15 ರೊಳಗೆ ಗ್ರಾಮ ಸಭೆ ಮುಗಿಸಿ: ಸಿಇಒ ತಾಕೀತು
ಕ.ಪ್ರ. ವಾರ್ತೆ , ಕೋಲಾರ , ಜು.2
ವರ್ಷಕ್ಕೆ ನಾಲ್ಕು ಬಾರಿ ಗ್ರಾಮ ಸಭೆಗಳು ನಡೆಯಬೇಕೆಂಬುದು ಸರ್ಕಾರದ ಉದ್ದೇಶವಾಗಿದ್ದರೂ ಕೋಲಾರ ತಾಲೂಕಿನಲ್ಲಿ ಗ್ರಾಪಂ ಸಭೆಗಳು ಸರಿಯಾಗಿ ನಡೆಯದಿಲ್ಲವೆಂದು ಜಿ.ಪಂ ಸಿಇಒ ಝಲ್ಫಿಖಾರ್ ಉಲ್ಲಾ ಬೇಸರ ವ್ಯಕ್ತಪಡಿಸಿದರು.
ಅವರು ಮಂಗಳವಾರ ತಾಲೂಕು ಪಂಚಾಯಿತಿಯಲ್ಲಿ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಓಗಳನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರದ ನಿಯಮದಂತೆ ಕಾಲ ಕಾಲಕ್ಕೆ ಗ್ರಾಮ ಸಭೆ ಮತ್ತು ಗ್ರಾಪಂ ಸಭೆಗಳನ್ನು ನಡೆಸುವುದರಿಂದ ಅನೇಕ ಸಮಸ್ಯೆಗಳಿಗೆ ಸುಲಭ ಪರಿಹಾರ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮ ಸಭೆಗಳನ್ನು ನಡೆಸದಿದ್ದರೆ ಪಿಡಿಓಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅವಕಾಶವಿದೆ, ಜೂನನ್ತಿಂಗಳಲ್ಲಿ ಯಾವುದೇ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ಸಭೆ ನಡೆದಿಲ್ಲ, ಸರ್ಕಾರ ಇದಕ್ಕಾಗಿ ಬೇಸರ ವ್ಯಕ್ತಪಡಿಸಿರುವುದಲ್ಲದೆ ಜುಲೈ 15ರೊಳಗೆ ಗ್ರಾಮ ಸಭೆಗಳನ್ನು ನಡೆಸುವುದಕ್ಕೆ ಸೂಚಿಸಿರುವುದರಿಂದ ಪಿಡಿಓಗಳು ಸಭೆಗಳನ್ನು ನಡೆಸಲು ಗಮನ ನೀಡಬೇಕೆಂದರು.
ಗ್ರಾಮ ಸಭೆ ನಡೆಸದ ಪಿಡಿಓಗಳನ್ನು ಸಸ್ಪೆಂಡ್ ಮಾಡುವುದಕ್ಕೆ ತಾ.ಪಂ ಇಓಗಳಿಗೆ ಅಧಿಕಾರವಿದೆ, ಅಧ್ಯಕ್ಷರು ಶಿಫಾರಸ್ಸು ಮಾಡಿದಲ್ಲಿ ಕೆಲಸದಿಂದ ವಜಾ ಮಾಡುವುದಕ್ಕೂ ಅವಕಾಶವಿರುವುದರಿಂದ ಪಿಡಿಓಗಳು ಎಚ್ಚರಿಕೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದರು. ಗ್ರಾಮ ಸಭೆಗಳನ್ನು ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ನಡೆಸಬೇಕು, ನರೇಗಾ ಯೋಜನೆಗಾಗಿಯೇ ಪ್ರತ್ಯೇಕ ಗ್ರಾಮ ಸಭೆ ನಡೆಸುವುದಕ್ಕೂ ಅವಕಾಶವಿದೆ, ಒಂದೊಂದು ವಿಷಯಕ್ಕೆ ಒಂದೊಂದು ಗ್ರಾಮ ಸಭೆ ನಡೆಸಿದರೂ ಜನತೆಗೆ ಅನುಕೂಲವಾಗುತ್ತದೆ ಎಂದ ಸಿಇಓ ಅವರು, ಮಕ್ಕಳ ಗ್ರಾಮ ಸಭೆ ನಡೆಸಿದಲ್ಲಿ ಗ್ರಾಮದ ನಿಜವಾದ ಸಮಸ್ಯೆ ಅರ್ಥ ಮಾಡಿಕೊಂಡು ಅದಕ್ಕೆ ಪರಿಹಾರ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಜವಾಬ್ದಾರಿ ಮರೆಯದಿರಿ: ಅನೇಕ ಪಿಡಿಓಗಳು ವರ್ಗಾವಣೆಗಾಗಿ ಕಾಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ, ನಾನು ಸಹ ನಿಮ್ಮಂತೆ ವರ್ಗಾವಣೆಯ ಆದೇಶಕ್ಕಾಗಿ ಕಾಯುತ್ತಿದ್ದೇನೆ. ಆದರೆ, ಸರ್ಕಾರದ ಆದೇಶ ಬರುವ ತನಕ ನಾವು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಮರೆಯದೆ ಸರ್ಕಾರದ ಕೆಲಸ ನಿರ್ವಹಿಸಬೇಕೆಂದರು.
ನಾವು ಗಾಜಿನ ಮನೆಯಲ್ಲಿ ಇರುವುದರಿಂದ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ, ವರ್ಗಾವಣೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅಧಿಕಾರದಲ್ಲಿ ಇರುವವರೆಗೆ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು. ಗ್ರಾಮ ಸಭೆಗಳಲ್ಲಿ ಕೈಗೊಳ್ಳುವ ನಿರ್ಧಾರ, ಸಭಾ ನಡವಳಿಕೆಗಳನ್ನು ಸಭೆಯಲ್ಲಿ ಮುಗಿಸಿ ಪಂಚತಂತ್ರದಲ್ಲಿ ಸೇರಿಸದಿದ್ದರೆ ಸರ್ಕಾರಕ್ಕೆ ಗ್ರಾಪಂಗಳ ಬಗ್ಗೆ ವಿಶ್ವಾಸ ಮೂಡುವುದಿಲ್ಲ, ಜು.15ರೊಳಗೆ ಗ್ರಾಮ ಸಭೆಗಳನ್ನು ಮುಗಿಸಬೇಕು, ಜು.16ಕ್ಕೆ ಸಾಮಾಜಿಕ ಲೆಕ್ಕ ಪರಿಶೋಧನೆ ಮುಗಿಸಿದಲ್ಲಿ ಜಮಾಬಂದಿ ಪ್ರಾರಂಭಕ್ಕೆ ಅನುಕೂಲವಾಗುತ್ತದೆ, ಮೂರು ತಿಂಗಳು ಕಾರಣಾಂತರಗಳಿಂದ ನಿದ್ದೆ ಮಾಡಿದ್ದು, ಇನ್ನಾದರೂ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಓಗಳು ಸಮನ್ವಯತೆಯಿಂದ ಕೆಲಸ ಮಾಡುವಂತೆ ತಿಳಿಸಿದರು.
ಸರ್ಕಾರದ ಯಾವುದೇ ಸುತ್ತೋಲೆಗಳು ಇರಲಿ ಅದನ್ನು ಗ್ರಾಪಂ ಅಧ್ಯಕ್ಷರ ಗಮನಕ್ಕೆ ತಂದಲ್ಲಿ ಪಿಡಿಓಗಳು ರಕ್ಷಣಾತ್ಮಕವಾಗಿ ಕೆಲಸ ಮಾಡುವುದಕ್ಕೆ ಸಹಾಯವಾಗುತ್ತದೆ ಎಂದು ಸೂಚ್ಯವಾಗಿ ಹೇಳಿದರು.
ಗ್ರಾಪಂಗಳಲ್ಲಿ ಕೆಲಸ ಮಾಡುತ್ತಿರುವ ಬಿಲ್ ಕಲೆಕ್ಟರ್ಗಳು ತೆರಿಗೆ ವಸೂಲಿ ಮಾಡದೆ ಬೇರೆಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ರಾಜಕೀಯ ಮಾಡುತ್ತಿದ್ದಾರೆ, ಇಂತಹ ಬಿಲ್ ಕಲೆಕ್ಟರ್ಗಳನ್ನು ಕೆಲಸದಿಂದ ಕಿತ್ತು ಹಾಕಲು ಗ್ರಾಪಂಗಳಲ್ಲಿ ನಿರ್ಣಯ ಕೈಗೊಳ್ಳಿ ಎಂದು ಗ್ರಾಪಂ ಅಧ್ಯಕ್ಷರಿಗೆ ಮನವಿ ಮಾಡಿದರು.
ತೆರಿಗೆ ಸಂಗ್ರಹಣೆ ಮಾಡದಿದ್ದರೆ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತದೆ, ಗ್ರಾಪಂಗಳು ಸರಿಯಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದ ಅವರು, ತೆರಿಗೆ ವಸೂಲಿಗೆ ಸಂಬಂಧಿಸಿದಂತೆ ಸಕಾಲಕ್ಕೆ ವರದಿ ನೀಡದಿರುವುದರಿಂದ ಪಂಚತಂತ್ರದಲ್ಲಿ ಮಾಹಿತಿ ಸಿಗುತ್ತಿಲ್ಲವೆಂದರು.
ತೆರಿಗೆ ವಸೂಲಿಗೆ ಪ್ರಶಸ್ತಿ: ಬಿಲ್ಕಲೆಕ್ಟರ್ಗಳು ಸರಿಯಾಗಿ ತೆರಿಗೆ ವಸೂಲಿ ಮಾಡಿದಲ್ಲಿ ಪ್ರಶಸ್ತಿ ನೀಡುವುದಾಗಿ ಇದೇ ಸಂದರ್ಭದಲ್ಲಿ ಸಿಇಓ ಪ್ರಕಟಿಸಿದರು. ಇದೇ ಸಭೆಯಲ್ಲಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಪರಿಹಾರಕ್ಕೆ ಸಂಬಂಧಿಸಿದಂತೆ ಪಿಡಿಓಗಳಿಂದ ಮಾಹಿತಿ ಪಡೆದರು. ನೀರಿನ ಸಮಸ್ಯೆ ಇಲ್ಲದ ಕಡೆ ಟ್ಯಾಂಕರ್ ಮೂಲಕ ಸರಬರಾಜು ಮಾಡುತ್ತಿರುವ ನೀರು ನಿಲ್ಲಿಸುವಂತೆ ಹಾಗೂ ಅಭಾವವಿರುವ ಕಡೆ ಕೊಳವೆ ಬಾವಿಗಳ ಮೂಲಕ ನೀರು ನೀಡುವಂತೆ ಸೂಚಿಸಿದರು.