ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತಪ್ಪಿದ ಜೈಲು, ಅಮರೇಶ್‌ಗೆ ಜೀವ

Parashurama
Updated On : 1 Mar 2013, 12:08 pm

ಕೋಲಾರ: ನಕಲಿ ದಾಖಲೆ ಸೃಷ್ಟಿಸಿ ಇನಾಮ್ತಿ ಜಮೀನು ಪರಭಾರೆ ಮಾಡಿದ ಆರೋಪದ ಮೇಲೆ ಮುಳಬಾಗಿಲು ಕ್ಷೇತ್ರದ ಕಾಂಗ್ರೆಸ್ ಶಾಸಕ ಅಮರೇಶ್ ಮತ್ತಿಬ್ಬರಿಗೆ ತಾನು ವಿಧಿಸಿದ್ದ ಜೈಲು ಶಿಕ್ಷೆಗೆ ಮುಳಬಾಗಿಲು ಜೆಎಂಎಫ್‌ಸಿ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಶಾಸಕ ಅಮರೇಶ್ ಅವರು 2002ರಿಂದ 2007ರ ಅವಧಿಯಲ್ಲಿ ಮುಳಬಾಗಿಲು ತಾಲೂಕಿನ ಸೊನ್ನವಾಡಿ ಗ್ರಾಪಂ ಸದಸ್ಯರಾಗಿದ್ದಾಗ ಬೈರಕೂರು ಹೋಬಳಿಗೆ ಸೇರಿದ ಸಿದ್ದನಹಳ್ಳಿಯ ನಿವಾಸಿ ಲಿಂಗಯ್ಯ ಎಂಬವರು ಬೇವಹಳ್ಳಿಯ ಸರ್ವೆ ನಂ.184ರಲ್ಲಿ ಹೊಂದಿದ್ದ 3 ಎಕರೆ 8 ಗುಂಟೆ ಇನಾಮ್ತಿ ಜಮೀನನ್ನು ಚಂಗಲರಾಯಪ್ಪ, ಮುನಿಯಪ್ಪ ಹಾಗೂ ಇನ್ನಿಬ್ಬರ ಜತೆ ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಜಮೀನು ಪರಭಾರೆ ಮಾಡಿರುವುದಾಗಿ ಆರೋಪಿಸಲಾಗಿತ್ತು. ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರುದಾರ ಲಿಂಗಯ್ಯ ತೀರಿಕೊಂಡ ನಂತರ ಇವರ ಮಕ್ಕಳಾದ ದಿನೇಶ್ ಬಾಬು ಹಾಗೂ ಶೇಖರ್ ಬಾಬು ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸಿದ್ದರು.
2006ರಿಂದ 07ರವರೆಗೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. 2008ರ ವಿಧಾನಸಭಾ ಚುನಾವಣೆಯಲ್ಲಿ ಅಮರೇಶ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದ ನಂತರ ವಿಚಾರಣೆ ಮಂದಗತಿಯಲ್ಲಿ ಸಾಗಿತ್ತು. ಶಾಸಕ ಮತ್ತು ಇನ್ನಿತರ 4 ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕೆಂಬ ಉದ್ದೇಶದಿಂದ ಲಿಂಗಯ್ಯರವರ ಮಕ್ಕಳು ಮತ್ತೆ ನ್ಯಾಯಾಲಯ ಮೊರೆ ಹೋಗಿದ್ದರು. ಸರ್ಕಾರಿ ಅಭಿಯೋಜಕಿ ಶಾಂತ ಮೇರಿ ಅವರು ಪ್ರಕರಣದ ವಿಚಾರಣೆ ಮುಂದುವರೆಸಲು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ ಮೇರೆಗೆ ನ್ಯಾಯಾಧೀಶರಾದ ಓಂಕಾರಮೂರ್ತಿ ಮತ್ತೆ ಭೂ ವಿವಾದದ ಬಗ್ಗೆ ವಿಚಾರಣೆ ನಡೆಸಿದಾಗ ಶಾಸಕ ಹಾಗೂ ಇನ್ನು 4 ಆರೋಪಿಗಳಲ್ಲಿ ಈಗಾಗಲೇ ಇಬ್ಬರು ಮೃತಪಟ್ಟಿರುವ ಹಿನ್ನಲೆಯಲ್ಲಿ ಉಳಿದ ಮೂವರನ್ನು ನ್ಯಾಯಾಲಯಕ್ಕೆ ಶರಣಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ಈ ನಿಟ್ಟಿನಲ್ಲಿ ಗುರುವಾರ ಶಾಸಕ ಅಮರೇಶ್, ಚಂಗಲರಾಯಪ್ಪ, ಮುನಿಯಪ್ಪ ಅವರು ತಮ್ಮ ವಕೀಲರಾದ ಸಿ.