ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಶ್ವತ ನೀರಾವರಿಗೆ ಶಾಸಕರ ಐಕ್ಯತೆ ಪ್ರದರ್ಶನ

Vishwanath S
Updated On : 2 Jul 2013, 1:01 am

ಕ.ಪ್ರ.ವಾರ್ತೆ ,  ಕೋಲಾರ ,  ಜು. 1
ಶಾಶ್ವತ ನೀರಾವರಿ ಸೇರಿ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದಾಗಿ ಜಿಲ್ಲೆಯ ಎಲ್ಲ ಶಾಸಕರು ಘೋಷಿಸುವ ಮೂಲಕ ಜನತೆಯಲ್ಲಿ ಆಶಾಭಾವನೆ ಮೂಡಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಜಿಲ್ಲೆಯ ಎಲ್ಲ ಆರು ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು ಭಾಗವಹಿಸಿ ಶಾಶ್ವತ ನೀರಾವರಿಗಾಗಿ ಬದ್ಧತೆಯಿಂದ ಕೆಲಸ ಮಾಡುವ ಮೂಲಕ ಮತದಾರರ ಋಣ ತೀರುವುದಾಗಿ ಭರವಸೆ ನೀಡಿದರು.
ಜು.1ರ ಕನ್ನಡಪ್ರಭದಲ್ಲಿ ಪ್ರಕಟವಾಗಿರುವ  ಶಾಸಕರು ಹೊಣೆ ಅರಿತರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ  ವರದಿಗೆ ಸ್ಪಂದಿಸಿರುವ ವಿಧಾನ ಸಭೆ ಮತ್ತು ವಿಧಾನಪರಿಷತ್ತಿನ ಸದಸ್ಯರು ಸದನದ ಹೊರಗೆ ಮತ್ತು ಹೊರಗೆ ಜಿಲ್ಲೆಯ ಅಭಿವೃದ್ಧಿಗಾಗಿ ಐಕ್ಯತೆಯಿಂದ ಕೆಲಸ ಮಾಡುವುದಾಗಿ ಘೋಷಣೆ ಮಾಡಿದರು. ಯಾವುದೇ ಸರ್ಕಾರಿ ಇಲ್ಲವೇ ಖಾಸಗಿ ಕಾರ್ಯಕ್ರಮಗಳಿಗೆ ಜಿಲ್ಲೆಯ ಎಲ್ಲ ಶಾಸಕರನ್ನು ಆಹ್ವಾನಿಸಿ, ಜಿಲ್ಲೆಯ ಅಭಿವೃದ್ಧಿಗೆ ಇವರಿಂದ ಏನಾದರೂ ಲಾಭವಾಗುವುದೇ ಎಂದು ಅನೇಕರು ಪ್ರಯತ್ನಿಸುತ್ತಿದ್ದರಾದರೂ ಜನಪ್ರತಿನಿಧಿಗಳು ರಾಜಕೀಯ, ಇನ್ನಿತರ ಕಾರಣಗಳಿಂದ ಒಂದು ಕಡೆ ಸೇರುವುದಕ್ಕೆ ಸಾಧ್ಯವಾಗಿರಲಿಲ್ಲ.
ಮನ್ವಂತರ ಪ್ರಕಾಶನ 2010ರಲ್ಲಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದ್ದಾಗ ಕೆಲ ಶಾಸಕರು ತಮ್ಮದೇ ಆದ ರಾಜಕೀಯ ಕಾರಣಗಳಿಂದ ಗೈರು ಹಾಜರಾಗಿದ್ದರು. ಇದಾದ ನಂತರ ಜಿಲ್ಲೆಯ ಶಾಸಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಪ್ರಯತ್ನ ನಡೆದಿತ್ತು.  ರಾಜಕಾರಣ ಇದಕ್ಕೆ ಅವಕಾಶ ಮಾಡಿರಲಿಲ್ಲ. ಜಿಲ್ಲಾ ಪತ್ರಕರ್ತರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಗೆ ಎಲ್ಲ ಶಾಸಕರನ್ನು ಕರೆಸಲಾಗಿತ್ತು, ಹೊಸದಾಗಿ ಆಯ್ಕೆಯಾಗಿರುವ ಶಾಸಕರು ಸೇರಿ 6 ಮಂದಿ ಚುನಾಯಿತ ಸದಸ್ಯರು ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರಿಗೆ ಸನ್ಮಾನ ಸಹ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀನಿವಾಸಪುರ ಕ್ಷೇತ್ರದ ಶಾಸಕ ರಮೇಶ್‌ಕುಮಾರ್‌ರಿಗೆ ವೇದಿಕೆ ಮೇಲಿದ್ದ ಶಾಸಕರು ಶಾಶ್ವತ ನೀರಾವರಿ ಯೋಜನೆಗಾಗಿ ನಾಯಕತ್ವ ವಹಿಸಿಕೊಳ್ಳುವಂತೆ ಹಾಗೂ ಇದಕ್ಕೆ ಪಕ್ಷಾತೀತವಾಗಿ ಬೆಂಬಲ ನೀಡುವುದಾಗಿ ಪ್ರಕಟಿಸುವ ಮೂಲಕ ಸಭೀಕರ ಮೆಚ್ಚುಗೆಗೆ ಪಾತ್ರರಾದರು.
