ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ: ನಾರಾಯಣಸ್ವಾಮಿ
ಗೌರಿಬಿದನೂರು: ಅಭಿವೃದ್ಧಿ ದೃಷ್ಟಿಯಿಂದ ಮುಂಬರುವ ಪುರಸಭಾ ಮತ್ತು ನಗರಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಮನವಿ ಮಾಡಿದರು.
ಅವರು ಪಟ್ಟಣದ ಗಾಂಧಿ ವೃತ್ತದಲ್ಲಿ ತಾಲೂಕು ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಪುರಸಭೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧನಾ ಕಾರ್ಯಕ್ರಮ ಮತ್ತು ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಳೆದ 65 ವರ್ಷಗಳಲ್ಲಿ ಕಾಂಗ್ರೆಸ್ 40 ಮತ್ತು ಜೆಡಿಎಸ್ 20 ವರ್ಷ ಆಡಳಿತ ನಡೆಸಿದರೂ ನಗರಸಭೆ, ಪುರಸಭೆಗಳಿಗೆ ವರ್ಷಕ್ಕೆ 10 ಲಕ್ಷ ಅನುದಾನ ತರಲು ಲೋಕಸಭಾ ಸದಸ್ಯರು, ಶಾಸಕರು ವಿಧಾನಸೌಧದ ಬಾಗಿಲನ್ನು ಎಡತಾಕಬೇಕಿತ್ತು. ಆದರೆ ಕೇವಲ 5 ವರ್ಷ ಆಡಳಿತ ನಡೆಸಿರುವ ಬಿಜೆಪಿ ಸರ್ಕಾರ ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳಿಗೆ ಕೋಟ್ಯಂತರ ರು.ಗಳ ಅನುದಾನ ನೀಡುವ ಮೂಲಕ ಅಭಿವೃದ್ಧಿ ಕಾಣುವಂತೆ ಮಾಡಿದೆ ಎಂದರು.
ಅಲ್ಪಸಂಖ್ಯಾತರ ಉದ್ಧಾರ ಮಾಡುತ್ತಿದ್ದೇವೆಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ 40 ವರ್ಷಗಳ ಆಡಳಿತದಲ್ಲಿ ಕೇವಲ 65 ಕೋಟಿಯನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಖರ್ಚು ಮಾಡಿತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರ 650 ಕೋಟಿ ನೀಡಿದೆ. ಇದನ್ನು ಗಮನದಲ್ಲಿರಿಸಿಕೊಂಡು ಅಲ್ಪಸಂಖ್ಯಾತರು ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಕೇವಲ 4 ವರ್ಷದ ಅಧಿಕಾರದಲ್ಲಿ ವೃದ್ಧರಿಗೆ 500, ಅಂಗವಿಕಲರಿಗೆ 1200 ಹಾಗೂ ವಿಧವೆಯರಿಗೆ 500ನ್ನು ಹೆಚ್ಚಿಸಿದೆ. ಪುರಸಭೆಗೆ ವರ್ಷಕ್ಕೆ 5ಕೋಟಿ, ನಗರಸಭೆಗೆ 30ಕೋಟಿ, ಮಹಾನಗರಪಾಲಿಕೆಗಳಿಗೆ 100ಕೋಟಿಗಳಂತೆ ಒಟ್ಟು 1200ಕೋಟಿಯನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರದಲ್ಲಿದ್ದಾಗ ಏಕೆ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಮಠಕ್ಕೆ ಹಣ ನೀಡಿದರೆ ತಪ್ಪೇನು?: ಮಠಗಳಿಗೆ ಹಣ ನೀಡುವುದು ತಪ್ಪಲ್ಲ. ಮಠಾಧೀಶರು ಶೈಕ್ಷಣಿಕ ಕ್ರಾಂತಿ ಮಾಡುತ್ತಿದ್ದಾರೆ. ಈ ದೇಶಕ್ಕೆ ಡಾಕ್ಟರ್, ಎಂಜಿನಿಯರ್, ಎಂಬಿಎ ಪದವೀಧರ ವಿದ್ಯಾವಂತರನ್ನು ನೀಡುತ್ತಿವೆ. ಉತ್ತಮ ಸಮಾಜವನ್ನು ನಿರ್ಮಾಣ ಮಾಡುತ್ತಿವೆ. ಇಂತಹ ಮಠಗಳಿಗೆ ಹಣ ನೀಡಿದರೆ ಬೊಬ್ಬೆ ಹೊಡೆದು ಟೀಕಿಸುತ್ತಿರುವ ಇತರೆ ಪಕ್ಷಗಳ ರಾಜಕಾರಣಿಗಳು ಓಡಿ ಹೋಗಿ ಮಠಾಧೀಶರ ಕಾಲಿಗೆ ಬಿದ್ದು ಚುನಾವಣೆಯಲ್ಲಿ ಗೆಲ್ಲುವಂತೆ ಆಶೀರ್ವದಿಸಬೇಕು ಎಂದು ಕೇಳಿಕೊಳ್ಳುವುದು ಎಷ್ಟು ಸರಿ ಎಂದು ವ್ಯಂಗ್ಯವಾಡಿದರು.
ಸಭೆಯನ್ನುದ್ದೇಶಿಸಿ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷ ಸಿ.ಆರ್. ನರಸಿಂಹಮೂರ್ತಿ ಮಾತನಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಂ.ರವಿನಾರಾಯಣರೆಡ್ಡಿ, ಬಿಜೆಪಿಯ 21 ಅಭ್ಯರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಕೃಷ್ಣಪ್ಪ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಮೇಶ್ ರಾವ್ ನಿರೂಪಿಸಿದರು.
ಕಾರ್ಯಕ್ರಮದ ನಂತರ ಅಭ್ಯರ್ಥಿಗಳ ಪರವಾಗಿ ವಾರ್ಡ್ಗಳಿಗೆ ತೆರಳಿ ಬಿಜೆಪಿ ಪರ ಮತಯಾಚಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.