ನಾಗರಕುಂಟೆ ಜೀರ್ಣೋದ್ಧಾರಕ್ಕೆ ಜಿಲ್ಲಾ ಯುವ ಬಿಜೆಪಿ ಒತ್ತಾಯ
ಕೋಲಾರ: ಪುರಾಣ ಪ್ರಸಿದ್ಧ ನಗರದ ಕಠಾರಿಪಾಳ್ಯದ ನಾಗರಕುಂಟೆಯ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದ್ದು ಕೂಡಲೇ ಕಾಮಗಾರಿ ಪುನರಾರಂಭಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಬುಧವಾರ ಅಪರ ಹಾಗೂ ಜಿಲ್ಲಾ ಪ್ರಭಾರ ಜಿಲ್ಲಾಧಿಕಾರಿ ಡಾ. ವೆಂಕಟೇಶಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ವರ್ಷ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಅವರು ಎಲ್ಲ ಇಲಾಖೆಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ನಾಗರಕುಂಟೆಯ ಸ್ವಚ್ಛತಾ ಕಾರ್ಯಕ್ಕಾಗಿ ಶ್ರಮದಾನ ಶಿಬಿರ ನಡೆಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಕಾರಣಾಂತರಗಳಿಂದ ಕೆಲಸ ನಿಂತಿರುವುದರಿಂದ ಮತ್ತೆ ನಾಗರಕುಂಟೆ ಕಸದ ತೊಟ್ಟಿಯಾಗುತ್ತಿರುವುದರಿಂದ ಕೂಡಲೇ ಕಾಮಗಾರಿ ಆರಂಭಿಸಬೇಕೆಂದು ಬಿಜೆಪಿ ನಿಯೋಗ ಒತ್ತಾಯಿಸಿತು.
ಮನವಿ ಪತ್ರ ನೀಡುವಾಗ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಓಂ ಶಕ್ತಿ ಚಲಪತಿ, ವಕೀಲ ನರಸಿಂಹ, ಮುಖಂಡರಾದ ಜಾಮಿನ್, ಓಇಲೇಶ್, ಕೀಲುಕೋಟೆ ರವಿ, ಮಂಜು, ವಿಘ್ನೇಶ್, ಅಶೋಕ್ ಮುಂತಾದವರು ಇದ್ದರು.