ಚಿನ್ನದ ಗಣಿ ಮುಚ್ಚಿ 12 ವರ್ಷ: ಕಪ್ಪು ದಿನ ಆಚರಣೆ
ಕೆಜಿಎಫ್: ಕೆಜಿಎಫ್ ಚಿನ್ನದ ಗಣಿ ಬಿಜಿಎಂಎಲ್ ಕಾರ್ಖಾನೆ ಮುಚ್ಚಿ 12 ವರ್ಷ ಕಳೆದ ಹಿನ್ನೆಲೆಯಲ್ಲಿ ಬಿಜಿಎಂಎಲ್ ಚಿನ್ನದ ಗಣಿ ಕಾರ್ಮಿಕ ಸಂಘದ ನೂರಾರು ಕಾರ್ಮಿಕರು ನಗರದ ಗಾಂಧಿ ವೃತ್ತದಲ್ಲಿ ಕಪ್ಪು ದಿನವಾಗಿ ಆಚರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಸ್ತೆ ತಡೆ ನಡೆಸಿ, ಪ್ರತಿಭಟಿಸಿದರು.
ಇದೇ ವೇಳೆ ಕಾರ್ಮಿಕರು ರಸ್ತೆಯಲ್ಲಿ ಶವಗಳಂತೆ ಮಲಗಿ ಪ್ರತಿಭಟಿಸಿದರು. ನಂತರ ಮಾತನಾಡಿದ ಕಾರ್ಮಿಕ ಸಂಘದ ಒಕ್ಕೂಟದ ಸಂಚಾಲಕ ಜಯಕುಮಾರ್ ಹಾಗೂ ಅಧ್ಯಕ್ಷ ಯಶ್ವಂತ್ರಾಜ್ ದೇಶಕ್ಕೆ ಚಿನ್ನ ನೀಡಿದ ಕಾರ್ಮಿಕರನ್ನು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿದ್ದು 12 ವರ್ಷಗಳಿಂದ ಕಾರ್ಮಿಕರು ಹಾಗೂ ಅವರ ಕುಟುಂಬ ವರ್ಗದವರು ಸಂಕಷ್ಟದ ಜೀವನವನ್ನು ನಡೆಸುತ್ತಿದ್ದರೂ, ಕೇಂದ್ರ ಸರ್ಕಾರ ಕಾರ್ಮಿಕರ ಬೇಡಿಕೆಗಳಿಗೆ ಮತ್ತು ಪುರ್ನವಸತಿ ಕಲ್ಪಿಸುವ ಯೋಜನೆ ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
2001 ರಿಂದ ಸುಮಾರು 600 ಕಾರ್ಮಿಕರು ಸಿಲಿಕಾಸಿಸ್ ರೋಗದಿಂದ ಶೃತಪಟ್ಟಿದ್ದು, ಕೇಂದ್ರ ಸರ್ಕಾರವಾಗಲಿ ಅಥವಾ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಅವರಾಗಲಿ ಯಾವುದೇ ರೀತಿಯ ಪರಿಹಾರಕ್ಕೆ ಮುಂದಾಗಲಿಲ್ಲ ಮತ್ತು ಕಾರ್ಮಿಕರಿಗೆ ಆರೋಗ್ಯ ಸೇವೆ ಕಲ್ಪಿಸದೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದರು.
ಮುನಿಯಪ್ಪ ವಿರುದ್ಧ ಮುನಿಸು: ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ವಿನಾಕಾರಣ ಬಿಜಿಎಂಎಲ್ ಸಮಸ್ಯೆಯ ವಿಳಂಬಕ್ಕೆ ಕಾರ್ಮಿಕ ಸಂಘಗಳು ಆಂತರಿಕ ಕಚ್ಚಾಟವೇ ಕಾರಣ ಎಂಬ ಹೇಳಿಕೆ ನೀಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಬಿಜಿಎಂಎಲ್ ಸಮಸ್ಯೆ ನಿವಾರಣೆಗೆ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ರವರು ಯಾವುದೇ ರೀತಿಯ ಪ್ರಾಮಾಣಿಕ ಪ್ರಯತ್ನ ನಡೆಸಿಯೇ ಇಲ್ಲವೆಂದು ಆರೋಪಿಸಿದರು.
ಕಾರ್ಮಿಕ ಸಂಘದ ಮುಖಂಡರಾದ ಗುಣಶೇಖರನ್, ಸಣ್ಮುಗಂ, ಗೋಪಿನಾಥ್, ಕಬಿಲನ್, ಸೀರಾಲನ್, ಸೇರಿದಂತೆ ಕಾರ್ಮಿಕರು, ಕುಟುಂಬ ವರ್ಗ ಪಾಲ್ಗೊಂಡಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.