ಯುವ ವಿಜ್ಞಾನಿಪ್ರಶಸ್ತಿಗೆ ರೋಹಿತ್
ಕೆಜಿಎಫ್: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಸರ್ಕಾರದ ಅಂಗ ಸಂಸ್ಥೆಯ ಪ್ರೌಡಶಾಲಾ ವಿದ್ಯಾರ್ಥಿಗಳ ಪ್ರತಿವರ್ಷ ನಡೆಸುವ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿಗೆ ಕೋಲಾರ ಜಿಲ್ಲೆಯಿಂದ ಲಿಖಿತ ಮತ್ತು ಮೌಖಿಕ ಪರೀಕ್ಷೆಗೆ ಕೆಜಿಎಫ್‌ನ ಬೆಮೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿ ಜಿ.ಎಸ್. ರೋಹಿತ್ ಆಯ್ಕೆಯಾಗಿದ್ದಾರೆ. ರೋಹಿತ್ ಈಗಾಗಲೇ ಕರ್ನಾಟಕ ಸರ್ಕಾರ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಥಮ ಬಹುಮಾನ ಪ್ರಶಸ್ತಿ ಪತ್ರದೊಂದಿಗೆ 10 ಸಾವಿರ ನಗದು ಬಹುಮಾನ, 2012ರ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಬಹುಮಾನದೊಂದಿಗೆ 10 ಸಾವಿರ ನಗದು, 2013ರ ಪ್ರತಿಭಾಕಾರಂಜಿಯಲ್ಲಿ ದ್ವಿತೀಯ ಬಹುಮಾನದೊಂದಿಗೆ 7 ಸಾವಿರ ನಗದು, ಹೊಯ್ಸಳ ಪ್ರಶಸ್ತಿಯಲ್ಲಿ ಪ್ರಥಮ ಪ್ರಶಸ್ತಿಯೊಂದಿಗೆ 10 ಸಾವಿರ ನಗದು, ತಾಲೂಕು ಹಾಗೂ ಜಿಲ್ಲಾ ಮಟ್ಟದ 2012-13 ಅವಧಿಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ಪ್ರತಿಭಾಕಾರಂಜಿಯಲ್ಲಿ ಪ್ರಥಮ ಬಹುಮಾನದೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾದ ಏಕೈಕ ಪ್ರತಿಭಾನ್ವಿತ ವಿದ್ಯಾರ್ಥಿ ಜಿ.ಎಸ್. ರೋಹಿತ್. ಇವರ ತಂದೆ ಶಿವಾನಂದ ಗುಡ್ಡದಕೇರಿ ತಾಯಿ ಜಿ.ಎಸ್. ಹೇಮಾ ಇವರು ಹುಬ್ಬಳ್ಳಿ ಮೂಲದವರಾಗಿದ್ದು ಕೆಜಿಎಫ್‌ನ ಬಿಇಎಂಎಲ್ (ಬೆಮೆಲ್) ಕಾರ್ಖಾನೆಯಲ್ಲಿ ಇಂಜಿನಿಯರ್. ಇವರ ತಾಯಿ ಜಿ.ಎಸ್. ಹೇಮಾ ಅವರು ಸಹ ರಂಗಮಂದಿರ ಹಾಗೂ ಇತರೆ ಕಲಾಕ್ಷೇತ್ರಗಳಲ್ಲಿ ಏರ್ಪಡಿಸುವ ಹಲವಾರು ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.