ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜಾತಿ ರಾಜಕಾರಣ ಮಾಡಿದ್ರೆ ಉದ್ಧಾರ ಆಗಲ್ಲ

Parashurama
Updated On : 26 Jan 2013, 12:44 pm

ಕೋಲಾರ: ನನಗೆ ಜಾತಿ ರಾಜಕಾರಣದ ಮೇಲೆ ನಂಬಿಕೆಯಿಲ್ಲ. ಒಂದು ವೇಳೆ ಯಾರಾದರೂ ಜಾತಿ ರಾಜಕಾರಣ ಮಾಡಿದ್ರೆ ಉದ್ಧಾರವಾಗಲ್ಲವೆಂದು ಸಚಿವ ಆರ್. ವರ್ತೂರ್ ಪ್ರಕಾಶ್ ಮಾಜಿ ಸಚಿವ ಕೆ. ಶ್ರೀನಿವಾಸಗೌಡರ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಕೋಲಾರ ಕ್ಷೇತ್ರದಲ್ಲಿ ಯಾವುದೇ ಶಾಸಕ ಮಾಡಿರಲಾರದಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ ಮಾಜಿ ಸಚಿವ ಶ್ರೀನಿವಾಸಗೌಡರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಕುರುಬ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಇವರನ್ನು ಮುಖ್ಯಮಂತ್ರಿ ಮಾಡಿ ಎಂದು ಬೆಳಗಾವಿಯಲ್ಲಿ ನಡೆದ ಕುರುಬ ಸಮಾವೇಶದಲ್ಲಿ ನಾನು ನನ್ನ ಅಭಿಪ್ರಾಯ ತಿಳಿಸಲಿಲ್ಲ, ಅವರೊಬ್ಬ ಪ್ರಾಮಾಣಿಕ ರಾಜಕಾರಣಿ ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಆಗಲಿ ಎಂದಿರುವುದು ನಿಜ. ಆದರೆ, ಶ್ರೀನಿವಾಸಗೌಡರು ಈ ವಿಚಾರವನ್ನು ಜಾತಿ ರಾಜಕಾರಣಕ್ಕೆ ಬಳಕೆ ಮಾಡಿಕೊಂಡು ನನ್ನ ವಿರುದ್ಧ ಕ್ಷೇತ್ರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆಂದು ದೂರಿದರು.
ನನಗೆ ಕುರುಬರೇ ಮುಖ್ಯ, ನಿಮ್ಮ ಓಟೇ ಸಾಕು ಎಂದು ಹೇಳುವಷ್ಟು ದಡ್ಡನಲ್ಲ, ಬುದ್ಧಿ ಇರುವವರು ಆ ರೀತಿ ಹೇಳಲು ಸಾಧ್ಯವೇ, ಅದರಲ್ಲೂ ನಾನು ಸಚಿವನಾಗಿ ಬೇಜಾವ್ದಾರಿಯಿಂದ ಬಾಯಿಗೆ ಬಂದಂತೆ ಮಾತನಾಡಲು ಸಾಧ್ಯವೇ ಎಂದು ಸಮರ್ಥಿಸಿಕೊಂಡರು. ಅಧಿಕಾರಿಗಳ ಬಳಿ ಸಚಿವರು ಮತ್ತು ಬೆಂಬಲಿಗರು ಹಣ ವಸೂಲಿ ಮಾಡುತ್ತಾರೆಂಬ ವಿರೋಧಿಗಳ ಆರೋಪದಲ್ಲಿ ಹುರುಳಿಲ್ಲ. ಅಧಿಕಾರಿಗಳಿಂದ ನಾನಾಗಲಿ ಇಲ್ಲವೇ ನನ್ನ ಬೆಂಬಲಿಗರಾಗಲಿ ಒಂದು ನಯಾ ಪೈಸೆ ವಸೂಲಿ ಮಾಡಿಲ್ಲ. ಬೆಂಗಳೂರಿನಲ್ಲಿ ವ್ಯಾಪಾರ ಮಾಡಿ ಅದರಲ್ಲಿ ಸಂಪಾದಿಸಿದ ಹಣದಿಂದ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಿದ್ದೇನೆಂದ ಅವರು, ಲಂಚ ಪಡೆಯುವುದು ಶ್ರೀನಿವಾಸಗೌಡರ ಜಾಯಮಾನ ಎಂದು ಆರೋಪಿಸಿದರು.
