ಜೆಡಿಎಸ್ ಅಭ್ಯರ್ಥಿ ಆಯ್ಕೆಗಾಗಿ ಮೂರು ತಂಡ
ಕೋಲಾರ: ಮುಂಬರುವ ಚುನಾವಣೆಗೆ ರಾಜ್ಯಾದ್ಯಂತ ಜೆಡಿಎಸ್ ಅಭ್ಯರ್ಥಿಗಳನ್ನು ಯಾವುದೇ ಗೊಂದಲ, ಭಿನ್ನಮತಕ್ಕೆ ಅವಕಾಶವಿಲ್ಲದೆ ಆಯ್ಕೆ ಮಾಡುವುದಕ್ಕಾಗಿ ಪಕ್ಷದ ಹಿರಿಯ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಹಿರಿಯ ಮುಖಂಡರನ್ನು ಒಳಗೊಂಡ ಮೂರು ಸಮಿತಿ ರಚನೆ ಮಾಡಿದ್ದಾರೆ.
ಈ ಸಮಿತಿಗೆ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಜಮೀರ್ ಅಹಮ್ಮದ್ ಹಾಗೂ ಸಂಸದ ಎನ್. ಚಲುವರಾಯಸ್ವಾಮಿ ಅವರನ್ನು ನೇಮಿಸಲಾಗಿದ್ದು, ಈ ಮೂವರು ಮುಖಂಡರು ತಮಗೆ ನಿಗದಿಪಡಿಸುವ ಕ್ಷೇತ್ರಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಹಾಗೂ ಟಿಕೆಟ್ ಅಕಾಂಕ್ಷಿತರ ಅಭಿಪ್ರಾಯ ಸಂಗ್ರಹಣೆ ಮಾಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ವರದಿ ನೀಡಿದ ಬಳಿಕ ಚುನಾವಣಾ ಸಮಿತಿಯ ಸಭೆಯಲ್ಲಿ ಅಂತಿಮ ನಿರ್ಧಾರ ಪ್ರಕಟಿಸಲು ಉದ್ದೇಶಿಸಲಾಗಿದೆ.
ಕಳೆದ ಡಿಸೆಂಬರ್ 10ರಂದೇ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲು ಜೆಡಿಎಸ್ ವರಿಷ್ಠರು ನಿರ್ಧರಿಸಿದ್ದರಾದರೂ ಕಾರಣಾಂತರಗಳಿಂದ ಟಿಕೆಟ್ ಹಂಚಿಕೆ ಪ್ರಕ್ರಿಯೆ ಮುಂಡೂಡಲಾಗಿತ್ತು. ಇದಲ್ಲದೆ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದ ಪ್ರಬಲ ಅಕಾಂಕ್ಷಿ ಕೋಡಿಹಳ್ಳಿ ಮಂಜುನಾಥಗೌಡ ಅವರು ಜ.10 ರಂದು ಧರ್ಮಸ್ಥಳಕ್ಕೆ ತಮ್ಮ ಬೆಂಬಲಿಗರನ್ನು ಕಳುಹಿಸಿಕೊಡುವ ಕಾರ್ಯಕ್ರಮಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಂದ ಚಾಲನೆ ಕೊಡಿಸಲು ಕರೆತಂದ ಸಂದರ್ಭದಲ್ಲಿ ಅನಿತಾ ಕುಮಾರಸ್ವಾಮಿ ಅವರು, ಮಂಜುನಾಥಗೌಡರೇ ಮಾಲೂರು ಕ್ಷೇತ್ರದ ಜೆಡಿಎಸ್ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು.
ಇದರಿಂದ ಮತ್ತೊಬ್ಬ ಅಕಾಂಕ್ಷಿ ಪ್ರಭಾಕರ್ ಅವರು ತೀವ್ರ ಅಸಮಾಧಾನಗೊಂಡ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ದೂರು ನೀಡುವ ಮೂಲಕ ಮಂಜುನಾಥಗೌಡರಿಗೆ ಟಿಕೆಟ್ ನೀಡದಂತೆ ಒತ್ತಾಯಿಸಿದ್ದರು. ಜತೆಗೆ ತಮ್ಮ ಬೆಂಬಲಿಗರ ಸಭೆ ನಡೆಸಿ ಪಕ್ಷದ ವರಿಷ್ಠರಿಗೆ ತಲೆ ಬಿಸಿ ಮಾಡಿದ್ದರು.
ಇದಾದ ಬಳಿಕ ಜ. 19 ರಂದು ಪ್ರಭಾಕರ್ ಅವರನ್ನು ಬೆಂಗಳೂರಿಗೆ ಕರೆಸಿಕೊಂಡ ಕುಮಾರಸ್ವಾಮಿ ಅವರು, ಸಮಾಧಾನದಿಂದ ಇರುವಂತೆ ಹೇಳಿದ್ದರಲ್ಲದೆ, ಜ. 23ಕ್ಕೆ ಮತ್ತೆ ಸಭೆ ಸೇರಿ ಸಮಸ್ಯೆ ನಿವಾರಣೆ ಮಾಡುವುದಾಗಿ ಹೇಳಿದ್ದರಾದರೂ ಬಿಜೆಪಿ ಮತ್ತು ಕೆಜೆಪಿ ನಡುವೆ ಉಂಟಾದ ರಾಜಕೀಯ ತಿಕ್ಕಾಟದಿಂದಾಗಿ ಅಂದೂ ಸಭೆ ನಡೆಯಲು ಸಾಧ್ಯವಾಗಲಿಲ್ಲ.
