'ವಕ್ಕಲೇರಿಯಲ್ಲಿ ದಾದಾಗಿರಿ ನಡೆಯಲ್ಲ'
ಕೋಲಾರ: ವಕ್ಕಲೇರಿಯ ಹೋಬಳಿಯಲ್ಲಿ ದಾದಾಗಿರಿಗೆ ಅವಕಾಶವಿಲ್ಲ, ಸುಮ್ಮನೆ ಇದ್ದರೆ ಸರಿ, ನನಗೂ ದೊಡ್ಡ ಗುಂಪು ಬೆಂಬಲಕ್ಕೆ ಇದೆ. ಸಣ್ಣ- ಸಣ್ಣ ವಿಚಾರಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಶಾಂತಿ ಭಂಗ ಮಾಡಬೇಡಿ ಎಂದು ವಿರೋಧಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರ್ ಪ್ರಕಾಶ್ ಎಚ್ಚರಿಕೆ ನೀಡಿದರು.
ಮಂಗಳವಾರ ವಕ್ಕಲೇರಿಯಲ್ಲಿ ಹಮ್ಮಿಕೊಂಡಿದ್ದ ಬೆಂಬಲಿಗರ ಸಮಾವೇಶದಲ್ಲಿ ಮಾತನಾಡಿ, ನನಗೆ ಜಾತಿ ಮತ್ತು ದ್ವೇಷ ರಾಜಕಾರಣ ಮಾಡುವುದಕ್ಕೆ ಬರಲ್ಲ. ನಮ್ಮ ಬೆಂಬಲಿಗರ ಮೇಲೆ ದಬ್ಬಾಳಿಕೆ ಮಾಡುವುದಾಗಲಿ, ದಾದಾಗಿರಿ ಮಾಡುವುದಾಗಲಿ ಕಂಡು ಬಂದಲ್ಲಿ ತಕ್ಕ ಪಾಠ ಕಲಿಯಬೇಕಾಗುತ್ತದೆ ಎಂದರು.
ನನ್ನ ಜತೆ ಇದ್ದಾಗ ವಕ್ಕಲೇರಿ ರಾಮು ರಾಜನ ರೀತಿ ಇದ್ದರು. ಜೆಡಿಎಸ್ ಸೇರಿದ ಮೇಲೆ ಅವರ ಹಿಂದೆ ವಕ್ಕಲೇರಿ ಹೋಬಳಿಯ ಯಾವುದೇ ಒಬ್ಬ ಮತದಾರ ಹೋಗಿಲ್ಲ. ಮಾಜಿ ಸಚಿವ ಶ್ರೀನಿವಾಸಗೌಡ ಮತ್ತು ವಕ್ಕಲೇರಿ ರಾಮು ಬಂದ ಮೇಲೆ ಜೆಡಿಎಸ್ ನವರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆಂದು ಹೇಳಿದರು.
ವಕ್ಕಲೇರಿ ಗ್ರಾಮ ಪಂಚಾಯಿತಿ ಮೂಲಕ ಕೆಲವು ಅಭಿವೃದ್ಧಿ ಕೆಲಸ ಮಾಡಿಸಲು ನಮ್ಮ ಬಣಕ್ಕೆ ಸೇರಿದ ಗ್ರಾಪಂ ಅಧ್ಯಕ್ಷ ರಾಜಪ್ಪ ಹಾಗೂ ಸದಸ್ಯರು ಮುಂದಾಗಿದ್ದಾರೆ. ಇದನ್ನು ಸಹಿಸದ ರಾಮು ಮತ್ತು ಜಿಪಂ ಅಧ್ಯಕ್ಷೆಯಾಗಿರುವ ಅವರ ಪತ್ನಿ ಚೌಡೇಶ್ವರಿ ಅವರು ಅಡ್ಡಗಾಲು ಹಾಕಿದ್ದಾರೆಂದು ಆರೋಪಿಸಿ, ಸಣ್ಣ ಕೆಲಸಕ್ಕೆ ಹೋಗಬೇಡಿ ಎಂದು ಹೇಳಿದರು. ರಾಮು ತಮ್ಮ ಬಣ ಬಿಟ್ಟ ಮೇಲೆ ಇಬ್ಬರು ಪ್ರಭಾವಿ ಮುಖಂಡರು ನನಗೆ ಬೆಂಬಲ ನೀಡಿದ್ದಾರೆ. ಹರ್ಷವರ್ಧನ್ ಮತ್ತು ಎಂ.ವಿ.ಎನ್. ಮಂಜುನಾಥ್ ಅವರು ನನ್ನ ಬಣಕ್ಕೆ ಸೇರಿರುವುದರಿಂದ ವಕ್ಕಲೇರಿಯಲ್ಲಿ ರಾಮು ಆಟ ಇನ್ನು ಮುಂದೆ ನಡೆಯಲ್ಲವೆಂದು ತಿಳಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.