ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶೋಷಣೆಗೆ ಅನಕ್ಷರತೆ ಕಾರಣ

Parashurama
Updated On : 26 Jan 2013, 12:46 pm

ಚಿಕ್ಕಬಳ್ಳಾಪುರ: ಸಮಾಜದಲ್ಲಿ ಶೋಷಿತ ವರ್ಗಗಳು ಇಂದಿಗೂ ಹಿಂದುಳಿಯುತ್ತ ಇನ್ನೂ ಶೋಷಣೆಗೆ ಗುರಿಯಾಗುತ್ತಿರುವುದಕ್ಕೆ ಶಿಕ್ಷಣ ಮತ್ತು ಸಂಘಟನೆಯ ಕೊರತೆಯೇ ಪ್ರಮುಖ ಕಾರಣ. ಇದರಿಂದ ಮುಕ್ತರಾಗಿ ಎಲ್ಲರಂತೆ ಸಮಾನವಾಗಿ ಬಾಳುವಂತಾಗಲು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು, ಜತೆಗೆ ಸಂಘಟಿತರಾಗಬೇಕೆಂದು ಛಲವಾದಿ ಮಹಾಸಭಾ ಸಂಸ್ಥಾಪಕ, ಬೆಂಗಳೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತ ಕೆ. ಶಿವರಾಂ ಮನವಿ ಮಾಡಿದರು.
ನಗರದ ನಂದಿ ರಂಗಮಂದಿರದಲ್ಲಿ ಛಲವಾದಿ ಮಹಾಸಭಾ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮಾತನಾಡಿದರು.
ಶಿಕ್ಷಣ ಪಡೆದು ಐಎಎಸ್ ಓದಿ ಉನ್ನತ ಸ್ಥಾನ ಅಲಂಕರಿಸದಿದ್ದ ಪಕ್ಷದಲ್ಲಿ ತಮಗೂ ಗೌರವ ಸಿಗುತ್ತಿರಲಿಲ್ಲ. ಬಡತನದಲ್ಲಿ ನಲುಗುತ್ತಿದ್ದ ಸಂದರ್ಭದಲ್ಲೂ ಎದೆಗುಂದದೆ ಶಿಕ್ಷಣ ಪಡೆದ ಹಿನ್ನೆಲೆಯಲ್ಲಿ ತಾವು ಉನ್ನತ ಸ್ಥಾನ ಪಡೆಯಲು ಸಾಧ್ಯವಾಯಿತು. ಅದೇ ರೀತಿ ಸಮಾಜದಲ್ಲಿ ತಮಗೆ ಸಿಗಬೇಕಾದ ಸವಲತ್ತು ಪಡೆದುಕೊಳ್ಳಲು, ದೌರ್ಜನ್ಯ ಮತ್ತು ಅನ್ಯಾಯ ಮೆಟ್ಟಿ ನಿಲ್ಲುವಂತಾಗಲು ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕೆಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಸಹ ಮೊದಲು ಶಿಕ್ಷಣ ಪಡೆಯಬೇಕು, ಸಂಘಟನೆ, ನಂತರ ಹೋರಾಟ ನಡೆಸಬೇಕೆಂದು ಪ್ರತಿಪಾದಿಸಿದ್ದರು. ಅದೇ ರೀತಿ ಶೋಷಿತ ವರ್ಗಗಳಲ್ಲಿ ಶಕ್ತಿ ತುಂಬುವ ನಿಟ್ಟಿನಲ್ಲಿ ಹೋರಾಟದ ಮೂಲಕ ಚೈತನ್ಯ ರಥ ಎಳೆದುಕೊಂಡು ಇಲ್ಲಿಯವರೆಗೂ ಬಂದಿದ್ದೇನೆ. ನಿಮಗೆ ತಾಕತ್ತಿದ್ದರೆ ಇನ್ನೂ ಮುಂದಕ್ಕೆ ಎಳೆದುಕೊಂಡು ಹೋಗಿ. ಆದರೆ, ಯಾವುದೇ ಕಾರಣಕ್ಕೂ ಹಿಂದಕ್ಕೆ ಎಳೆದುಕೊಂಡು ಹೋಗಬೇಡಿ ಎಂದೇಳಿದ್ದಾರೆ. ಇದನ್ನು ನಾವು ಅರ್ಥ ಮಾಡಿಕೊಂಡು ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕಾಗಿದೆ ಎಂದರು.
