮೊಬೈಲ್ಗಳಂತಹುವುಗಳ ಮೋಜಿಗೆ ಬಲಿಯಾಗುತ್ತಿದ್ದು, ಇಂತಹವುಗಳ ಬಗ್ಗೆ ಪೋಷಕರು ಮಕ್ಕಳಿಗೆ ಸೂಕ್ತ ರೀತಿಯಲ್ಲಿ ತಿಳಿ ಹೇಳಿ ಉತ್ತಮ ಪ್ರಜೆಯನ್ನಾಗಿ ಮಾಡಲು ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ರೀತಿಯಲ್ಲಿ ಕಾಳಜಿ ವಹಿಸಿಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಣಮಾಮಿ ಗಣನಾಯಕ ಎಂಬ ನೃತ್ಯ ಎಲ್ಲರನ್ನೂ ಭಕ್ತಿಪಥಕ್ಕೆ ಕರೆದೊಯ್ಯಿತು. ಶಾಲೆಯ ಪುಟಾಣಿ ಮಕ್ಕಳು ಹಲವಾರು ಗೀತೆಗಳಿಗೆ ನೃತ್ಯವನ್ನು ಮಾಡಿ ಜನಮನ ಸೆಳೆದರು. ಯುಕೆಜಿ ಮಕ್ಕಳಿಂದ ವಿವಿಧ ವೇಷ ಸ್ಪರ್ಧೆ ಕಾರ್ಯಕ್ರಮ ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ಕಾರ್ಯಾಧ್ಯಕ್ಷ ರಾಮಚಂದ್ರಪ್ಪ, ನ್ಯೂ ಪಬ್ಲಿಕ್ ಶಾಲೆಯ ಮುಖ್ಯಸ್ಥ ಪಿ.ಎನ್. ರಾಜಶೇಖರ್, ಮುಖ್ಯ ಶಿಕ್ಷಕಿ ಪರಿಮಳ, ಇಂಡಿಯನ್ ರೂರಲ್ ಡೆವೆಲಪೆಮೆಂಟ್ ಟ್ರಸ್ಟ್ ಅಧ್ಯಕ್ಷೆ ಪಾರ್ವತಿ, ಖಜಾಂಚಿ ಆರ್. ಬಾಲಾಜಿ, ಶಿಕ್ಷಕರಾದ ಅಶ್ವತ್ಥಮ್ಮ, ನಸ್ರೀನ್ ತಾಜ್, ಗೋಪಾಲಕೃಷ್ಣ, ಬಾಬಾಜಾನ್, ಪೂರ್ಣಿಮ, ಶ್ರೀನಾಥ್, ನೃತ್ಯ ಶಿಕ್ಷಕ ಜಿ.ಆರ್. ಮುನಿರಾಜು ಸೇರಿದಂತೆ ಹಲವರು ಇದ್ದರು.