ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ
ಚಿಕ್ಕಬಳ್ಳಾಪುರ: ಜನರು ತಮ್ಮ ಹಕ್ಕು ಮತ್ತು ಕರ್ತವ್ಯ ನಿರ್ವಹಿಸುವುದರಿಂದ ಹಿಂದೆ ಸರಿಯುವಂತಹುದು ಸರಿಯಲ್ಲ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಹಕ್ಕನ್ನು ಚಲಾಯಿಸಬೇಕೆಂದು ಜಿಲ್ಲಾಧಿಕಾರಿ ಡಾ. ಎನ್. ಮಂಜುಳಾ ಸಲಹೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜವನ್ನು ನಾವು ಸರಿ ಮಾಡದಿದ್ದರೆ ಇನ್ನೂ ಯಾರೂ ಬಂದು ಸರಿ ಮಾಡುತ್ತಾರೆ, ಮೊದಲು ನಾವು ಸರಿಯಾಗಿ ನಡೆದುಕೊಳ್ಳಬೇಕು. ಕೇವಲ ದೂಷಣೆ ಮಾಡಿಕೊಂಡಿದ್ದು ಬಿಟ್ಟರೆ ಪರಿಹಾರ ಕಾಣಲು ಸಾಧ್ಯವಿಲ್ಲ. ಯಾರಿಗೆ ಮತ ಹಾಕಿದರೂ ಅವರು ಅಧಿಕಾರಕ್ಕೆ ಬಂದ ಮೇಲೆ ಏನೂ ಮಾಡುವುದಿಲ್ಲ ಎಂದುಕೊಳ್ಳದೆ ಉತ್ತಮರನ್ನು ಯಾವುದೇ ಆಸೆ ಆಮಿಷ, ಪ್ರಭಾವಗಳಿಗೆ ಗುರಿಯಾಗದೆ ಆಯ್ಕೆ ಮಾಡಬೇಕೆಂದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮತದಾರ ಪಟ್ಟಿ ಬಿಡುಗಡೆ ಮಾಡಿದ್ದು, ಒಟ್ಟು 8,64,734 ಮಂದಿ ಮತದಾರರಲ್ಲಿ 4,38,292 ಪುರುಷರು ಮತ್ತು 4,26,442 ಮಹಿಳಾ ಮತದಾರರಿದ್ದಾರೆ. ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ, ಇಲ್ಲವೇ ಎನ್ನುವುದನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ನೋಡಬಹುದು. ಹಾಗೆಯೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈಗಲೂ ಅರ್ಹರು ನಿಗದಿತ ದಾಖಲೆ ನೀಡುವ ಮೂಲಕ ಮತದಾರ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಲು ಅವಕಾಶ ಇದೆ ಎಂದರು.
ನ್ಯಾಯಾಧೀಶರದ್ದೇ ಇಲ್ಲ: ಹಿಂದೆ ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ಸೇರಿಸಲು ಅರ್ಜಿ ಸಲ್ಲಿಸಿದ್ದು, ಆ ನಂತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ತಿಳಿಲಾಯಿತು. ಆದರೆ, ಮತದಾನ ಮಾಡಲು ಹೋದಾಗ ನಮ್ಮ ಹೆಸರೇ ಇರಲಿಲ್ಲ. ಕೊನೆಗೆ ಮತ ಚಲಾಯಿಸಲು ಆಗಿಲ್ಲ. ನಮ್ಮ ಪಾಡೇ ಹೀಗಿದ್ದರೆ, ಇನ್ನೂ ಸಾಮಾನ್ಯ ಜನರ ಪಾಡೇನಾಗಬೇಕೆಂದು ಪ್ರಶ್ನಿಸಿದ ನ್ಯಾಯಾಧೀಶೆ ರಾಜೇಶ್ವರಿ ಹೆಗಡೆ, ಇಂತಹ ಪ್ರಕರಣಗಳು ಮುಂದೆ ನಡೆಯದಿರಲು ಅಧಿಕಾರಿಗಳು ಗಮನ ಹರಿಸಬೇಕು. ಅರ್ಹರು ಮತದಾನ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಇಲ್ಲದಿದ್ದಲ್ಲಿ ಮತ ಚಲಾಯಿಸಲು ಮುಂದೆ ಬಂದರೂ ಹಕ್ಕು ಚಲಾಯಿಸಲು ಆಗದೇ ಇರಬೇಕಾಗುತ್ತದೆ. ಇದಕ್ಕೆ ಅವಕಾಶ ಕೊಡಬೇಡಿ ಎಂದು ತಿಳಿಸಿದರು. ಅದೇ ರೀತಿ ಮತ ಚಲಾಯಿಸುವ ಅವಕಾಶ ತಮಗೆ ಸಿಗುತ್ತಿಲ್ಲ ಎಂದು ಬಹಳಷ್ಟು ಮಂದಿ ಅಂಧರು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಿದ್ದು, ಅವರಿಗೂ ನ್ಯಾಯಯುತವಾಗಿ ಹಕ್ಕು ಚಲಾಯಿಸಲು ಅವಕಾಶ ನೀಡಬೇಕೆಂದು ಕೋರಿದರು.
ಬಹುಮಾನ ವಿತರಣೆ: ಕಾರ್ಯಕ್ರಮದ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಾಲಿಬಾಲ್ ಪಂದ್ಯಾವಳಿಯಲ್ಲಿ ತೊಂಡೇಬಾವಿಯ ಎವಿಎನ್‌ಆರ್ ಕಾಲೇಜು ಪ್ರಥಮ ಮತ್ತು ಚಿಕ್ಕಬಳ್ಳಾಪುರ ಸರ್ಕಾರಿ ಪದವಿಪೂರ್ವ ಕಾಲೇಜು ದ್ವಿತೀಯ, ಪದವಿ ಹಂತದಲ್ಲಿ ಶಿಡ್ಲಘಟ್ಟ ಸರ್ಕಾರಿ ಕಾಲೇಜು ಪ್ರಥಮ ಮತ್ತು ಚಿಕ್ಕಬಳ್ಳಾಪುರ ಸರ್ಕಾರಿ ಕಾಲೇಜು ದ್ವಿತೀಯ, ಪ್ರಬಂಧ ಸ್ಪರ್ಧೆಯಲ್ಲಿ ಇಂದಿರಾ ಪ್ರಥಮ, ರಮಾ ದ್ವಿತೀಯ, ಚಿತ್ರಕಲೆಯಲ್ಲಿ ಭರತ್ ಪ್ರಥಮ ಮತ್ತು ನರೇಂದ್ರ ದ್ವಿತೀಯ, ಚರ್ಚಾ ಸ್ಪರ್ಧೆಯಲ್ಲಿ ನಂದಿನಿ ಮತ್ತು ಕಾಂತ್‌ರಾಜ್ ದ್ವಿತೀಯ ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಈರಣ್ಣವರ್, ನ್ಯಾಯಾಧೀಶ ರವಿಕಾಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಸತ್ಯಭಾಮ, ಉಪ ವಿಭಾಗಾಧಿಕಾರಿ ಶಾಂತಲಾ, ತಹಸೀಲ್ದಾರ್ ಭಾಸ್ಕರ್ ಮುಂತಾದವರು ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.