ಇಫೋ-ಟೋಕಿಯೋ ಸಂಸ್ಥೆ ಇಡೀ ದೇಶಕ್ಕೆ ಸೇರಿದ ಸಂಸ್ಥೆಯಾಗಿದ್ದು, ಶ್ರೀನಿವಾಸಗೌಡರು ಓಟಿಗಾಗಿ ಸಂಸ್ಥೆಯ ಹಣವನ್ನು ಬಡ ರೋಗಿಗಳಿಗೆ ನೀಡುವ ನೆಪದಲ್ಲಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ತನಿಖೆ ಮಾಡಿಸಿದಲ್ಲಿ ಜೈಲಿಗೆ ಹೋಗುವುದು ಗ್ಯಾರೆಂಟಿ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳ ಕುರಿತು ಅನೇಕ ಕಡೆ ಜೆಡಿಎಸ್ ಮುಖಂಡರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 210 ಹಳ್ಳಿಗಳಲ್ಲಿ ಯಾವುದೇ ಜಾತಿ. ಧರ್ಮ, ರಾಜಕೀಯ ಪಕ್ಷ ನೋಡದೆ ತಲಾ 50 ಲಕ್ಷದಿಂದ 1 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ನಡೆದಿದೆ. ಮುಂದಿನ ಮೂರು ತಿಂಗಳಲ್ಲಿ ಇನ್ನಷ್ಟು ಕೆಲಸ ಮಾಡಲಿದ್ದೇನೆ, ಕ್ಷೇತ್ರಕ್ಕೆ 2 ಕೋಟಿ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಪತ್ರ ಸಲ್ಲಿಸಲಿದ್ದೇನೆಂದರು.
ವಕ್ಕಲೇರಿ ಹೋಬಳಿಯಲ್ಲಿ ಮುಖಂಡ ರಾಮು ಅವರಿಂದಾಗಿ ಯಾವುದೇ ಅಭಿವೃದ್ಧಿ ಕೆಲಸ ಸಾಧ್ಯವಾಗಿರಲಿಲ್ಲ. ನನ್ನ ಬಣ ಬಿಟ್ಟು ಹೋದ ನಂತರ ವಕ್ಕವೇರಿ ಹೋಬಳಿಯಲ್ಲಿ 8 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
28 ಸುವರ್ಣಗ್ರಾಮಗಳ ಅಭಿವೃದ್ಧಿಗೆ 6.50 ಕೋಟಿ, ಪರಿಶಿಷ್ಟ ಜಾತಿ ಮತ್ತು ಪ.ಪಂಗಡದ ರೈತರ ಅನುಕೂಲಕ್ಕಾಗಿ 600 ಕೊಳವೆ ಬಾವಿಗಳ ವ್ಯವಸ್ಥೆ, ಕೋಲಾರ ನಗರಕ್ಕೆ ಈ ಹಿಂದೆ ನೀಡಿದ್ದ 30 ಕೋಟಿ ಜತೆಗೆ ಮತ್ತೆ 30 ಕೋಟಿ ಬಿಡುಗಡೆ ಆಗಿದ್ದು, ಬಾಕಿ ಉಳಿದಿರುವ ಸಿಮೆಂಟ್ ರಸ್ತೆ, ಟಾರು ರಸ್ತೆ, ಚರಂಡಿ ಹಾಗೂ ಹೈಮಾಸ್ಟ್ ದೀಪಗಳಿಗಾಗಿ ಈ ಹಣ ಬಳಕೆ ಮಾಡುವುದಾಗಿ ಹೇಳಿದರು.
ಇನ್ನು ಎರಡು ತಿಂಗಳಲ್ಲಿ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ನಮ್ಮ ಗ್ರಾಮ ಯೋಜನೆಯಡಿ 31 ಕಿಮಿ ರಸ್ತೆಯ ಅಭಿವೃದ್ಧಿಗೆ 12.36 ಕೋಟಿ ಬಿಡುಗಡೆಯಾಗಿದೆ. ಕ್ಷೇತ್ರದ ಜನತೆ ಶ್ರೀನಿವಾಸಗೌಡರ ಮಾತುಗಳಿಗೆ ಕಿವಿಕೊಡದೆ ಮುಂದಿನ ಚುನಾವಣೆಯಲ್ಲೂ ನನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments