ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮತ್ತೊಮ್ಮೆ ಶಾಸಕನಾದರೆ ಬಡವರ ಉದ್ಧಾರ

Parashurama
Updated On : 29 Jan 2013, 11:35 am

ಕೋಲಾರ: ತಾವು ಶಾಸಕರಾದ ಮೇಲೆ ಕೋಲಾರ ಕ್ಷೇತ್ರದ ಸಮಸ್ತ ಜನತೆ ಶಾಂತಿ- ನೆಮ್ಮದಿಯಿಂದ ಬದುಕುವ ಅವಕಾಶ ಸಿಕ್ಕಿದೆ. ಮುಂದಿನ ಚುನಾವಣೆಯಲ್ಲೂ ಮತದಾರರು ನನ್ನನ್ನು ಕ್ಷೇತ್ರದಲ್ಲಿ ಉಳಿಸಿಕೊಂಡರೆ ಮಾತ್ರ ಬಡವರು ಉದ್ಧಾರವಾಗುತ್ತಾರೆಂದು ಜವಳಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರ್ ಪ್ರಕಾಶ್ ಅಭಿಪ್ರಾಯಪಟ್ಟರು.
ಮಂಗಳವಾರ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ವಕ್ಕಲೇರಿಯಲ್ಲಿ ಹಮ್ಮಿಕೊಂಡಿದ್ದ ವರ್ತೂರ್ ಬಣದ ಬೆಂಬಲಿಗರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಚುನಾವಣೆಗೆ ಇನ್ನು 70 ದಿನ ಮಾತ್ರ ಬಾಕಿ ಉಳಿದಿದೆ. ವಕ್ಕಲೇರಿ ಹೋಬಳಿಗೆ ಸೇರಿದ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ 58 ಹಳ್ಳಿಗಳಲ್ಲಿ 30 ಸಾವಿರ ಮತದಾರರು ಇದ್ದು, ಈ ಪೈಕಿ ತಮಗೆ ಕನಿಷ್ಠ 20 ಸಾವಿರ ಮತಗಳು ಸಿಗುವುದಕ್ಕೆ ಹೋಬಳಿಯ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕೆಂದು ಮನವಿ ಮಾಡಿದರು.
ಕಳೆದ ಚುನಾವಣೆಯಲ್ಲಿ ಜನತೆಯ ಆಶೀರ್ವಾದಿಂದ ನಾನು ಮಾಜಿ ಸಚಿವ ಕೆ. ಶ್ರೀನಿವಾಸಗೌಡರ ವಿರುದ್ಧ 23 ಸಾವಿರ ಮತಗಳ ಅಂತರದಿಂದ ಜಯಭೇರಿ ಭಾರಿಸಿದ್ದೇನೆ. ಮುಂದಿನ ಚುನಾವಣೆಯಲ್ಲಿ ಕನಿಷ್ಠ 60 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿನ ಬಡವರ ಉದ್ಧಾರಕ್ಕೆ ಸಹಕಾರ ನೀಡಬೇಕೆಂದರು.
ಅಪಪ್ರಚಾರ: ಕಳೆದ ನಾಲ್ಕು ವರ್ಷ ಏಳು ತಿಂಗಳಿಂದ ನನ್ನನ್ನು ನಿಮ್ಮ ಮನೆಯ ಮಗನಂತೆ ನೋಡಿಕೊಂಡಿದ್ದೀರಿ. ನಿಮ್ಮ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಎಸಗುವುದಿಲ್ಲ. ವಕ್ಕಲೇರಿ ಹೋಬಳಿಯ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆ ಸಲ್ಲಿಸುತ್ತೇನೆ. ವಸತಿ ಯೋಜನೆಯಡಿ ಮನೆ ಕಟ್ಟದೆ ಇರುವವರಿಗೆ ಮತ್ತೆ ಮಂಜೂರಾತಿ ದೊರಕಿಸಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಮನೆ ಕಟ್ಟಲು ಹಣ ಕೊಡಿಸುವುದಾಗಿ ಭರವಸೆ ನೀಡಿದರಲ್ಲದೆ, ಕುಡಿಯುವ ನೀರಿಗಾಗಿ ವಿಶೇಷ ಪ್ಯಾಕೇಜ್ ಜಾರಿಗೆ ತರುವುದಾಗಿ ಪ್ರಕಟಿಸಿದರು.
ಶ್ರೀನಿವಾಸಗೌಡರು ಮತದಾರರಿಗೆ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಆಸೆ- ಆಮಿಷ ತೋರಿಸಿ ಮತ ಯಾಚಿಸುತ್ತಿದ್ದು, ಇದಕ್ಕೆ ಕ್ಷೇತ್ರದ ಜನತೆ ಬಲಿಯಾಗಬಾರದು. ನನ್ನ ವಿರುದ್ಧ ಜಾತಿ ರಾಜಕಾರಣ ಆರೋಪ ಮಾಡಲಾಗುತ್ತಿದೆ. ಕರೆ- ಕುಂಟೆ ನುಂಗಿದ್ದಾನೆಂದು ಸುಳ್ಳು ಹೇಳುತ್ತಿದ್ದಾರೆ. ಇದ್ಯಾವುದಕ್ಕೂ ಜನತೆ ಕಿವಿಗೊಡಬಾರದು. ಇದೇ ಶ್ರೀನಿವಾಸಗೌಡರು ಹಾಲಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಅವರು ಕೋಲಾರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾಗ ಸುಳ್ಳು ಪ್ರಚಾರ ಮಾಡಿ ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು ಎಂದರು.
ತಾಪಂ ಅಧ್ಯಕ್ಷೆ ಭಾಗ್ಯಲಕ್ಷ್ಮೀ ನಾರಾಯಣಮೂರ್ತಿ, ಉಪಾಧ್ಯಕ್ಷೆ ಸರಸ್ವತಮ್ಮ, ಮಾಜಿ ಅಧ್ಯಕ್ಷೆ ರಮಾದೇವಿ, ವಕ್ಕಲೇರಿ ಗ್ರಾಪಂ ಅಧ್ಯಕ್ಷ ರಾಜಪ್ಪ, ಉಪಾಧ್ಯಕ್ಷೆ ಸಲ್ಮಾ ಮಸ್ತಾನಾ, ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ಸಬೀರ್ ಪಾಷ, ಎಂ.ವಿ.ಎನ್. ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷ ರಘುರಾಂ, ಪ್ರಕಾಶ್, ಸದಸ್ಯರಾದ ರಾಜೇಶ್, ರೌತ್ ಶಂಕರಪ್ಪ, ಶ್ರೀರಾಮಪ್ಪ, ಸೋಮಶೇಖರ್, ನಗರಸಭೆ ಉಪಾಧ್ಯಕ್ಷ ಎಲ್.ಖಲೀಲ್, ಮಾಜಿ ಸದಸ್ಯ ಮುಕ್ಕಡ್ ವೆಂಕಟೇಶ್, ವಕ್ಕಲೇರಿಯ ಸರ್ಕಾರಿ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಜ್ಯೋತಿ ಮುನಿಯಪ್ಪ, ಛತ್ರಕೋಡಿಹಳ್ಳಿ ರಾಜಗೋಪಾಲ್, ಗ್ರಾಪಂ ಸದಸ್ಯ ಹರ್ಷವರ್ಧನ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments