ರೈಲು ಯೋಜನೆಗೆ ಭೂಮಿ ನೀಡಲ್ಲ
ಕೋಲಾರ: ರೈತರ ಭೂಮಿ ಕಸಿದುಕೊಂಡು ಕೋಲಾರ- ವೈಟ್ಫೀಲ್ಡ್ ನಡುವೆ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಮುಂದಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕ್ರಮ ಅವೈಜ್ಞಾನಿಕವಾಗಿದ್ದು, ಕೂಡಲೇ ಯೋಜನೆ ಕೈಬಿಡಬೇಕೆಂದು ರೈಲು ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ವನರಾಸಪ್ಪ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂತನ ರೈಲು ಮಾರ್ಗ ಯೋಜನೆ ತಾಲೂಕಿನ ಜನತೆಗೆ ಅನ್ಯವಶಕವಾಗಿದ್ದರೂ ರೈತರ ಜಮೀನನ್ನು ಕಿತ್ತುಕೊಂಡು ಒಕ್ಕಲೆಬ್ಬಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ಸುಮಾರು 200 ವರ್ಷಗಳ ಹಿಂದೆಯೇ ಬ್ರಿಟೀಷರು ಬಂಗಾರಪೇಟೆಯಿಂದ ವೈಟ್ಫೀಲ್ಡ್ವರೆಗೆ ರೈಲು ಸಂಪರ್ಕ ಕಲ್ಪಿಸಿದ್ದಾರೆ. ಕೋಲಾರದಿಂದ ವೈಟ್ಫೀಲ್ಡ್ಗೆ 46 ಕಿಮಿ ಆಗಲಿದೆ. ಅದೇ ಬಂಗಾರಪೇಟೆಯಿಂದ ವೈಟ್ ಫೀಲ್ಡ್ಗೆ 56 ಕಿಮೀ ದೂರವಿದ್ದು, ಕೇವಲ 10 ಕಿಮೀ ದೂರಕ್ಕೆ ಕೋಟ್ಯಂತರ ರು. ವೆಚ್ಚ ಮಾಡುವ ಬದಲು ಅದೇ ಹಣವನ್ನು ಶಾಶ್ವತ ನೀರಾವರಿ ಯೋಜನೆಗೆ ಬಳಕೆ ಮಾಡಿದಲ್ಲಿ ರೈತರು ನೆಮ್ಮದಿಯಿಂದ ಬದುಕಲು ಸಹಾಯ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ರೈತರ ವಿರೋಧದ ನಡುವೆಯೂ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾದರೆ ಪ್ರಾಣ ಬಿಡುವುದಕ್ಕೂ ನಾವು ಸಿದ್ಧ. ಆದರೆ, ಒಂದು ಇಂಚು ಭೂಮಿಯನ್ನು ಯೋಜನೆಗೆ ಕೊಡುವುದಿಲ್ಲವೆಂದು ಎಚ್ಚರಿಕೆ ನೀಡಿದರು.
ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರ ಸಂಬಂಧಿಕರಿಗೆ ಸೇರಿದ 40 ಎಕರೆ ಭೂಮಿ ಅಮ್ಮೇರಹಳ್ಳಿಯಲ್ಲಿದೆ. ಈ ಜಾಗಕ್ಕೆ ತೊಂದರೆ ಆಗದಂತೆ ಯೋಜನೆ ರೂಪಿಸಲಾಗಿದೆ. ಇದರಿಂದ ಬಡ ರೈತರ ಭೂಮಿ ಹೋಗುತ್ತದೆ. ನಮಗೆ ಭೂಮಿ ಬಿಟ್ಟರೆ ಬದುಕುವುದಕ್ಕೆ ಬೇರೆ ಯಾವುದೇ ಮಾರ್ಗವಿಲ್ಲವೆಂದು ತಿಳಿಸಿದರು. ನಮಗೆ ಪರಿಹಾರ ಬೇಕಾಗಿಲ್ಲ. ಭೂಮಿ ಸಾಕು. ನೀರು ಕೊಟ್ಟರೆ ರೈತರ ಬದುಕು ಸುಧಾರಿಸುತ್ತದೆ. ನೀರಿಗಾಗಿ ಬೇಕಾದರೆ ಉಚಿತವಾಗಿ ಭೂಮಿ ನೀಡುತ್ತೇವೆ. ರೈಲಿಗೆ ಇಂಚು ಭೂಮಿ ನೀಡಲ್ಲ. ರಾಜಕಾರಣಿಗಳು ಪೊಳ್ಳು ಭರವಸೆ ಮೇಲೆ ನಮಗೆ ನಂಬಿಕೆಯಿಲ್ಲ. ರೈಲು ಮಾರ್ಗಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು. ಸಮಿತಿಯ ಕಾರ್ಯದರ್ಶಿ ಕೆಂಚೇಗೌಡ, ಮುಖಂಡರಾದ ವೆಂಕಟೇಶಪ್ಪ, ಡಿ.ಕೃಷ್ಣಪ್ಪ, ರಮೇಶ್ ಇನ್ನಿತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.