ಎಂ.ಗೋವಿಂದರೆಡ್ಡಿ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ದೂರುದಾರರ ಪರ ವಕೀಲರು ಹಾಗೂ ಆರೋಪಿಗಳ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನಂತರ ನ್ಯಾಯಾಧೀಶರಾದ ಓಂಕಾರಮೂರ್ತಿ ಅವರು, ನಕಲಿ ದಾಖಲೆ ಸೃಷ್ಟಿಸಿ ಇನಾಮ್ತಿ ಜಮೀನು ಪರಭಾರೆ ಮಾಡಿರುವ ಆರೋಪದ ಮೇಲೆ ಸೆಕ್ಷನ್ 465(ಎ) ಹಾಗೂ 471ನೇ ನಿಯಮದಡಿ ಶಾಸಕ ಅಮರೇಶ್, ಚಂಗಲರಾಯಪ್ಪ ಹಾಗೂ ಮುನಿಯಪ್ಪ ಅವರುಗಳಿಗೆ ತಲಾ 2 ವರ್ಷ ಜೈಲು ಹಾಗೂ ತಲಾ 10 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದರು.
ಭೂ ಹಗರಣದಲ್ಲಿ ಶಾಸಕ ಅಮರೇಶ್ ಜೈಲು ಪಾಲಾಗುವುದು ಖಚಿತವೆಂದು ಅರ್ಜಿದಾರರು ಮತ್ತು ಶಾಸಕರ ವಿರೋಧಿಗಳು ಖುಷಿಯಿಂದ ಕಾಯುತ್ತಿದ್ದರು. ಆದರೆ, ಶಾಸಕರ ಮತ್ತು ಇನ್ನಿಬ್ಬರ ಪರ ವಕೀಲ ಸಿ.ಎಂ.ಗೋವಿಂದರೆಡ್ಡಿ ಅವರು ಸಮಾಜದಲ್ಲಿ ಗೌವರ ಸ್ಥಾನ ಹೊಂದಿರುವ ಶಾಸಕರನ್ನು ಜೈಲಿಗೆ ಕಳುಹಿಸಲು ನೀಡಿರುವ ಆದೇಶ ಹಿಂದಕ್ಕೆ ಪಡೆಯಬೇಕು. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ದಾಖಲೆ ಒದಗಿಸಲು ಕಾಲಾವಕಾಶ ನೀಡಬೇಕು. ಶಾಸಕರು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಮತ್ತೊಂದು ಅರ್ಜಿ ಸಲ್ಲಿಸಿ, ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.
ಶಾಸಕರ ಹಾಗೂ ಇನ್ನಿಬ್ಬರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಓಂಕಾರಮೂರ್ತಿ ಅವರು, 30 ದಿನದೊಳಗೆ ಮತ್ತೆ ನ್ಯಾಯಾಲಯಕ್ಕೆ ಹಾಜರಾಗಬೇಕು, ಸಾಕ್ಷಿಗಳ ನಾಶ ಪಡಿಸಬಾರದು, ಕ್ಷೇತ್ರ ಬಿಟ್ಟು ಹೋಗಬಾರದು ಎಂಬ ಷರತ್ತುಗಳನ್ನು ವಿಧಿಸಿ ಜೈಲು ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿದ್ದಾರೆ.
ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರಾಗಿ, ಜೈಲು ಶಿಕ್ಷೆಗೆ ಗುರಿಯಾಗಿ, ಜಾಮೀನು ಅರ್ಜಿ ಸಲ್ಲಿಸಿ, ಸುಮಾರು ನಾಲ್ಕೈದು ಗಂಟೆ ನ್ಯಾಯಾಲಯದಲ್ಲಿ ಆತಂಕದಲ್ಲಿ ಕಾಲ ಕಳೆದ ಶಾಸಕರು ಜೈಲು ಶಿಕ್ಷೆಗೆ ತಾತ್ಕಾಲಿಕ ತಡೆ ಸಿಕ್ಕ ನಂತರ ಮಾಧ್ಯಮದವರ ಕೈಗೆ ಸಿಗದೆ ಪೇರಿ ಕಿತ್ತರು.
ನ್ಯಾಯಾಲಯದ ಮುಂದೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments