ಗ್ರಾಪಂ ಅಧ್ಯಕ್ಷರು, ಪಿಡಿಒ ವಿರುದ್ಧ ಕ್ರಮ: ಸಿಇಒ
ಕ.ಪ್ರ.ವಾರ್ತೆ , ಕೋಲಾರ , ಜು. 2
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 2011-12ನೇ ಸಾಲಿನಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಿರುವವರಿಗೆ ಎಂಐಎಸ್ ಮಾನಿಟರ್ ಇನ್ಫಾರ್ಮೇಷನ್ ಸಿಸ್ಟಮ್ ಮಾಹಿತಿಯನ್ನು ಆಧರಿಸಿ ಬಿಲ್ ಪಾವತಿ ಮಾಡದಿದ್ದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಣಾಧಿಕಾರಿ ಝಲ್ಫಿಖಾರ್ ಉಲ್ಲಾ ಎಚ್ಚರಿಕೆ ನೀಡಿದರು.
ಅವರು ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನರೇಗಾ, ಕುಡಿಯುವ ನೀರು ವಿಚಾರಗಳಿಗೆ ಸಂಬಂಧಿಸಿದಂತೆ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಓಗಳೊಂದಿಗೆ ಸಭೆ ನಡೆಸಿದ ಅವರು, ಕೋಲಾರ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ನಡೆಸಿರುವವರಿಗೆ 34 ಕೋಟಿ ರು. ಬಾಕಿ ಪಾವತಿಸಬೇಕಾಗಿದೆ, ನಮ್ಮಲ್ಲಿ 14 ಕೋಟಿ ರು. ಹಣ ಇರುವುದಾಗಿ ಎಂಐಎಸ್ನಲ್ಲಿ ತೋರಿಸುತ್ತಿದೆಯಾದರೂ ಈ ಹಣ ಗ್ರಾಪಂಗಳ ಬ್ಯಾಂಕ್ ಖಾತೆಯಲ್ಲಿ ಇಲ್ಲದಿರುವುದರಿಂದ ಕೇಂದ್ರ ಸರ್ಕಾರ ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗ್ರಾಪಂಗಳ ವಿರುದ್ಧ ಕ್ರಿಮಿನಲ್ ಕೇಸು ಕೊಡುವುದಕ್ಕೆ ಚಿಂತನೆ ಮಾಡಿದೆ ಎಂದು ತಿಳಿಸಿದರು.
ಕೋಲಾರ ತಾಪಂ ವ್ಯಾಪ್ತಿಯಲ್ಲಿ ನಡೆದಿರುವ ನರೇಗಾ ಕಾಮಗಾರಿಗಳಿಗೆ 4 ಕೋಟಿ ರು.ಗಳನ್ನು ಯಾವುದೇ ಬಿಲ್ಲುಗಳು ಇಲ್ಲದೆ ಮತ್ತು ಎಂಐಎಸ್ನಲ್ಲಿ ನಮೂದಿಸದೆ ಹಣವನ್ನು ಖರ್ಚು ಮಾಡಲಾಗಿದೆ, ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿರುವುದರಿಂದ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಓಗಳು ಲೋಪ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಹೇಳಿದರು.
2011-12ನೇ ಸಾಲಿನಲ್ಲಿ ಆಗಿರುವ ಲೋಪದಿಂದಾಗಿ ಈಗ ನಾನು ಮತ್ತು ತಾಪಂ ಇಓ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ತಾ.ಪಂ ಇಓ ಕೆ.ಎಸ್. ಭಟ್ ಅವರು ಜನಪ್ರತಿನಿಧಿಗಳನ್ನು ಎದುರಾಕಿಕೊಳ್ಳಬಾರದೆಂದು ಹಾಗೂ ಪಿಡಿಓಗಳನ್ನು ರಕ್ಷಣೆ ಮಾಡಲು ಅಂದರಿಕಿ ಮಂಚಿವಾಡು(ಎಲ್ಲರಿಗೂ ಒಳ್ಳೆಯವ)ಎಂಬಂತೆ ವರ್ತಿಸುತ್ತಿದ್ದಾರೆ. ಸಮಸ್ಯೆ ನಿವಾರಣೆ ಆಗದಿದ್ದರೆ 4 ಕೋಟಿ ರು. ವೆಚ್ಚವಾಗಿರುವ ವಿಚಾರದಲ್ಲಿ ಕ್ರಿಮಿನಲ್ ಕೇಸ್ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕ್ರಮ ಕೈಗೊಳ್ಳಲು ಅಧಿಕಾರ: ಜನಪ್ರತಿನಿಧಿಗಳ ಮೇಲೆ ನಮಗೆ ಗೌರವವಿದೆ, ಹಾಗಾಗಿ ನರೇಗಾ ಯೋಜನೆಯ ಅನುಷ್ಠಾನಾಧಿಗಳು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಲೋಪ ಸರಿಪಡಿಸಲು ಅವಕಾಶ ಕೋರಲಾಗಿದ್ದು, ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಓಗಳು ಸಹಮತದಿಂದ ಕೆಲಸ ನಿರ್ವಹಿಸಿ ನರೇಗಾ ಯೋಜನೆಯಡಿ ಯಾರು ಕೆಲಸ ಮಾಡಿದ್ದಾರೋ ಅಂತಹವರಿಂದ ಬಿಲ್ಲುಗಳನ್ನು ಪಡೆದು ಎಂಐಎಸ್ನಲ್ಲಿ ಮಾಹಿತಿ ಲಭ್ಯವಿದ್ದಲ್ಲಿ ಅಂತಹವರಿಗೆ ಕೂಡಲೇ ಹಣ ನೀಡುವ ಮೂಲಕ ಸಮಸ್ಯೆಯಿಂದ ಪಾರಾಗಬೇಕೆಂದು ಕಿವಿಮಾತು ಹೇಳಿದರು.
ನರೇಗಾ ಯೋಜನೆಯಯಡಿ ನಿಯಮಗಳ ಪ್ರಕಾರ ಕೆಲಸ ಮಾಡಿರುವವರಿಗೆ ಹಣ ಪಾವತಿ ಮಾಡದಿದ್ದ ಪಕ್ಷದಲ್ಲಿ ಸೆಕ್ಷನ್ 25ರಡಿಯಲ್ಲಿ ಗ್ರಾಪಂ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅಧಿಕಾರವಿದ್ದು, ಇದಕ್ಕೆ ಅವಕಾಶ ನೀಡದೆ ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸಿದಲ್ಲಿ ಪ್ರತಿಯೊಬ್ಬರಿಗೂ ಒಳ್ಳೆಯದಾಗುತ್ತದೆ ಎಂದರು.
ನರೇಗಾ ಯೋಜನೆಗಾಗಿ ಸರ್ಕಾರ ನೀಡಿರುವ ಹಣ ಖರ್ಚು ಮಾಡದೆ ಹಣವನ್ನು ಹಾಗೆಯೇ ಉಳಿಸಿಕೊಂಡರೆ ಆ ಹಣ ಯಾರಿಗೂ ಉಪಯೋಗಕ್ಕೆ ಬಾರದ ನಾಯಿ ಹಾಲಿನಂತಾಗುತ್ತದೆ, ನಿಮಗೆ ಅನುದಾನ ಬಳಕೆ ಸಾಧ್ಯವಾಗದಿದ್ದರೆ ನಿಮ್ಮ ಬಳಿ ಇರುವ ಹಣವನ್ನು ವಾಪಸ್ಮಾಡಿದಲ್ಲಿ ಬೇರೆ ಗ್ರಾಪಂಗಳಿಗೆ ಆ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಕಾಮಗಾರಿಗಳಿಗೆ ಸಂಬಂಧಿಸಿದ ಸಾಮಗ್ರಿಗಳ ಬಳಕೆ ಮತ್ತು ಸರಬರಾಜು ಮಾಹಿತಿ ಇಲ್ಲದಿದ್ದರೆ ಹಣ ನೀಡುವುದು ಕಷ್ಟ, ಖಚಿತ ಮಾಹಿತಿ ಹಾಗೂ ದಾಖಲೆ ಇದ್ದಲ್ಲಿ ಬಿಲ್ ಪಾವತಿ ಮಾಡುವುದಕ್ಕೆ ಅವಕಾಶ ಇರುವುದರಿಂದ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಓಗಳು ಸಮಸ್ಯೆ ನಿವಾರಣೆ ಮಾಡಿಕೊಳ್ಳುವುದಕ್ಕೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದರು.
ಸಭೆಯಲ್ಲಿ ತಾ.ಪಂ ಇಓ ಕೆ.ಎಸ್.ಭಟ್, ಜಿ.ಪಂ ಇಂಜಿನಿಯರಿಂಗ್ ಎಇಇ ಮಂಜುನಾಥ್ ಇದ್ದರು.