ನಿವೃತ್ತ ವೈದ್ಯೆ ಆರ್.ಕೆ. ಸರೋಜಮ್ಮ ಮಾತನಾಡಿ, ಮನೆಗಳಲ್ಲಿ ಯಜಮಾನನೇ ಹೆಂಡಕ್ಕೆ ದಾಸನಾಗಿ, ಬೀಡಿ ಸಿಗರೇಟು ಸೇದುತ್ತ ಸದಾ ಗಲಾಟೆ ಮಾಡುತ್ತಿರುವಾಗ ಮಕ್ಕಳು ಇನ್ನೆಲ್ಲಿ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಲು ಸಾಧ್ಯ. ಆದರೆ, ಮೇಲ್ವರ್ಗದವರ ಮನೆಗಳಲ್ಲಿ ಮಕ್ಕಳು ಓದಲು ಉತ್ತಮ ವಾತಾವರಣ ನಿರ್ಮಾಣ ಮಾಡುವುದರಿಂದ ಅವರು ಎಲ್ಲಾ ರೀತಿಯಲ್ಲೂ ಪ್ರಗತಿ ಸಾಧಿಸುತ್ತಾರೆ. ಇಂತಹ ಬದಲಾವಣೆ ಶೋಷಿತ ವರ್ಗಗಳ ಕುಟುಂಬಗಳಲ್ಲೂ ಆಗಬೇಕೆಂದರು.
ಇದಕ್ಕೂ ಮುನ್ನ ನಗರದ ಪ್ರಮುಖ ರಸ್ತೆಯಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಛಲವಾದಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರೆಡ್ಡಿ, ಜಿಲ್ಲಾಧ್ಯಕ್ಷ ತ್ಯಾಗರಾಜ್, ಉಪಾಧ್ಯಕ್ಷ ಕೃಷ್ಣಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಮಾರಪ್ಪ, ಸಂಘಟನಾ ಕಾರ್ಯದರ್ಶಿ ಮರಿಯಪ್ಪ, ನಿರ್ದೇಶಕ ಶ್ರೀನಿವಾಸ್, ಜಿಲ್ಲಾಧ್ಯಕ್ಷೆ ಮಂಜುಳಾ, ಮುಖಂಡ ಡಿ.ಆರ್.ನಂಜುಂಡಪ್ಪ ಮುಂತಾದವರು ಭಾಗವಹಿಸಿದ್ದರು.
ಗೈರಿಗೆ ಅಸಮಾಧಾನ: ಛಲವಾದಿ ಸಮಾವೇಶಕ್ಕೆ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ವಿಧಾನಪರಿಷತ್ ಸದಸ್ಯೆ ಮೋಟಮ್ಮ, ಜಿಲ್ಲೆಯ ಶಾಸಕರು ಮತ್ತು ನಾನಾ ಪಕ್ಷದ ಮುಖಂಡರನ್ನು ಆಹ್ವಾನಿಸಲಾಗಿತ್ತು. ಆದರೆ, ಇವರೆಲ್ಲಾ ಗೈರು ಹಾಜರಾಗಿದ್ದರು. ಕೇವಲ ಸಂಘಟನೆಯ ಹಿರಿಯ ಮುಖಂಡರು ಮಾತ್ರ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಸಮಾವೇಶದಲ್ಲಿ ಗೈರು ಹಾಜರಿಗೆ ಅಸಮಾಧಾನ ವ್ಯಕ್ತವಾಯಿತು. ಸಂಘಟನೆ ದುರ್ಬಲ ಎಂದುಕೊಂಡು ಹಲವರು ಭಾಗವಹಿಸಿಲ್ಲ. ಇವರಿಗೆ ತಕ್ಕ ಪಾಠ ಕಲಿಸಬೇಕೆಂಬ ಕರೆಯನ್ನೂ ನೀಡಲಾಯಿತು. ಇದರ ಜತೆಗೆ ಕೆಲವರು ಸಮಾವೇಶ ನಡೆಯುವುದರ ಬಗ್ಗೆ ಗೊಂದಲ ಮೂಡಿಸುವ ಕೆಲಸ ಮಾಡಿರುವುದರ ಬಗ್ಗೆಯೂ ಪ್ರಸ್ತಾಪವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments