ಹೆಜ್ಜೇನು ದಾಳಿ: 15 ಮಂದಿಗೆ ಗಾಯ
ಮಾಲೂರು: ತಾಲೂಕಿನ ಕುಂದೇನಹಳ್ಳಿ ಗ್ರಾಮದ ಮುನೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಲು ತೆರಳಿದ್ದ ಭಕ್ತರ ಮೇಲೆ ಹೆಜ್ಜೇನು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮಕ್ಕಳು ಸೇರಿದಂತೆ 15 ಮಂದಿಗೆ ಗಾಯಗಳಾದ ಘಟನೆ ಭಾನುವಾರ ನಡೆದಿದೆ. ತಾಲೂಕಿನ ಕಾಟೇರಿ ಗ್ರಾಮದವರು ಕುಂದೇನಹಳ್ಳಿಯಲ್ಲಿರುವ ಮುನೇಶ್ವರ ದೇವಾಲಯದಲ್ಲಿ ಹರಕೆ ಸಲ್ಲಿಸುವ ಸಲುವಾಗಿ ಮಾಡಲಾಗುತ್ತಿದ್ದ ಅಡುಗೆಗಾಗಿ ಹಾಕಲಾಗಿದ್ದ ಬೆಂಕಿಯ ಬಿಸಿ ಹೊಗೆಗೆ ಹತ್ತಿರದ ಮರದಲ್ಲಿದ ಹೆಜ್ಜೇನುಗಳು ಭಕ್ತರ ಮೇಲೆ ದಾಳಿ ನಡೆಸಿದವು. ಹೆಜ್ಜೇನು ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಸೋಮ, ಗಾಯಿತ್ರಿ, ಆಂಜಿನಮ್ಮ, ವಿನಯ್, ಸುಷ್ಮ, ನಿತ್ಯ, ರಕ್ಷಿತ, ನಿತೇಶ್, ಸಿಂಧು, ಪ್ರೀತಿ, ಚೈತ್ರ, ಚಿತ್ರಾ, ರಶ್ಮಿ, ಚೈತ್ರ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು.ತೀವ್ರವಾಗಿ ಹೆಜ್ಜೇನು ಕಡಿತಕ್ಕೆ ಒಳಗಾಗಿದ್ದ ಸೋಮನ ಸ್ಥಿತಿ ಗಂಭಿರವಾಗಿದ್ದು,ಅತನನ್ನು ಬಿಟ್ಟು ಉಳಿದವರನ್ನು ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಫುಟ್ಬಾಲ್ ಪಂದ್ಯಕ್ಕೆ ಚಾಲನೆ
ಕೆಜಿಎಫ್: ಯುವ ಸಮುದಾಯ ದೇಶವನ್ನು ಕಾಪಾಡಲು ಹಾಗೂ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೊಂದಲು ವ್ಯಾಯಾಮ ಹಾಗೂ ಕ್ರೀಡೆಗಳಿಂದ ಸಾಧ್ಯ ಎಂದು ಮಾಜಿ ಶಾಸಕ ಹಾಗೂ ಆರ್ಪಿಐ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಸ್.ರಾಜೇಂದ್ರನ್ ಹೇಳಿದರು. ನಗರದ ಮಳಯಾಳಿ ಮೈದಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕಪ್ನ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ದೇಶದ ಮುಂದಿನ ಆಸ್ತಿ ಯುವ ಸಮುದಾಯದವಾಗಿದ್ದು, ಯುವ ಶಕ್ತಿಯನ್ನು ಜಾಗೃತಿಗೊಳಿಸಲು ಕ್ರೀಡೆಗಳು ಹೆಚ್ಚು ಸಹಾಯಕಾರಿಯಾಗಲಿದೆ. ಈ ಕಾರಣಕ್ಕಾಗಿ ತಾವು ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿ ಏರ್ಪಡಿಸಿರುವುದಾಗಿ ತಿಳಿಸಿದರು. ಮುಖಂಡರಾದ ಸತ್ಯಮೂರ್ತಿ, ಶಿವಳ್ಳಿ, ಷಣ್ಮುಗಂ, ವೆಂಕಟೇಶಗೌಡ, ನಗರಸಭಾ ಸದಸ್ಯೆ ತಂಗತಾಯಿ ಸೇರಿದಂತೆ ಆರ್ಪಿಐ ಪಕ್ಷದ ಕಾರ್ಯಕರ್ತರು ಇದ್ದರು.
ಚಾಲನೆ
ಮುಳಬಾಗಲು: ಪಟ್ಟಣದ ಶಿವಕೇಶವ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸರ್ಕಾರದ ಯೋಜನೆಯ ಅಂಗವಾಗಿ ಮಕ್ಕಳಿಗೆ ಮುದ್ದೆ ನೀಡುವ ಕಾರ್ಯಕ್ರಮಕ್ಕೆ ತಾಪಂ ಉಪಾಧ್ಯಕ್ಷ ಸಿ.ವಿ. ಗೋಪಾಲ್ ಚಾಲನೆ ನೀಡಿದರು. ನಂತರ ಮಕ್ಕಳೊಂದಿಗೆ ಕಾರ್ಯಕ್ರಮಕ್ಕೆ ಹಾಜರಾದ ಎಲ್ಲರೂ ಮುದ್ದೆ ಊಟವನ್ನು ಸವಿದರು. ಪುರಸಭೆ ಮಾಜಿ ಸದಸ್ಯ ಠಾಕೂರ್ಸಿಂಗ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಘುನಾಥ್, ಉಪಾಧ್ಯಕ್ಷೆ ದುರ್ಗಮ್ಮ, ಮುಖ್ಯ ಶಿಕ್ಷಕಿ ಆರ್. ಶಾರದಮ್ಮ, ಸೂರ್ಯನಾರಾಯಣಗೌಡ, ರಾಮಪ್ಪ, ಬಸವರಾಜ್ ಅನಂತಶಾಸ್ತ್ರೀ, ನಾರಾಯಣಪ್ಪ ಮುಂತಾದವರು ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.