ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರ ಸುಲಿಗೆ

Parashurama
Updated On : 29 Jan 2013, 11:29 am

ಚಿಕ್ಕಬಳ್ಳಾಪುರ: ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಲು 2 ಸಾವಿರ, ಮಡಿಲು ಕಿಟ್ ನೀಡಲು 50, ಬಿಪಿಎಲ್ ಕಾರ್ಡ್ ಹೊಂದಿರುವ ಬಡ ರೋಗಿಗಳಿಗೆ ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಲು ಉಚಿತವಾದರೂ 1500 ಹಣವನ್ನು ಅಕ್ರಮವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಜಿಪಂ ಸಾಮಾನ್ಯ ಸಭೆಯಲ್ಲಿ ಮಂಗಳವಾರ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ನಾನು ಪ್ರಶ್ನಿಸಿ ತಿಳಿಸಿದರೂ ಸಹ ನನ್ನ ನಾದಿನಿಗೆ ಹೆರಿಗೆ ಮಾಡಿಸಲು ನನ್ನಿಂದಲೇ 2 ಸಾವಿರ ಪಡೆದುಕೊಂಡರೆಂದು ಸ್ವತಃ ಬಾಗೇಪಲ್ಲಿ ತಾಪಂ ಅಧ್ಯಕ್ಷರೇ ತಮ್ಮ ಅಸಹಾಯಕತೆ ತೋಡಿಕೊಂಡರು.
ಜಿಪಂ ಸಭಾಂಗಣದಲ್ಲಿ ಅಧ್ಯಕ್ಷ ನರಸಿಂಹಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಳೆದ ನವೆಂಬರ್ ತಿಂಗಳಿನಲ್ಲಿ ಸದಸ್ಯರು ಗಮನ ಸೆಳೆದ ಸಮಸ್ಯೆಗಳು, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸದಸ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿನ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು.
ಬಡವರಿಗೆ ತಿಳಿಸುತ್ತಿಲ್ಲ: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಹೆಚ್ಚಾಗಿರುವುದರಿಂದ ಬಡ ರೋಗಿಗಳು ಚಿಕಿತ್ಸೆ ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ದೂರು ಹೇಳುತ್ತಿರುವ ಅವರನ್ನು ಸಮಾಧಾನಪಡಿಸಲು ಸಾಧ್ಯವಾಗುತ್ತಿಲ್ಲ. ಬಿಪಿಎಲ್ ಕಾರ್ಡು ಹೊಂದಿರುವ ಬಡ ರೋಗಿಗಳನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಲು ಹಣವನ್ನು ಕೇಳಲೇಬಾರದು. ಆದರೆ, ಇದು ಬಡವರಿಗೆ ಗೊತ್ತಾಗದೆ ಹಣ ಕೊಡಲು ಆಗದೇ ಪರದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಸೌಲಭ್ಯ ಬಗ್ಗೆ ತಿಳಿಸುವ ನಾಮಫಲಕಗಳನ್ನು ಹಾಕಬೇಕೆಂದು ಹೇಳುತ್ತಿದ್ದರೂ ಕೇಳುತ್ತಿಲ್ಲ ಎಂದು ಸದಸ್ಯ ಸತೀಶ್ ಆರೋಪಿಸಿದರು.
ಇದಕ್ಕೆ ಧ್ವನಿಗೂಡಿಸಿದ ಇತರೆ ಸದಸ್ಯರು, ಹೆರಿಗೆಗೆ 2 ಸಾವಿರ ಕೀಳಲಾಗುತ್ತಿದೆ. ಒಂದು ವೇಳೆ ಕಾಸು ಕೊಡದಿದ್ದರೆ ಬಿಪಿ ಜಾಸ್ತಿಯಾಗಿದೆ. ತುಂಬಾ ಸಿರಿಯಸ್ ಆಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಾಗಹಾಕುವ ಕೆಲಸ ಮಾಡುತ್ತಾರೆ. ದುಡ್ಡು ಕೊಟ್ಟರೆ ಸಮಸ್ಯೆ ಇರುವುದಿಲ್ಲ. ಇಲ್ಲಿಯೇ ಸುಲಭವಾಗಿ ಹೆರಿಗೆಯಾಗುತ್ತದೆ ಎಂದು ಆರೋಪಿಸಿದರು. ಕೂಡಲೇ ಭಕ್ತವತ್ಸಲಂ ಅವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
2 ಕೋಟಿಗೆ ಗಲಾಟೆ: ಒಂದೇ ಪಕ್ಷಕ್ಕೆ (ಕಾಂಗ್ರೆಸ್) ಸೇರಿದ್ದರೂ ಎರಡು ಬಣಗಳಾಗಿರುವ ಗುರುತಿಸಿಕೊಂಡಿರುವ ಸದಸ್ಯರು 2 ಕೋಟಿಯನ್ನು ಜಿಪಂ ಅಭಿವೃದ್ಧಿ ಅನುದಾನ ಕುರಿತು ಪರಸ್ಪರ ವಾಗ್ವಾದ ನಡೆಸಿದರು. ಒಬ್ಬರ ಮೇಲೆ ಮತ್ತೊಬ್ಬರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡರು. ಕಳೆದ ಸಭೆಯಲ್ಲಿ 2 ಕೋಟಿ ಅನುದಾನದಲ್ಲಿ ಸದಸ್ಯರ ಪ್ರತಿ ಕ್ಷೇತ್ರ ಆರೂವರೆ ಲಕ್ಷ ಕೊಟ್ಟು, ಉಳಿದ ಹಣವನ್ನು ಅಧ್ಯಕ್ಷರ ಅನುದಾನದಲ್ಲಿ ಮೀಸಲಿಡಲು ನಿರ್ಧರಿಸಲಾಗಿತ್ತು. ಆದರೆ, ದಾಖಲೆಯಲ್ಲಿ ವಿಷಯ ಪ್ರಸ್ತಾಪಿಸಿ ಚರ್ಚಿಸಲಾಗುತ್ತಿಲ್ಲ. ಬದಲಿಗೆ ಅಂದು ತೀರ್ಮಾನ ಕೈಗೊಂಡಿರುವುದರಲ್ಲಿ ಬದಲಾಗಿದೆ ಎಂದು ಸದಸ್ಯರಾದ ಚಿನ್ನಪ್ಪ, ರಾಘವೇಂದ್ರ ಹನುಮಾನ್, ಎಂ.ವಿ. ಕೃಷ್ಣಪ್ಪ ಆರೋಪಿಸಿದರು.
ನಿಯಮಾನುಸಾರ ಇರದ ಕಾರಣ ಅದು ಅನುಮೋದನೆಯಾಗಿಲ್ಲ. ಈಗ ಸರ್ಕಾರ ಜಿಪಂ ಅಭಿವೃದ್ಧಿ ಅನುದಾನದ ಬದಲಿಗೆ ಜಿಪಂ ಅಧ್ಯಕ್ಷರ ಅನುದಾನ ಎಂದು ಮೀಸಲಿಟ್ಟು ಕೆಲಸ ಮಾಡುವಂತೆ ಆದೇಶ ನೀಡಿದ್ದು, ಈ ಹಿನ್ನೆಲೆಯಲ್ಲಿ ಇದು ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು ಎಂದು ನರಸಿಂಹಮೂರ್ತಿ ಸಮಾಧಾನಪಡಿಸಲು ಮುಂದಾದರು.
ಇದಕ್ಕೆ ಸದಸ್ಯ ಶ್ರೀರಾಮರೆಡ್ಡಿ ಧ್ವನಿಗೂಡಿಸಿದಾಗ ಎರಡೂ ಬಣಗಳ ನಡುವೆ ಗಲಾಟೆ ನಡೆಯಿತು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ಅಶ್ವತ್ಥಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖರಪ್ಪ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಂಜುಳಾ, ಅಮರಾವತಿ, ಸದಸ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments