ನಾಳೆ ದಿನಗೂಲಿ ನೌಕರರ ಮುಷ್ಕರ
ಕೋಲಾರ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ದಿನಗೂಲಿ ನೌಕರರಾದ ಅಡುಗೆಯವರು ಮತ್ತು ಅಡುಗೆ ಸಹಾಯಕರಿಗೆ ಸುಮಾರು 10 ತಿಂಗಳಿನಿಂದ ವೇತನ ನೀಡದೇ ಅಧಿಕಾರಿಗಳು ವಂಚಿಸುತ್ತಿದ್ದು ಸರ್ಕಾರದ ಗಮನ ಸೆಳೆಯಲು ಜು.4 ರಂದು ದಿನಗೂಲಿ ನೌಕರರು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಿರುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ, ಗೌರವಧನ ನೌಕರರ ಮಹಾಮಂಡಳಿಯ ಕೋಲಾರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಎಂ. ಮಂಜುನಾಥ್ ಹಾಗೂ ಕಾರ್ಯದರ್ಶಿ ಜಿ.ಎಂ. ಸುರೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆ.ಜಿ.ಐ.ಡಿ ಕಚೇರಿ ಸ್ಥಳಾಂತರ
ಕೋಲಾರ: ಜಿಲ್ಲಾ ವಿಮಾಧಿಕಾರಿಗಳ ಕಚೇರಿ, ಕೆ.ಜಿ.ಐ.ಡಿ, ಕೋಲಾರ ಕಚೇರಿ ಜುಲೈ 1 ರಿಂದ ಕೋಲಾರ ನಗರದ ದೊಡ್ಡಪೇಟೆಯಲ್ಲಿರುವ ವೈಶ್ಯ ಬ್ಯಾಂಕ್ ಕಟ್ಟಡದ ಮೊದಲನೆ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಜಿಲ್ಲಾ ವಿಮಾಧಿಕಾರಿಗಳು ತಿಳಿಸಿದ್ದಾರೆ.
ಇಂದು ಕೋಲಾರಕ್ಕೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
ಕೋಲಾರ: ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಅವರು ಬುಧವಾರ ಕೋಲಾರಕ್ಕೆ ಭೇಟಿ ನೀಡಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಜಿ.ಪಂ ಸಭಾಂಗಣದಲ್ಲಿ ಸಚಿವರು ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಕೋಲಾರಕ್ಕೆ ಪ್ರಥಮ ಭೇಟಿ ನೀಡುತ್ತಿರುವ ಸಚಿವರನ್ನು ಅದ್ಧೂರಿಯಾಗಿ ಸ್ವಾಗತಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ಕುಮಾರ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಪ್ರವಾಸಿ ಮಂದಿರಕ್ಕೆ ಬುಧವಾರ ಬೆಳಿಗ್ಗೆ 10 ಗಂಟೆಗೆ ಸಚಿವರು ಆಗಮಿಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕೆಂದು ಅಧ್ಯಕ್ಷರ ಪರವಾಗಿ ಜಿಲ್ಲಾ ಕಾಂಗ್ರೆಸ್ ವಕ್ತಾರ ನಾಗನಾಳ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಥಮ ಪಿಯು ದಾಖಲಾತಿ ಅವಧಿ ವಿಸ್ತರಣೆ
ಕೋಲಾರ: ಪ್ರಥಮ ಪಿಯುಸಿ ದಾಖಲಾತಿಗೆ ಕೊನೆ ದಿನಾಂಕವನ್ನು ಜು.10ರವರೆಗೂ ವಿಸ್ತರಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಜಿ. ದೊರೆಸ್ವಾಮಿ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಕಳೆದ ಏಪ್ರಿಲ್ನಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಇನ್ನೂ ದಾಖಲಾಗದ ವಿದ್ಯಾರ್ಥಿಗಳು ಈ ಸದುಪಯೋಗವನ್ನು ಬಳಸಿಕೊಳ್ಳಲು ಕೋರಿದ್ದಾರೆ. ಶುಲ್ಕ ಮತ್ತು ದಂಡ ಶುಲ್ಕ 1820 ರು.ಪಾವತಿಸಿ ದಾಖಲಾಗಬಹುದಾಗಿದ್ದು, ಈ ಅವಧಿ ವಿಸ್ತರಣೆ ದ್ವಿತೀಯ ಪಿಯುಸಿ ದಾಖಲಾತಿಗೂ ಅನ್ವಯಿಸುತ್ತದೆ ಎಂದು ತಿಳಿಸಿದ್ದಾರೆ.