ಜತೆಗೆ ಕೆಜೆಪಿ ತಂತ್ರ ಫಲಿಸುತ್ತಿಲ್ಲವಾದ್ದರಿಂದ ಬಿಜೆಪಿ ಸರ್ಕಾರ ಉರುಳುವುದು ಸದ್ಯಕ್ಕೆ ಅನುಮಾನ. ಜತೆಗೆ ಮೂರು ತಿಂಗಳ ಮುಂಚೆಯೇ ಅಭ್ಯರ್ಥಿಗಳನ್ನು ಘೋಷಣೆ ಮಾಡಿ, ನಂತರ ಏನಾದರೂ ಎಡವಟ್ಟು ಆದಲ್ಲಿ ಪಕ್ಷಕ್ಕೆ ಹಾನಿ ಆಗುತ್ತದೆ ಎಂಬ ಮುಂದಾಲೋಚನೆಯಿಂದ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಮಾಲೂರಿನಿಂದ ಹಾಗೂ ಕೋಲಾರದಿಂದ ಹೋಗಿದ್ದ ಮುಖಂಡರೊಂದಿಗೆ ಚರ್ಚಿಸಿ, ಸದ್ಯಕ್ಕೆ ಯಾವುದೇ ಅಭ್ಯರ್ಥಿಯ ಹೆಸರು ಪ್ರಕಟ ಮಾಡಲ್ಲ. ಫೆ.13 ನಂತರ ರಾಜ್ಯದ ರಾಜಕೀಯ ಪರಿಸ್ಥಿತಿ ನೋಡಿ ಅಭ್ಯರ್ಥಿಗಳ ಘೋಷಣೆ ಮಾಡುತ್ತೇವೆ. ಜತೆಗೆ ಮಾಲೂರು ಸೇರಿದಂತೆ ರಾಜ್ಯದ ಇನ್ನಿತರ ಕಡೆಯೂ ಟಿಕೆಟ್ ಆಕಾಂಕ್ಷಿಗಳ ಒತ್ತಡ, ಅಸಮಾಧಾನ ಕಂಡು ಬಂದಿರುವುದರಿಂದ ಯಾವುದೇ ಗೊಂದಲ, ವಿವಾದಕ್ಕೆ ಅಸ್ಪದ ಇಲ್ಲದೆ ಟಿಕೆಟ್ ಹಂಚಿಕೆ ಪ್ರತ್ರಿಯೆ ಆರಂಭಿಸಲು ಮೂರು ಮಂದಿ ಹಿರಿಯ ಮುಖಂಡರ ಸಮಿತಿ ರಚನೆ ಮಾಡಿದ್ದು, ಅವರು ರಾಜ್ಯದಲ್ಲಿ ಪ್ರವಾಸ ಮಾಡಿ ವರದಿ ನೀಡಿದ ಬಳಿಕ ಅಭ್ಯರ್ಥಿಗಳ ಆಯ್ಕೆ ಮಾಡುವುದಾಗಿ ಹೇಳಿ ಕಳುಹಿಸಿದ್ದಾರೆ.
ಕಾರ್ಯಾಧ್ಯಕ್ಷರ ಸ್ಪಷ್ಟನೆ: ಮಾಲೂರು ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷದಲ್ಲಿ ಗೊಂದಲ ಉಂಟಾಗಿದ್ದು ನಿಜ. ಈ ಕಾರಣಕ್ಕಾಗಿಯೇ ನಮ್ಮ ನಾಯಕರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಸಮಸ್ಯೆ ನಿವಾರಣೆ ಮಾಡಲು ಸಮಿತಿ ರಚನೆ ಮಾಡಿದ್ದಾರೆ. ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಮಾಜಿ ಸಚಿವ ಜಮೀರ್ ಅಹಮ್ಮದ್ ಅವರನ್ನು ನೇಮಿಸಲಾಗಿದ್ದು, ಇವರು ಎರಡೂ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಮಾಡಿ ವರಿಷ್ಠರಿಗೆ ವರದಿ ನೀಡಿದ ನಂತರ ಅಂತಿಮ ನಿರ್ಧಾರ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.
ಬಂಗಾರಪೇಟೆ ಕ್ಷೇತ್ರಕ್ಕೆ ರಾಮಚಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಈಗಾಗಲೇ ಘೋಷಣೆ ಮಾಡಲಾಗಿದೆ. ಅಲ್ಲಿನ ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ ಬಿಜೆಪಿ ತೊರೆದು ನಮ್ಮ ಪಕ್ಷಕ್ಕೆ ಬರಲು ನಿಶ್ಚಯಿಸಿದ್ದಾರೆ. ಪಕ್ಷಕ್ಕೆ ಬರುವುದಕ್ಕೆ ನಮ್ಮ ಸ್ವಾಗತವಿದೆ. ಆದರೆ, ಟಿಕೆಟ್ ನಿರೀಕ್ಷೆ ಮಾಡುವುದು ಸೂಕ್ತವಲ್ಲ. ಪಕ್ಷ ಸಂಘಟನೆಗೆ ಶ್ರಮಿಸಲಿ, ರಾಮಚಂದ್ರಪ್ಪ ಗೆಲವಿಗೆ ಬೆಂಬಲ ನೀಡಿ ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಪಡೆಯುವುದು ಸೂಕ್ತವೆಂದು ಸ್ಪಷ್ಟನೆ ನೀಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.