ಅಧಿಕಾರಿಗಳಿಗೆ ಕಾನೂನು ಅರಿವು ಅವಶ್ಯ
ಮಾಲೂರು: ಸಾರ್ವಜನಿಕ ಸೇವೆ ಮಾಡುವ ಅಧಿಕಾರಿಗಳು ಕಾನೂನು ಅರಿವು ಪಡೆಯುವುದು ಮುಖ್ಯ ಎಂದು ಸ್ಥಳೀಯ ಹಿರಿಯ ಸಿವಿಲ್ ನ್ಯಾಯಾಧೀಶ ಸುಶೀಲ ಹೇಳಿದರು. ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಂದಾಯ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ದೇಶದ ಕಾನೂನು ಜನತೆಗೆ ಹಲವು ಸಾಂವಿಧಾನಿಕ ಹಕ್ಕು ನೀಡಿದ್ದರೂ ಅವುಗಳನ್ನು ಸರಿಯಾಗಿ ಜನತೆ ಪಡೆಯಬೇಕಾದರೆ ಅಧಿಕಾರಿಗಳ ಮಾರ್ಗದರ್ಶನ ಅಗತ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳಲ್ಲಿ ಕಾನೂನು ಅರಿವು ಮುಖ್ಯವಾಗಿ ಇರಬೇಕಾಗುತ್ತದೆ. ಪ್ರಾಮಾಣಿಕವಾಗಿ ಜಾರಿ ಮಾಡಬೇಕಾಗುತ್ತದೆ ಎಂದರು.ಪ್ರಧಾನ ಸಿವಿಲ್ ನ್ಯಾಯಾಧೀಶ ರಾಜಣ್ಣ ಸಂಕಣ್ಣನವರ್, ಎಂ. ರಾಜು, ತಹಸೀಲ್ದಾರ್ ಹನುಮಂತರಾಯ ಮಾತನಾಡಿದರು. ಹಿರಿಯ ವಕೀಲ ಮಂಜುನಾಥ್, ಎಂ. ಮುನಿರಾಜು, ಎ. ವೆಂಕಟೇಶ್, ಇ.ಕೆ. ಸೋಮಶೇಖರ್ ಕಾನೂನಿನ ಬಗ್ಗೆ ಉಪನ್ಯಾಸ ನೀಡಿದರು. ಸಾಗರ್ ಗೌಡ ಸ್ವಾಗತಿಸಿದರು. ವೈ.ನಾರಾಯಣಸ್ವಾಮಿ ನಿರೂಪಿಸಿದರು. ಎಚ್.ಎಲ್. ನಾಗರಾಜ್ ವಂದಿಸಿದರು.
ಮಾಲೂರಲ್ಲಿ ಮತದಾರರ ದಿನಾಚರಣೆ
ಮಾಲೂರು: ಪ್ರಂಪಚದಲ್ಲೇ ಶ್ರೇಷ್ಠ ಸಂವಿಧಾನ ಹೊಂದಿರುವ ನಮ್ಮ ದೇಶದಲ್ಲಿ ಹಕ್ಕಿಗೆ ಬೆಲೆ ನಿರ್ಧರಿಸುವಂತಾಗಿರುವುದು ಖೇದಕರ ಸಂಗತಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ರಾಜಣ್ಣ ಸಂಕಣನವರ್ ಹೇಳಿದರು. ಇಲ್ಲಿನ ಮಿನಿ ವಿಧಾನ ಸೌಧದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿ, ಮತದಾನ ಹಕ್ಕನ್ನು ದೇಶದ ಅಭಿವೃದ್ಧಿಗಾಗಿ ವಿನಿಯೋಗಿಸಬೇಕು. ಬೆಲೆ ಏರಿಕೆ ಸೇರಿದಂತೆ ದೇಶದಲ್ಲಿ ಕಾಡುತ್ತಿರುವ ಹಲವಾರು ಸಮಸ್ಯೆಗಳಿಗೆ ನಾವೇ ಕಾರಣ ಎಂಬುಂದನ್ನು ಅರಿಯಬೇಕಾಗಿದೆ. ಮತದ ಮಹತ್ವವನ್ನು ಗ್ರಾಮೀಣ ಪ್ರದೇಶದ ಜನರಿಗೆ ಅರ್ಥ ಮಾಡಿಕೊಡಬೇಕಾಗಿದೆ ಎಂದರು. ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ, ಕ್ಷೇತ್ರಾಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ, ಕೃಷಿ ಅಧಿಕಾರಿ ರಂಗಸ್ವಾಮಿ ಮಾತನಾಡಿದರು. ತಹಸೀಲ್ದಾರ್ ಹನುಮಂತರಾಯ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮತದಾನ ಹಕ್ಕು ಪಡೆದ ನೂತನ ಮತದಾರರಿಗೆ ಎಪಿಕ್ ಕಾರ್ಡ್ಗಳನ್ನು ವಿತರಿಸಲಾಯಿತು. ಪ್ರಾಂಶುಪಾಲ ಫರೊಖಿ, ರಾಮಕೃಷ್ಣ, ವೆಂಕಟೇಶಪ್ಪ, ರೇಷ್ಮೆ ಅಧಿಕಾರಿ ರುದ್ರಪ್ಪ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಆನಂದ್ ಇದ್ದರು.
