ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೇಲ್ವೆ ಬಜೆಟ್‌ನಲ್ಲಿ ಜಿಲ್ಲೆಗೆ ಸಿಗುವುದೇ ಇನ್ನಷ್ಟು ಉಡುಗೊರೆ?

Lingaraj Badiger
Updated On : 26 Feb 2013, 10:53 am

ಕೋಲಾರ: ಕೇಂದ್ರ ರೇಲ್ವೆ ಮುಂಗಡ ಪತ್ರ ಫೆ. 26 ರಂದು ಮಂಡನೆ ಆಗಲಿದ್ದು, ಕೋಲಾರ ಜಿಲ್ಲೆಯ ಜನತೆ ಈ ಬಾರಿ ಹೆಚ್ಚಿನ ನಿರೀಕ್ಷೆ ವ್ಯಕ್ತಪಡಿಸದಿದ್ದರೂ ಈ ಹಿಂದೆ ಮಂಜೂರಾಗಿರುವ ಯೋಜನೆಗಳಿಗೆ ತ್ವರಿತಗತಿಯಲ್ಲಿ ಸಾಗಲಿ ಎಂದು ಬಯಸಿದ್ದಾರೆ.
ಜಿಲ್ಲೆಗೆ ಕಳೆದ ರೇಲ್ವೆ ಬಜೆಟ್‌ನಲ್ಲಿ ಆಗಿನ ರೇಲ್ವೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರು ರೇಲ್ವೆ ವ್ಯಾಗಿನ್ ಘಟಕ ಮಂಜೂರು ಮಾಡಿಸಿದ್ದರಾದರೂ ಜಿಲ್ಲೆಯ ಕನಿಷ್ಠ 2 ರಿಂದ 3 ಸಾವಿರ ಜನರಿಗೆ ಉದ್ಯೋಗ ಸಿಗಲಿ ಎಂಬ ಕಾರಣದಿಂದ ರೇಲ್ವೆ ವ್ಯಾಗಿನ್ ಘಟಕಕ್ಕೆ ಬದಲು ರೇಲ್ವೆ ಕೋಚ್ ಘಟಕ ಮಂಜೂರು ಮಾಡಿಸಿದ್ದಾರೆಯಾದರೂ ಇನ್ನು ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿಲ್ಲ.
ಕೋಲಾರ- ಶ್ರೀನಿವಾಸಪುರ ತಾಲೂಕಿನ ವ್ಯಾಪ್ತಿಯ ಮುಳಬಾಗಲು ಗಡಿಗೆ ಹೊಂದಿರುವ ಪ್ರದೇಶದಲ್ಲಿ ರೇಲ್ವೆ ಕೋಚ್ ಘಟಕ ಸ್ಥಾಪನೆಗೆ ಚಿಂತನೆ ನಡೆದಿದ್ದು, ರಾಜ್ಯ ಸರ್ಕಾರದ ಸುಮಾರು 600 ಎಕರೆ ಹಾಗೂ ಖಾಸಗಿಯವರಿಂದ 600 ಎಕರೆ ಭೂಮಿ ಖರೀದಿ ಮಾಡುವುದಕ್ಕೆ ತಯಾರಿ ನಡೆದಿದ್ದು, ಫೆ. 26 ರಂದು ಮಂಡನೆ ಆಗಲಿರುವ ರೇಲ್ವೆ ಬಜೆಟ್‌ನಲ್ಲಿ ಈ ಯೋಜನೆಗೆ ಬೇಕಾದ ಅನುದಾನ ಮತ್ತು ಅನುಮೋದನೆ ಸಿಗುವುದೇ ಎಂಬುದು ಕುತೂಹಲ ಮೂಡಿಸಿದೆ.
ಶ್ರೀನಿವಾಸಪುರ- ಮದನಪಲ್ಲಿ ನಡುವೆ ರೈಲು ಮಾರ್ಗಕ್ಕೆ ಸರ್ವೆ ಕಾರ್ಯ ನಡೆಸಲು ಕ್ರಿಯಾ ಯೋಜನೆ ಸಿದ್ಧವಾಗಿದ್ದು, ಇದಕ್ಕೆ ಯೋಜನಾ ಇಲಾಖೆಯಿಂದ ಒಪ್ಪಿಗೆ ಸಿಕ್ಕಿದಲ್ಲಿ ಶ್ರೀನಿವಾಸಪುರ ಜನತೆಗೆ ಸಹಾಯವಾಗಲಿದೆ. ಕೋಲಾರ- ಬೆಂಗಳೂರು ನಡುವೆ ಹೊಸ ಲೋಕಲ್ ಟ್ರೈನ್‌ಗೆ ಬೇಡಿಕೆ ಸಲ್ಲಿಸಲಾಗಿದ್ದು, ಇದಕ್ಕೆ ಒಪ್ಪಿಗೆ ಸಿಗಲಿ ಎಂಬುದು ಪ್ರಯಾಣಿಕರ ಒತ್ತಾಸೆಯಾಗಿದೆ.
ಕೋಲಾರ- ಚಿಕ್ಕಬಳ್ಳಾಪುರ ರೈಲು ಮಾರ್ಗದ ಕಾಮಗಾರಿ ಮುಗಿಯುತ್ತಾ ಬಂದಿದ್ದು, ಬಾಕಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಿ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟವಾಗುವ ಮುನ್ನವೇ ಉದ್ಘಾಟನೆಗೆ ಶುಭ ಸೂಚನೆ ಸಿಗುವುದೇ ಕಾದು ನೋಡಬೇಕಾಗಿದೆ.
-ಪಾ.ಶ್ರೀ. ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement