ಸರ್ಕಾರಿ ಆಸ್ಪತ್ರೆ ಸಮಸ್ಯೆಗೆ ಶೀಘ್ರ ಪರಿಹಾರ: ಚಿನ್ನಪ್ಪ
ಕ.ಪ್ರ.ವಾರ್ತೆ, ಚಿಂತಾಮಣಿ, ಜು.1
ಸರ್ಕಾರಿ ಧರ್ಮಾಸ್ಪತ್ರೆ ಮೂಲಭೂತ ಸಮಸ್ಯೆಗಳಿಗೆ ಶೀಘ್ರವೇ ಸಂಬಂಧಪಟ್ಟ ಆರೋಗ್ಯ ಸಚಿವ ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಬಡ ಜನತೆಗೆ ಉತ್ತಮ ಚಿಕಿತ್ಸೆ ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಹೇಳಿದರು.
ಪಟ್ಟಣದಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ರಕ್ತ ಶೇಖರಣಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳಿಂದ ಬರುವಂತಹ ಬಡ ರೋಗಿಗಳಿಗೆ ಸಿಬ್ಬಂದಿ ಕೊರತೆ ಹಾಗೂ ವಿವಿಧ ಸಲಕರಣೆಗಳ ಕೊರೆತೆಯಿಂದ ಧರ್ಮಾಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದೆ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ವಾರ ನಡೆಯುವ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಸಚಿವ ಹಾಗೂ ಸ್ಥಳೀಯ ಶಾಸಕರ ಜೊತೆ ಆಸ್ಪತ್ರೆಗೆ ಬೇಕಾಗುವಂತಹ ಸವಲತ್ತುಗಳನ್ನು ಕಲ್ಪಿಸುವಲ್ಲಿ ಮುಂದಾಗುವುದಾಗಿ ಚಿನ್ನಪ್ಪ ಸಭೆಯಲ್ಲಿ ನುಡಿದರು.
ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ರಕ್ತ ಶೇಖರಣಾ ಘಟಕಕ್ಕೆ ಉದ್ಘಾಟಿಸಿ ಮಾತನಾಡಿ, ಆಸ್ಪತ್ರೆಯ ಸುತ್ತಮುತ್ತ ಹಾಗೂ ಒಳಭಾಗದಲ್ಲಿ ಸ್ವಚ್ಛತೆ ಇಲ್ಲದೆ ರೋಗಿಗಳು ಹಾಗೂ ಹೊರ ರೋಗಿಗಳಿಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಸ್ಥಳೀಯ ವೈದ್ಯಾಧಿಕಾರಿಗಳು ನಿರ್ಲಕ್ಷವೇ ಕಾರಣ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಡವರಿಗೆ ಉತ್ತಮ ಆರೋಗ್ಯ ಕಲ್ಪಿಸಲು ಸರ್ಕಾರ ಲಕ್ಷಾಂತರ ರು. ವೆಚ್ಚದಲ್ಲಿ ಔಷಧಿ ಹಾಗೂ ಲಸಿಕೆಗಳನ್ನು ಸರಬರಾಜು ಮಾಡುತ್ತಿದ್ದರೂ ಹಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಬಡ ರೋಗಿಗಳ ಕೈ ಸೇರದೆ ಖಾಸಗಿ ಔಷಧಾಲಯದಿಂದ ತರಿಸಿಕೊಳ್ಳುವ ದುಸ್ಥಿತಿ ಒದಗಿದೆ ಎಂದು ಜೆ.ಕೆ. ಕೃಷ್ಣಾರೆಡ್ಡಿ ಹೇಳಿದರು.
ಗ್ರಾಮಾಂತರ ಪ್ರದೇಶದಿಂದ ಬರುವ ರೋಗಿಗಳಿಗೆ ಸರಿಯಾದ ಔಷಧಿ ಹಾಗೂ ಚಿಕಿತ್ಸೆ ದೊರೆಯದೆ ಕೋಲಾರ ಹಾಗೂ ಬೆಂಗಳೂರು ನಗರಗಳಿಗೆ ಹೋಗುವ ಪರಿಸ್ಥಿತಿ ಒದಗಿರುವುದರಿಂದ ತೀವ್ರ ಅಸಮದಾನ ವ್ಯಕ್ತಪಡಿಸಿದರು.
2 ಆ್ಯಂಬ್ಯುಲೆನ್ಸ್ಗಳು ಕೆಟ್ಟು ಮೂಲೆ ಸೇರಿ ಧೂಳು ತುಂಬುತ್ತಿವೆ. ಶೀಘ್ರವೇ ಇವುಗಳನ್ನು ಸರಿಪಡಿಸಿ ಸಾರ್ವಜನಿಕರ ಉಪಯೋಗಕ್ಕೆ ಬಳಸಲು ಕ್ರಮ ಜರುಗಿಸಲಾಗುವುದು ಎಂದು ಸಭೆಯಲ್ಲಿ ಹೇಳಿದರು.
ವೈದ್ಯರು ಹಣ ವಸೂಲಿ ಆರೋಪ: ಸಭೆಯಲ್ಲಿ ಸೇರಿದ ಹಲವಾರು ರೋಗಿಗಳು ಹಾಗೂ ಸಾರ್ವಜನಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುವ ಗರ್ಭೀಣಿ ಸ್ತ್ರೀಯರಿಂದ ಹಾಗೂ ಹೆರಿಗೆಯಾದ ಮಹಿಳೆಯರಿಂದ ಹಲವು ವೈದ್ಯರು ಹಣ ವಸೂಲಿ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.
ಬಡವರು ಕೈಯಲ್ಲಿ ಕಾಸಿಲ್ಲ ಎಂದರೂ ವಿನಾಕಾರಣ ಕೋಲಾರ ಹಾಗೂ ಬೆಂಗಳೂರು ಪ್ರದೇಶಗಳಿಗೆ ರೋಗಿಗಳನ್ನು ಕಳುಸುತ್ತಿದ್ದಾರೆ ಎಂದು ರೋಗಿಗಳು ಹಾಗೂ ಸಾರ್ವಜನಿಕರು ಸಭೆಯಲ್ಲಿ ನೆರೆದಿದ್ದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಚಿನ್ನಪ್ಪ ಹಾಗೂ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮುಂದೆ ತಮ್ಮ ಅಳಲ್ನು ತೋಡಿಕೊಂಡರು.
ಇದಕ್ಕೆ ಸಭೆಯಲ್ಲಿ ಉತ್ತರಿಸಿದ ಜನಪ್ರತಿನಿಧಿಗಳು ಮುಂದಿನ ದಿನಗಳಲ್ಲಿ ಇಂತಹವುಗಳಿಗೆ ಕಡಿವಾಣ ಹಾಕಲು ವೈದ್ಯಾಧಿಕಾರಿಗಳ ಜೊತೆ ಚರ್ಚಿಸಿ ಬಡ ರೋಗಿಗಳಿಗೆ ನ್ಯಾಯ ಒದಗಿಸಲಾಗುವು ಎಂದು ಭರವಸೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ರಕ್ತ ಯೂನಿಟ್ ಸಲಕರಣೆಗಳನ್ನು ದಾನ ನೀಡಿದ ತಾಲೂಕು ಚಿನ್ನ-ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ರಾಜಪ್ಪ ಸಮಾಜ ಸೇವೆ ಬಗ್ಗೆ ಸಭೆಯಲ್ಲಿ ಸೇರಿದ ಗಣ್ಯರು ಮುಕ್ತ ಕಂಠದಿಂದ ಶ್ಲಾಘನೀಯ ವ್ಯಕ್ತಪಡಿಸಿದರು.
ನಂತರ ಆಡಳಿತ ವೈದ್ಯರಾದ ಡಾ.ಜಯಂತಿ ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ಸಮಸ್ಯೆಗಳ ಹಾಗೂ ಅನುದಾನದ ಕೊರತೆ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಫಿರ್ದೋಸ್ ಫಾತಿಮಾ, ಡಾ.ವೆಂಕಟೇಶ್, ಇ.ಓ. ರೆಡ್ಡೆಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ನಂದನವನ ಶ್ರೀರಾಮರೆಡ್ಡಿ, ಸತ್ಯನಾರಾಯಣರೆಡ್ಡಿ, ನಗರಸಭಾ ಸದಸ್ಯರಾದ ಅಬ್ಬುಗುಂಡು ಶ್ರೀನಿವಾರೆಡ್ಡಿ, ಸಿ.ಎನ್. ಮಂಜುನಾಥ್, ಆರ್.ಪ್ರಕಾಶ್, ಷಫೀಕ್ ಉದ್ದೀನ್, ಎಪಿಎಂಸಿ ಸದಸ್ಯ ಗೋಪಾಲರೆಡ್ಡಿ ಸೇರಿದಂತೆ ಮುಖಂಡರು, ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.