ವರದಕ್ಷಿಣೆ ಕಿರುಕುಳ: ವ್ಯಕ್ತಿ ಬಂಧನ
ಚಿಂತಾಮಣಿ: ವರದಕ್ಷಿಣೆಗಾಗಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿರುವ ಗಂಡನ ವಿರುದ್ಧ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೋಭ ಎಂಬಾಕೆಯನ್ನು ಆಂಧ್ರಪ್ರದೇಶದ ಟಿ. ಸದಂನಿಂದ ತಾಲೂಕಿನ ಅಂಕಾಲಮಡುಗು ಗ್ರಾಮದ ನಿವಾಸಿ ವೆಂಕಟರವಣಪ್ಪ ಎಂಬಾತನ ಜತೆಗೆ ಕೆಲವು ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ವರೋಪಚಾರ ನೀಡಿದ್ದರೂ ವರದಕ್ಷಿಣೆಗಾಗಿ ತನ್ನ ಅಣ್ಣಂದಿರಾದ ನಾರಾಯಣಪ್ಪ ಹಾಗೂ ನರಸಿಂಹಪ್ಪ ಎಂಬವರ ಮಾತುಗಳು ಕೇಳಿ ಕಿರುಕುಳ ನೀಡುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾಳೆ. ಬಟ್ಲಹಳ್ಳಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರವೀಣ್ಕುಮಾರ್ಪತಿ, ವೆಂಕಟರವಣಪ್ಪನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ನಾರಾಯಣಪ್ಪ, ನರಸಿಂಹಪ್ಪ ತಲೆಮರೆಸಿಕೊಂಡಿದ್ದಾರೆ.
ಹೊಸಹುಡ್ಯದಲ್ಲಿ ಜನಸ್ಪಂದನ
ಚಿಕ್ಕಬಳ್ಳಾಪುರ: ತಾಲೂಕಿನ ಹೊಸಹುಡ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜು.6 ರಂದು ಬೆಳಗ್ಗೆ 11 ಗಂಟೆಗೆ ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್ ಅಧ್ಯಕ್ಷತೆ ವಹಿಸಲಿದ್ದು ಚುನಾಯಿತ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸಭೆಯಲ್ಲಿ ತಮ್ಮ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಬೇಕೆಂದು ತಾಲೂಕು ಆಡಳಿತ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಮಿಲ್ನಲ್ಲಿ ಅಗ್ನಿ ದುರಂತ
ಮಳವಳ್ಳಿ: ಸೋಮವಾರ ತಡರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸಾಮಿಲ್ವೊಂದರ ಬಹುತೇಕ ಎಲ್ಲಾ ಯಂತ್ರೋಪಕರಣಗಳು ಹಾಗೂ ಬೆಲೆ ಬಾಳುವ ಮರಗಳು ಸುಟ್ಟುಕರಕಲಾದ ಘಟನೆ ಜರುಗಿದೆ. ಪಟ್ಟಣದ ಕನಕಪುರ ರಸ್ತೆಯಲ್ಲಿರುವ ಮಹದೇಶ್ವರ ಸಮುದಾಯ ಭವನದ ಆವರಣದಲ್ಲಿರುವ ಪಂಚಲಿಂಗೇಶ್ವರ ಸಾಮಿಲ್ನಲ್ಲಿ ಸೋಮವಾರ ತಡರಾತ್ರಿ 2-ರ ಸುಮಾರಿನಲ್ಲಿ ಬಾರಿ ಅಗ್ನಿ ದುರಂತ ಸಂಭವಿಸಿದ್ದು ಮಿಲಲ್ನಲ್ಲಿದ್ದ ಕಾವಲುಗಾರ ಮಲಗಿದ್ದಾಗ ಈ ಅವಘಡ ಸಂಭವಿಸಿದ್ದು ಬೆಂಕಿಯ ಕೆನ್ನಾಲಿಗೆ ಗಮನಿಸಿ ಹಾರಿಸಲು ಪ್ರಯತ್ನಿಸುತ್ತಿದ್ದಂತೆ, ಬೆಂಕಿಯ ಜ್ವಾಲೆ ಅತ್ತರಿ ಮಿಷನ್, ಮೀಟರ್ಬೋರ್ಡ್ ಸುಟ್ಟು ಬೂದಿಯಾಗಿದ್ದು, ವಿದ್ಯುತ್ ಶಾರ್ಟ್ ಸರ್ಕಿಟ್ ಇರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ಅವಘಡದಿಂದ ಸುಮಾರು ರು. 10 ಲಕ್ಷಕ್ಕೂ ಹೆಚ್ಚು ನಷ್ಟು ಉಂಟಾಗಿ ಸಾಮಿಲ್ ಮಾಲೀಕ ದೊಡ್ಡಣ್ಣ ಅಲವತ್ತುಕೊಂಡಿದ್ದಾರೆ.