ಜಿಲ್ಲಾ ಮಟ್ಟದಲ್ಲಿ ಸಮಿತಿಗಳ ರಚನೆ
ಕ.ಪ್ರ.ವಾರ್ತೆ , ಕೋಲಾರ , ಜು. 1
ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ತೊಂದರೆ ಅನುಭವಿಸುತ್ತಿರುವ ರೈತರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ, ಹಾಲಿ ಶಾಸಕ ಕೆ.ಆರ್. ರಮೇಶ್ಕುಮಾರ್ ತಿಳಿಸಿದರು.
ಅವರು ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿ, ರೈತರು ಬೆಳೆಯುವ ಆಹಾರ ಧಾನ್ಯ, ಹಣ್ಣು, ತರಕಾರಿಗಳಿಗೆ ನ್ಯಾಯ ಸಮ್ಮತ ದರ ನಿಗದಿ ಮಾಡುವ ಅಧಿಕಾರವನ್ನು ರೈತರಿಗೆ ವಹಿಸಲು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿತ್ತು. ಇದನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಬದ್ಧವಾಗಿದೆ ಎಂದರು.
ರೈತರು ವಿವಿಧ ಬೆಳೆಗಳನ್ನು ಬೆಳೆಯಲು ಸಾಕಷ್ಟು ತೊಂದರೆ ಅನುಭವಿಸಿರುತ್ತಾರೆ. ಬಿತ್ತನೆ ಬೀಜ, ಗೊಬ್ಬರ, ಕೂಲಿ, ನೀರು ಮುಂತಾದವುಗಳಿಗೆ ಸಾಲ ಮಾಡಿ ಬೆಳೆ ಬೆಳೆದು ಮಾರುಕಟ್ಟೆಗೆ ಸಾಗಾಣೆ ಮಾಡಿದಾಗ ಕೃಷಿಗಾಗಿ ಹೂಡಿರುವ ಹಣದಲ್ಲಿ ಅರ್ಧದಷ್ಟು ಕೈಗೆ ಬರುವುದಿಲ್ಲ, ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾಗುತ್ತಿರುವುದರಿಂದ ಇದನ್ನು ತಪ್ಪಿಸಲು ರೈತರೇ ವೈಜ್ಞಾನಿಕವಾಗಿ ದರ ನಿಗಧಿ ಮಾಡುವ ಸಂಬಂಧ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚನೆ ಮಾಡಲು ಉದ್ದೇಶಿಸಿದ್ದು, ಇನ್ನು ಮೂರು ತಿಂಗಳಲ್ಲಿ ಈ ಯೋಜನೆ ಜಾರಿಗೆ ತರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚನೆ ಆಗುವ ಬೆಲೆ ನಿಗದಿ ಸಮಿತಿಯಲ್ಲಿ ರೈತ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ, ಸಮಿತಿಯ ಸಭೆಯಲ್ಲಿ ಕೃಷಿ ಉತ್ಪನ್ನಗಳಿಗೆ ನಿಗದಿ ಮಾಡುವ ದರವನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಅವಕಾಶ ಕಲ್ಪಿಸಲಾಗುವುದು, ಈ ಶಿಫಾರಸ್ಸನ್ನು ಸರ್ಕಾರ ಒಪ್ಪಿ ಬೆಲೆ ನಿಗದಿ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸುವುದರಿಂದ ರೈತರಿಗೆ ಆಗುತ್ತಿರುವ ನಷ್ಟ ತಪ್ಪಿಸಬಹುದಾಗಿದೆ ಎಂದು ಹೇಳಿದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರಕ್ಕೆ 11 ಸಾವಿರ ಕೋಟಿ ರು. ಬಿಡುಗಡೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡುವ ನಂಬಿಕೆಯಿದೆ, ಕೇಂದ್ರ ಸರ್ಕಾರ ಪೂರ್ತಿ ಹಣ ನೀಡಲಾಗದಿದ್ದಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ನೀಡಬೇಕಾಗಿದ್ದು ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ತರುವುದಾಗಿ ತಿಳಿಸಿದರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾಲು ಅಧಿಕವಾಗಿ ಉತ್ಪಾದನೆ ಆಗುತ್ತಿದ್ದು, ಹೆಚ್ಚುವರಿ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಿ ಮಾರಾಟ ಮಾಡಲು 30 ಕೋಟಿ ಅನುದಾನ ಕೇಳಲಾಗಿದ್ದು, ರಾಜ್ಯ ಬಜೆಟ್ನಲ್ಲಿ ಇದಕ್ಕೆ ಅಂಗೀಕಾರ ಸಿಗಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ 1.65 ಲಕ್ಷ ಮಂದಿ 11252 ಕೋಟಿ ರುಪಾಯಿ ಸಾಲ ಪಡೆದಿದ್ದು ಈ ಪೈಕಿ 1 ಕೋಟಿಗಿಂತ ಹೆಚ್ಚು ಸಾಲ ಪಡೆದವರು ಶೇ. 40ರಷ್ಟು ಜನರಿದ್ದಾರೆ. 1250 ಕೋಟಿ ರು. ಸಾಲ ವಸೂಲಿ ಆಗಿಲ್ಲ, ಈ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲುವ ಬದಲು ಬಡವರಿಗೆ 1 ಕೆಜಿ ಅಕ್ಕಿಗೆ 1 ರು ನಂತೆ 30 ಕೆಜಿ ಅಕ್ಕಿ ನೀಡಲು ಸರ್ಕಾರ ಮುಂದಾಗಿರುವ ಬಗ್ಗೆ ಟೀಕೆ ಮಾಡಿ ಬರೆಯುವುದು ಯಾವ ನ್ಯಾಯ,ಅಕ್ಕಿ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ ಎನ್ನುವುದಾದರೆ ಶ್ರೀಮಂತರು ಪಡೆದಿರುವ ಸಾಲ ಮರು ಪಾವತಿ ಆಗದಿದ್ದರೆ ಸರ್ಕಾರಕ್ಕೆ ನಷ್ಟವಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕಾರಂಗದಲ್ಲಿ ಸಾಧನೆ ಮಾಡಿರುವ ಸಿ.ಎಂ. ಮುನಿಯಪ್ಪ ಹಾಗೂ ಲಕ್ಷ್ಮೀನಾರಾಯಣ ಅವರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಸಕ ವರ್ತೂರ್ ಪ್ರಕಾಶ್ ಸನ್ಮಾನಿಸಿದರು. ಹಿರಿಯ ಪತ್ರಕರ್ತ ಎಸ್.ಕೆ. ಶೇಷ ಚಂದ್ರಿಕ ಅವರು ಪತ್ರಿಕಾ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದರು. ಶಾಸಕರಾದ ಕೊತ್ತೂರು ಮಂಜುನಾಥ್, ಕೋಡಿಹಳ್ಳಿ ಮಂಜುನಾಥ ಗೌಡ, ಕೆ.ಎಂ.ನಾರಾಯಣಸ್ವಾಮಿ, ವೈ. ರಾಮಕ್ಕ, ವಿಧಾನ ಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ ಹಾಗೂ ಡಿ.ಎಸ್. ವೀರಯ್ಯ ಮಾತನಾಡಿದರು, ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಭಗವಾನ್ದಾಸ್, ಮಾಜಿ ಶಾಸಕ ವೈ. ಸಂಪಂಗಿ, ಪತ್ರಕರ್ತರ ಸಂಘದ ಖಜಾಂಚಿ ಮುನಿರಾಜು, ರಾಜ್ಯ ಸಮಿತಿ ಸದಸ್ಯ ಎಂ.ವಾಸುದೇವಹೊಳ್ಳ, ಗೋಪಿಕಾ ಮಲ್ಲೇಶ್ ಇದ್ದರು. ಪಾ.ಶ್ರೀ. ಅನಂತರಾಮ್ ಸ್ವಾಗತಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್ ನಿರೂಪಿಸಿ ವಂದಿಸಿದರು.