ಭ್ರಷ್ಟಾಚಾರ ಬಗ್ಗೆ ಜಿಪಂ ಮಾಜಿ ಉಪಾಧ್ಯಕ್ಷೆ ತರಾಟೆ
ಚಿಕ್ಕಬಳ್ಳಾಪುರ: ಜಿಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಕ್ರಮ, ಭ್ರಷ್ಟಾಚಾರಗಳ ಬಗ್ಗೆ ಎಳೆಎಳೆಯಾಗಿ ನಿದರ್ಶನಗಳೊಂದಿಗೆ ಹೇಳುವ ಮೂಲಕ ಜಿಪಂ ಮಾಜಿ ಉಪಾಧ್ಯಕ್ಷೆ ಸಾವಿತ್ರಮ್ಮ ಗಮನ ಸೆಳೆದರು.
ಅಂದಾಜು ಪಟ್ಟಿ ಇಲ್ಲ, ಕ್ರಿಯಾಯೋಜನೆ ಇಲ್ಲ, ಕೆಲಸ ನಡೆದೇ ಇಲ್ಲ. ಆದರೆ, ಬಿಲ್ ಮಂಜೂರು ಮಾಡಲಾಗಿದೆ. ಅದು ಹೇಗೆ, ಇದರ ಬಗ್ಗೆ ಖುದ್ದು ತಾವೇ ದೂರು ನೀಡಿದರೂ ಅಕ್ರಮಗಳಿಗೆ ಕಡಿವಾಣ ಹಾಕಬೇಕಾಗಿರುವ ಅಧಿಕಾರಿಗಳೇ ಕ್ರಮ ಕೈಗೊಳ್ಳದೇ ಸುಮ್ಮನಿರುವುದು ಏತಕ್ಕೆ ಎಂದು ಖಾರವಾಗಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
ಬಾಗೇಪಲ್ಲಿ ತಾಲೂಕಿನ ತಿಮ್ಮಂಪಲ್ಲಿ ಗ್ರಾಮ ಪಂಚಾಯಿತಿಯ ಐವಾರಂಪಲ್ಲಿ ಗ್ರಾಮದಲ್ಲಿ ಸರ್ಕಾರದ ಅನುದಾನದಲ್ಲಿ ಕೊಳವೆ ಬಾವಿ ಕೊರೆಸಿರುವುದು. ಆದರೆ, ಗ್ರಾಪಂ ಅಧ್ಯಕ್ಷರೊಬ್ಬರು 5 ಸಾವಿರಗಳಿಗೆ ನೀರನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಖಾಸಗಿ ಜಮೀನಿನಲ್ಲಿ ಕೊರೆದಿರುವುದರಿಂದ ಕೊಳವೆ ಬಾವಿಯು ಖಾಸಗಿಯವರ ಪಾಲಾಗಿ, ಜನರಿಗೆ ನೀರು ಸಿಗದಂತಾಗಿದೆ. ಹಾಗೆಯೇ ಕೆಲವೆಡೆ ಒಂದೇ ಕೆಲಸಕ್ಕೆ ಎರಡು ಬಿಲ್ ಮಾಡಲಾಗಿದೆ. ಟೆಂಡರ್ನಲ್ಲಿ ಹೇಳಿದಕ್ಕೆ ಬದಲಿಗೆ ಲೋಕಲ್ ಕಂಪನಿಯ ಮೋಟಾರ್ಗಳನ್ನು ಹಾಕಲಾಗಿದೆ. ಇನ್ನೂ ಲೆಕ್ಕದಲ್ಲಿ ಕೊಳವೆ ಬಾವಿಗೆ 25 ಪೈಪ್ ಹಾಕಿರುವುದು. ಆದರೆ, ನಿಜವಾಗಲೂ 15 ಪೈಪ್ಗಳನ್ನೇ ಹಾಕಿರುವುದು ಕಂಡು ಬರುತ್ತದೆ. ತಮ್ಮ ಜಿಪಂ ಕ್ಷೇತ್ರಕ್ಕೆ ಬಂದು ನೋಡಿ ಒಂದು ಸಿಸ್ಟನ್ ಸಹ ಸರಿ ಇಲ್ಲ. ನೀವು ಬೇಕಾದರೆ ಸರಿ ಇರುವುದನ್ನು ಬಂದು ತೋರಿಸಿ, ಅಧಿಕಾರಿಗಳು ಹೇಳುವುದರಲ್ಲಿ ಸರಿ ಇದ್ದರೆ ನಾನೇ ರಾಜಿನಾಮೆ ಕೊಡುತ್ತೇನೆ ಎಂತಲೂ ಸವಾಲು ಹಾಕಿದರು.
ತಾಲೂಕಿನ ಯಲ್ಲಂಪಲ್ಲಿ ಮತ್ತು ಪಟ್ಟವಾರಪಲ್ಲಿ ಗ್ರಾಮದಲ್ಲಿ ಚರಂಡಿ ಕಾಮಗಾರಿ ಕೈಗೊಳ್ಳಲು 3 ಲಕ್ಷ ಬಿಡುಗಡೆ ಮಾಡಿದ್ದು, ಬಿಲ್ ಅನ್ನು ಸಹ ಮಾಡಿ ಕೊಡಲಾಗಿದೆ. ಆದರೆ, ಚರಂಡಿ ಕಾಮಗಾರಿಯೇ ನಡೆದಿಲ್ಲ. ಕೆಲಸವಾಗದೆ ಹೇಗೆ ಹಣ ಕೊಡಲಾಗಿದೆ. ಹೀಗೂ ಬಿಲ್ ಮಾಡಬಹುದಾ, ಅಧಿಕಾರಿಗಳು ಹೀಗೇನಾ ಕೆಲಸ ಮಾಡೋದು, ಹೋಗಲಿ ಈ ಬಗ್ಗೆ ತಾವು ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಇದು ತಮಗೆ ಅರ್ಥವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.