ವ್ಯಕ್ತಿ ಮೇಲೆ ಕೊಲೆ ಬೆದರಿಕೆ: ದೂರು
ಕೆಜಿಎಫ್: ತವರು ಮನೆಯಲ್ಲಿದ್ದ ತಮ್ಮ ಪತ್ನಿಯನ್ನು ಕರೆಯಲು ಹೋದ ಪತಿಯ ಮೇಲೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ದೆಹಲಿಯ ಸುಪ್ರೀಂಕೋರ್ಟ್ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ಪಿ.ಬಿ. ರೆಡ್ಡಿ ಎಂಬವರು ಆಂಡ್ರಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಪೇಟೆರಸ್ತೆ ನಿವಾಸಿ ದೀಪ್ತಿಯೊಂದಿಗೆ ಕೆಲ ವರ್ಷಗಳ ಹಿಂದೆ ಮದುವೆಯಾಗಿತ್ತು. ಮದುವೆಯಾದ ನಂತರ ಇಬ್ಬರೂ ಅನೋನ್ಯವಾಗಿ ಸಂಸಾರ ನಡೆಸುತ್ತಿದ್ದರು. ಇತ್ತೀಚೆಗೆ ಪತ್ನಿ ದೀಪ್ತಿಗೂ ಪಿ.ಬಿ. ರೆಡ್ಡಿ ಅವರಿಗೂ ಕುಟುಂಬದಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದು, ಪತ್ನಿ ದೀಪ್ತಿ ಕೆಲ ದಿನಗಳ ಹಿಂದೆ ತಮ್ಮ ತವರು ಮನೆಗೆ ಹೋದವಳು ಹಿಂತಿರುಗಿ ಬಾರದ್ದರಿಂದ ಪತಿ ಪಿ.ಬಿ. ರೆಡ್ಡಿ ರಾಜಪೇಟೆ ರಸ್ತೆಯಲ್ಲಿರುವ ಅತ್ತೆ- ಮಾವನ ಮನೆಗೆ ಹೋಗಿ ತಮ್ಮ ಪತ್ನಿಯನ್ನು ಕಳಿಹಿಸುವಂತೆ ಕೇಳಿದ್ದಾರೆ. ಆಗ ಅತ್ತೆ- ಮಾವ, ಭಾವ ಹಾಗೂ ಇತರರು ತಮ್ಮ ಮೇಲೆ ಹಲ್ಲೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪಿ.ಬಿ. ರೆಡ್ಡಿ ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಲೋಕಾಯುಕ್ತರಿಗೆ ದೂರು
ಶಿರಾ: ಚಿಕ್ಕಕೆರೆಯ ಕೋಡಿಹಳ್ಳದಿಂದ ಕಲ್ಲುಕೋಟೆವರೆಗೆ ಸಂಪರ್ಕ ಕಲ್ಪಿಸುತ್ತಿದ್ದ ಕಾಲುವೇ ಒತ್ತುವರಿ ಮಾಡಿ ವಾಣಿಜ್ಯ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸುವ ಸಂಚು ನಡೆದಿದೆ ಎಂದು ಲೋಕಾಯಕ್ತರಿಗೆ ದೂರು ಸಲ್ಲಿಸಿದ್ದಾರೆ. ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಲೋಕಾಯುಕ್ತರ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಲೋಕಾಯುಕ್ತ ನಿರೀಕ್ಷಕ ರಮೇಶ್ ಕುಮಾರ್ಗೆ ಚಿಕ್ಕ ಕೆರೆ ಹಿಂಬಾಗದ ಅಚ್ಚಕಟ್ಟು ಪ್ರದೇಶದ ರೈತರು ಈ ದೂರು ಸಲ್ಲಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.