ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮತದಾನ ಮೇಲೆ ಪ್ರಜಾಪ್ರಭುತ್ವ ಯಶಸ್ಸು

Parashurama
Updated On : 26 Jan 2013, 12:48 pm

ಕೋಲಾರ: ವಿಶ್ವದಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪಾರದರ್ಶಕ ಆಡಳಿತ ವ್ಯವಸ್ಥೆ ಪರಿಣಾಮಕಾರಿಗೆ ಅನುಷ್ಠಾನಕ್ಕೆ ತರಲು ಕಡ್ಡಾಯ ಮತದಾನ ಮೂಲಕ ಸಭ್ಯರು ಜನಪ್ರತಿನಿಧಿಗಳಾಗಿ ಆಯ್ಕೆ ಆಗುವುದಕ್ಕೆ ಯುವಕರ ಪಾತ್ರ ಅತಿ ಮುಖ್ಯವೆಂದು ನಗರದ ಸರ್ಕಾರಿ ಬಾಲಕರ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ. ಎಸ್. ಮುರಳೀಧರ್ ಅಭಿಪ್ರಾಯಪಟ್ಟರು.
ನಗರದ ಟಿ.ಚನ್ನಯ್ಯರಂಗ ಮಂದಿರದಲ್ಲಿ ಜಿಲ್ಲಾ ಆಡಳಿತದಿಂದ ಹಮ್ಮಿಕೊಂಡಿದ್ದ ಮತದಾರರ ದಿನಾಚರಣೆಯಲ್ಲಿ ಮತದಾನದ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ದೇಶದಲ್ಲಿ 2013ರ ಮತದಾರರ ಪಟ್ಟಿಗೆ 76 ಕೋಟಿ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಯಶಸ್ಸು ಮತದಾನದ ಮೇಲೆ ನಿಂತಿದೆ. ಪ್ರಜ್ಞಾವಂತ ಯುವ ಮತದಾರರು ಕಡ್ಡಾಯವಾಗಿ ಮತದಾನದ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ರಕ್ಷಿಸಬೇಕೆಂದರು.
ಮತದಾನಕ್ಕಾಗಿ ಈಗ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮತದಾರರು ಇದರ ಬಗ್ಗೆ ತಿಳಿವಳಿಕೆ ಪಡೆಯುವುದರ ಜತೆಗೆ, ಮತದಾನ ಮರೆತು ನಂತರ ಪಶ್ಚಾತ್ತಾಪ ಪಡಬಾರದು ಎಂದು ಹೇಳಿದರು. ರಾಜಕೀಯಕ್ಕೆ ಸಭ್ಯರು ಬರುವುದು ಕಡಿಮೆ ಆಗುತ್ತಿದೆ. ಇದಕ್ಕೆ ಮತದಾನ ವ್ಯವಸ್ಥೆಯಲ್ಲಿ ಇರುವ ಲೋಪ ಕಾರಣವಾಗಿದೆ. ಸಮಸ್ಯೆಗಳು ಕಂಡಾಗ ಜನಪ್ರತಿನಿಧಿ ಸರಿಯಿಲ್ಲವೆಂದು ದೂರುವ ಬದಲು ಕಡ್ಡಾಯ ಮತದಾನದ ಮೂಲಕ ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿದಲ್ಲಿ ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಗೆ ಅನುಕೂಲವಾಗುತ್ತದೆ ಎಂದರು.
ಮತದಾನ ಮಾಡಿ: ದೇಶದ ಭವಿಷ್ಯ ಹಾಗೂ ಮುಂದಿನ ಜನಾಂಗದ ಅನುಕೂಲಕ್ಕಾಗಿ ಪ್ರತಿಯೊಬ್ಬರು ಮತದಾನದ ಹಕ್ಕನ್ನು ಚಲಾಯಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳು ಎಂದು ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ತಿಳಿಸಿದರು.
ಭಾರತೀಯ ಸಂವಿಧಾನದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ನೀಡಿರುವ ಮತದಾನದ ಹಕ್ಕನ್ನು ಪ್ರಜ್ಞಾಪೂರ್ವಕವಾಗಿ ನಮ್ಮ ಮನಸಾಕ್ಷಿಗೆ ಅನುಗುಣವಾಗಿ ಚಲಾಯಿಸಿದರೆ ದೇಶ ಎದುರಿಸುತ್ತಿರುವ ಅನೇಕ ಸಮಸ್ಯೆ ಕಡಿಮೆಗೊಳಿಸುವ ಅವಕಾಶವಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ನಿರ್ವಹಣೆ, ಅಭಿವೃದ್ಧಿಯ ಸೂತ್ರದಾರ ಮತದಾರರು ತಮ್ಮ ಹಕ್ಕು ಮತ್ತು ಕರ್ತವ್ಯವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ತಿಳಿಸಿದರು.
ದೇಶದಲ್ಲಿ ಈಗ 76 ಕೋಟಿ ಮತದಾರರಿದ್ದು, ರಾಜ್ಯದಲ್ಲಿ 3.19 ಕೋಟಿ ಮತದಾರರಿದ್ದಾರೆ. ಕೋಲಾರ ಜಿಲ್ಲೆಯಲ್ಲಿ 5.22 ಲಕ್ಷ ಪುರುಷರು, 5.02 ಲಕ್ಷ ಮಹಿಳೆಯರು ಸೇರಿ 10.24 ಲಕ್ಷ ಮತದಾರರಿದ್ದಾರೆ. ಜಿಲ್ಲೆಯಲ್ಲಿ ಶೇ.99.26 ರಷ್ಟು ಎಪಿಕ್ ಕಾರ್ಡ್ ವಿತರಿಸಲಾಗಿದೆ ಎಂದರು.
ಮತದಾರರಿಗೆ ಭಾವಚಿತ್ರವುಳ್ಳ ಗುರುತಿನ ಚೀಟಿ ವಿತರಿಸಲಾಯಿತು. ಬಾಲಕರ ಸರ್ಕಾರಿ ಕಿರಿಯ ಕಾಲೇಜಿನ ಪ್ರಾಂಶುಪಾಲ ವೆಂಕಟಸ್ವಾಮಿ ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮತಗಟ್ಟೆ ಹಂತದ ಅಧಿಕಾರಿಗಳಿಗೆ, ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ನಿವಾಸ್ ಸಪಟ್, ಅಪರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ಉಪ ವಿಭಾಗಾಧಿಕಾರಿ ಆಯಿಷಾ ಪರ್ವೀನ್, ಪದವಿ ಪೂರ್ವ ಕಾಲೇಜಿನ ಉಪ ನಿರ್ದೇಶಕ ಎಂ.ಜಿ. ದೊರೆಸ್ವಾಮಿ, ಡಿಡಿಪಿಐ ಪದ್ಮನಾಭ್, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ನಾಗರಾಜಗೌಡ, ಚುನಾವಣಾ ಶಾಖೆಯ ರಾಘವೇಂದ್ರರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ವೆಂಕಟಾಚಲಪತಿ, ಕ್ರೀಡೆ ಮತ್ತು ಯುವ ಜನ ಸೇವಾ ಇಲಾಖೆಯ ಅಧಿಕಾರಿ ರುದ್ರಪ್ಪ, ಚುನಾವಣಾ ಶಾಖೆಯ ರಾಘವೇಂದ್ರ ರಾವ್, ಎಸಿ ಕಚೇರಿಯ ತಹಸೀಲ್ದಾರ್ ನಾಗರಾಜು ಇದ್ದರು. ಶಿಕ್ಷಣಾಧಿಕಾರಿ ಅಶೋಕ ನಿರೂಪಿಸಿ, ತಹಸೀಲ್ದಾರ್ ಜಯಮಾಧವ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments