ವರದಕ್ಷಿಣೆ: ಬೇಸತ್ತ ಗೃಹಿಣಿ ನೇಣಿಗೆ ಶರಣು
ಚಿಂತಾಮಣಿ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗೃಹಿಣಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಪಟ್ಟಣದ ವಿನಾಯಕ ನಗರದಲ್ಲಿ ನಡೆದಿದೆ.
ಘಟನೆ ವಿವರ: ಗೌರಿಬಿದನೂರು ತಾಲೂಕು ಅಲ್ಕೂರು ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಸೇರಿದ ಲೇಟ್ ಅಬ್ದುಲ್ ರೆಹಮಾನ್ ಮಗಳಾದ ಶಾವತ್ ತಾಜ್(19) ಎಂಬಾಕೆಯನ್ನು ಕಳೆದ 9 ತಿಂಗಳ ಹಿಂದೆ ಪಟ್ಟಣದ ಚೌಡರೆಡ್ಡಿಪಾಳ್ಯ ನಿವಾಸಿ ಹೈದರ್ ಪಾಷಾ ಎಂಬಾತನಿಗೆ ಕೊಟ್ಟು ನಿಖಾ ನಡೆದಿತ್ತು. ನಿಖಾ ಸಂದರ್ಭದಲ್ಲಿ ವರನಿಗೆ ಬಂಗಾರದ ಒಡವೆ, ಗೃಹಪಯೋಗಿ ವಸ್ತುಗಳು, ನಗದು ಹಣವನ್ನು ನೀಡಲಾಗಿತ್ತು. ಆದರೆ ಧನದಾಹ ಹೆಚ್ಚಾಗಿ ಗಂಡ ಹೈದರ್ಪಾಷ ಅತ್ತೆ ಚೋಟುಮಾ, ಅಣ್ಣ ಮಹಮದ್ ಪಾಷ ಮೂವರು ಸೇರಿಕೊಂಡು ತವರು ಮನೆಯಿಂದ 10 ಸಾವಿರ ರು. ಹಣವನ್ನು ತರುವಂತೆ ಪೀಡಿಸುತ್ತಿದ್ದರು ಎಂದು ಮೃತಳ ತಾಯಿ ಸೈದಾನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಹಣ ತರಲಿಲ್ಲವೆಂದು ಕುಪಿತಗೊಂಡ ಮೂವರು ಸೇರಿಕೊಂಡು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿ ತನ್ನ ಮಗಳ ಸಾವಿಗೆ ಕಾರಣವಾಗಿರುವ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸರ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಕಳೆದ ರಾತ್ರಿ ಭಾನುವಾರ ಮನೆ ಬದಲಾವಣೆ ಮಾಡಲಾಗಿ ರಾತ್ರಿ 11 ಗಂಟೆ ವೇಳೆಯಲ್ಲಿ ಹಣಕ್ಕಾಗಿ ಜಗಳ ತೆಗೆದು ತನ್ನ ಮಗಳನ್ನು ಹೊಡೆದು ಕೊಲೆ ಮಾಡಿ ಮೇಲ್ನೋಟಕ್ಕೆ ನೇಣು ಬಿಗಿದಿರುವುದಾಗಿ ಮೃತಳ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಮುಗಿಲು ಮುಟ್ಟಿದ ಆಕ್ರಂದನ...:
ತಂದೆಯಿಲ್ಲದ ತಬ್ಬಲಿಯನ್ನು ಪ್ರೀತಿಯಿಂದ ಸಾಕಿಸಲುಹಿದ ಶಾವತ್ತಾಜ್ ಮಹಿಳೆ ಮೃತಪಟ್ಟ ಶವದ ಮುಂದೆ ಪೋಷಕರು ಹಾಗೂ ಸಂಬಂಧಿಕರು ಆಕ್ರಂದನ ಮುಗಿಲು ಮುಟ್ಟಿತ್ತು. ನಂತರ ಸ್ಥಳಕ್ಕೆ ಆಗಮಿಸಿದ ವೃತ್ತ ನಿರೀಕ್ಷಕ ಕೃಷ್ಣಪ್ಪ ಶವವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಶವನೀಡಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆಯ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ.