ಸಂಕ್ರಾಂತಿಯಂದೇ ನೀರಾವರಿಗೆ ಚಾಲನೆ ನೀಡದಿದ್ದರೆ ರಾಜಿನಾಮೆ ಖಚಿತ
ಕ.ಪ್ರ.ವಾರ್ತೆ , ಕೋಲಾರ , ಜು. 1
ನೀರಾವರಿ ತಜ್ಞ ಡಾ. ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆಗೆ ಸಂಕ್ರಾಂತಿ ಹಬ್ಬದ ದಿನವಾದ 2014ರ ಜನವರಿ 16 ರಂದು ಚಾಲನೆ ನೀಡುವುದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಒಂದು ವೇಳೆ ಸರ್ಕಾರ ತನ್ನ ಮಾತು ಉಳಿಸಿಕೊಳ್ಳದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್. ರಮೇಶ್ಕುಮಾರ್ ಪುನರುಚ್ಚರಿಸಿದರು.
ಅವರು ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಈವರೆಗೆ ಆಗದಿರುವುದಕ್ಕೆ ಅನೇಕ ಕಾರಣಗಳಿವೆ, ಹಳೆಯ ಸಂಗತಿಗಳನ್ನು ಮರೆತು ಸರ್ಕಾರವೀಗ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಬದ್ಧವಾಗಿದೆ, ಜಿಲ್ಲೆಯ ಎಲ್ಲ ಶಾಸಕರು ಸಹ ಜನತೆಯ ಋಣ ತೀರಿಸಲು ಪಕ್ಷಾತೀತವಾಗಿ ಹೋರಾಡಲು ನಿರ್ಧರಿಸಿರುವುದರಿಂದ ಜ್ವಲಂತ ಸಮಸ್ಯೆಗೆ ಪರಿಹಾರ ಸಿಗುವುದು ಖಚಿತವೆಂದರು. ಎತ್ತಿನ ಹೊಳೆ ಯೋಜನೆ ಅನುಷ್ಠಾನಕ್ಕಾಗಿ ಈ ಹಿಂದಿನ ಸರ್ಕಾರ ನಿರ್ಣಯ ಕೊಂಡಿತ್ತು, ಟೆಂಡರ್ ಸಹ ಕರೆಯುವುದಕ್ಕೆ ಮುಂದಾಗಿತ್ತಾದರೂ ಚುನಾವಣೆಯಿಂದಾಗಿ ಸಾಧ್ಯವಾಗಿರಲಿಲ್ಲ, ಕಾಂಗ್ರೆಸ್ ನೇತೃತ್ವದ ಸರ್ಕಾರ ಈಗ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕಾಗಿ ಟೆಂಡರ್ ಕರೆಯಲು ತೀರ್ಮಾನಿಸಿದ್ದು ಇನ್ನೊಂದು ವಾರದಲ್ಲಿ ಟೆಂಡರ್ ಕರೆಯುವ ನಿರೀಕ್ಷೆಯಿದೆ ಎಂದರು. ಎತ್ತಿನ ಹೊಳೆಯಿಂದ ಸಿಗುವ 24 ಟಿಎಂಸಿ ನೀರು ಸಾಕಾಗುವುದಿಲ್ಲವೆಂಬ ಕಾರಣದಿಂದ ಡಾ. ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಬೇಕೆಂದು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದಿದ್ದು ಯೋಜನೆ ಅನುಷ್ಟಾನಕ್ಕೆ ಕಳೆದ 20 ವರ್ಷಗಳಿಂದ ಹೋರಾಟ ನಡೆದಿದ್ದರೂ ಸಮಗ್ರ ವರದಿ ತಯಾರಿಸಲು ಹಾಗೂ ಸಮೀಕ್ಷೆ ಕಾರ್ಯ ಸಾಧ್ಯವಾಗಿಲ್ಲ. ಸಮಗ್ರ ವರದಿ ಸಿದ್ಧಪಡಿಸಲು ಟೆಂಡರ್ ಕರೆಯುವುದಕ್ಕೆ ವಿಳಂಬವಾಗಿದೆ.
ಯೋಜನೆಗೆ ಸುಮಾರು 3500 ಕೋಟಿ ರು. ಬೇಕಾಗುತ್ತದೆ, ಡಿಪಿಆರ್ ಮತ್ತು ಸರ್ವೆ ಕಾರ್ಯ ನಡೆಯದೆ ಟೆಂಡರ್ ಕರೆಯುವಂತಿಲ್ಲ, ಕೋಲಾರ ಸೇರಿದಂತೆ ಬಯಲು ಸೀಮೆಯ ಇನ್ನಿತರ ಜಿಲ್ಲೆಯ ಶಾಸಕರ ಮನವಿ ಮೇರೆಗೆ ನೀರಾವರಿ ಮಂತ್ರಿಗಳು ಸ್ಪಂದಿಸಿ ಶೀಘ್ರವೇ ಡಿಪಿಆರ್ ಮತ್ತು ಸರ್ವೆ ಕಾರ್ಯ ನಡೆಸಿ 2014ರ ಜನವರಿ 16 ರಂದು ಯೋಜನೆಗೆ ಚಾಲನೆ ನೀಡುವುದಾಗಿ ಭರವಸೆ ನೀಡಿರುವುದರಿಂದ ಅಲ್ಲಿವರೆಗೆ ತಾಳ್ಮೆಯಿಂದ ಕಾಯುತ್ತೇವೆ, ಸರ್ಕಾರ ಕೊಟ್ಟ ಮಾತು ತಪ್ಪಿದಲ್ಲಿ ರಾಜಿನಾಮೆ ನೀಡುವುದಂತೂ ಖಚಿತವೆಂದು ತಿಳಿಸಿದರು. ಈ ವರ್ಷದ ವಿಜಯ ದಶಮಿ ಎಂದೇ ಶಾಶ್ವತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ಆಗಬೇಕೆಂದು ಶಾಸಕರು ಸರ್ಕಾರಕ್ಕೆ ತಿಳಿಸಿದ್ದೆವು. ಆದರೆ, ಡಿಪಿಆರ್ ಮತ್ತು ಸರ್ವೆ ಕಾರ್ಯ ನಡೆಯದೆ ಯೋಜನೆ ಅನುಷ್ಠಾನ ಸಾಧ್ಯವಾಗದು ಎಂಬ ಕಾರಣದಿಂದ ಬರುವ ಜನವರಿ 16ಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಮುಂದೂಡಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.