ಕೋಲಾರ ಕ್ಷೇತ್ರದ ಶಾಸಕ ಆರ್. ವರ್ತೂರ್ ಪ್ರಕಾಶ್ ಮಾತನಾಡಿ, ನೀರಿನ ಸಮಸ್ಯೆ ನಿವಾರಣೆಗಾಗಿ ಸದನದಲ್ಲಿ ಹೋರಾಡುವುದಾಗಿ ತಿಳಿಸಿದರಲ್ಲದೆ, ಬಜೆಟ್ ಅಧಿವೇಶನದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಸಕ್ರಿಯವಾಗಿ ಭಾಗವಹಿಸಿ ಶಾಶ್ವತ ನೀರಾವರಿಗಾಗಿ ಮೂರನೇ ಒಂದು ಭಾಗದಷ್ಟು ಅನುದಾನ ಮೀಸಲಿಡದಿದ್ದ ಪಕ್ಷದಲ್ಲಿ ರಮೇಶ್‌ಕುಮಾರ್ ನೇತೃತ್ವದಲ್ಲಿ ಸದನದ ಬಾವಿಗಿಳಿದು ಧರಣಿ ನಡೆಸಲು ಸಿದ್ಧರಾಗಬೇಕೆಂದರು.
ಈ ಹಿಂದಿನ ಸರ್ಕಾರದಿಂದ ಕೋಲಾರ ನಗರಸಭೆಗೆ 40 ಕೋಟಿ ರು. ಹಾಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ 110 ಕೋಟಿ ಸೇರಿದಂತೆ ಒಟ್ಟು 150 ಕೋಟಿ ರು.ಗಳನ್ನು ತಾವು ಬಿಡುಗಡೆ ಮಾಡಿಸಿದ್ದು ಕೆಲವು ಗುತ್ತಿಗೆದಾರರು ತಮಗೆ ಹೆಸರು ಬರುತ್ತದೆ ಎಂದು ವಿರೋಧ ಪಕ್ಷದೊಂದಿಗೆ ಶಾಮೀಲಾಗಿ ರಸ್ತೆ ಕೆಲಸಗಳನ್ನು ಮಾಡಲಿಲ್ಲವೆಂದು ದೂರಿದರು. ಬಂಗಾರಪೇಟೆ ಶಾಸಕ ಕೆ.ಎಂ.ನಾರಾಯಣಸ್ವಾಮಿ, ಮುಳಬಾಗಿಲಿನ ಕೊತ್ತೂರು ಮಂಜುನಾಥ್, ಮಾಲೂರಿನ ಕೋಡಿಹಳ್ಳಿ ಮಂಜುನಾಥಗೌಡ, ಕೆಜಿಎಫ್‌ನ ವೈ.ರಾಮಕ್ಕ ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಡಿ.ಎಸ್. ವೀರಯ್ಯ ಅವರುಗಳು ರಮೇಶ್‌ಕುಮಾರ್ ನಾಯಕತ್ವದಲ್ಲಿ ಶಾಶ್ವತ ನೀರಾವರಿಗಾಗಿ ಒಗ್ಗಟ್ಟಿನಿಂದ ಹೋರಾಡುವುದಾಗಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಕಾರ್ಯನಿಮಿತ್ತ ಗೈರು ಹಾಜರಾಗಿದ್ದರಾದರೂ ಸಂದೇಶದ ಮೂಲಕ ಶಾಶ್ವತ ನೀರಾವರಿ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದರು. 5 ವರ್ಷ ಕಾಲ ಜಿಲ್ಲೆಯ ಎಲ್ಲ ಶಾಸಕರು ಇದೇ ರೀತಿ ಒಗ್ಗಟ್ಟು ಪ್ರದರ್ಶಿಸಿ ಜನತೆ ಹಿತಕಾಪಾಡಿದಲ್ಲಿ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಪಡೆಯುವುದು ಕಷ್ಟವೇನಲ್ಲವೆಂಬ ಅಭಿಪ್ರಾಯ ಸಭಿಕರರಿಂದ ವ್ಯಕ್ತವಾಯಿತು.
ಇದಕ್ಕೆ ಮುಂಚೆ ಮಾತನಾಡಿದ ರಮೇಶ್‌ಕುಮಾರ್, ಜಿಲ್ಲೆಯ ರಾಜಕಾರಣಿಗಳಿಗೆ ನಾಚಿಕೆ, ಸ್ವಾಭಿಮಾನ ಇಲ್ಲದ ಕಾರಣ ಸಮಸ್ಯೆ ಎದುರಿಸಬೇಕಾಯಿತು. ಅಭಿವೃದ್ಧಿ ಆಗದಿರುವುದಕ್ಕೆ ನಾವೇ ಕಾರಣ. ನಮ್ಮ ನಡವಳಿಕೆ, ಕಾರ್ಯ ವೈಖರಿ ಬಗ್ಗೆ ಸಾಮಾಜಿಕ ಪರಿಶೀಲನೆ, ಉತ್ತರದಾಯಿತ್ವ ಇದ್ದಿದ್ದ ಪಕ್ಷದಲ್ಲಿ ಭಯ-ಭಕ್ತಿಯಿಂದ ಕೆಲಸ ಮಾಡುತ್ತಿದ್ದವೆಂದು ಹೇಳಿದ್ದನ್ನು ಇತರ ಶಾಸಕರು ಒಪ್ಪುವ ಮೂಲಕ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಇನ್ನು ಮುಂದೆಯಾದರೂ ಬದ್ಧವಾಗಿರುವುದಾಗಿ ಸಂದೇಶ ನೀಡಿದ್ದು ಕಾರ್ಯಕ್ರಮ ಸಾರ್ಥಕವಾಗಲು ಕಾರಣವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement