ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಂಗಾರಪೇಟೆ ಬಸ್‌ನಿಲ್ದಾಣದಲ್ಲಿ ಜೋಡಿ ಕೊಲೆ

Vishwanath S
Updated On : 3 Jul 2013, 12:59 pm

ಕ.ಪ್ರ.ವಾರ್ತೆ ,  ಬಂಗಾರಪೇಟೆ ,  ಜು. 2
ಪಟ್ಟಣದಲ್ಲಿ ಒಂದೇ ರಾತ್ರಿ ಜೋಡಿ ಕೊಲೆ ಪ್ರಕರಣ ನಡೆದಿರುವುದು ನಾಗರಿಕರನ್ನು ತಲ್ಲಣಗೊಳಿಸುವಂತೆ ಮಾಡಿದೆ.
ಪಟ್ಟಣದ ಪುರಸಭೆ ಬಸ್‌ನಿಲ್ದಾಣದಲ್ಲಿ ಈ ಕೊಲೆಗಳು ನಡೆದಿದ್ದು, ಒಬ್ಬ ತಾಲೂಕಿನ ಬೂದಿಕೋಟೆ ಗ್ರಾಮದ ಕೂಲಿ ಕಾರ್ಮಿಕ ಸತೀಶ್ 24 ಎಂದು ಗುರುತಿಸಲಾಗಿದೆ ಮತ್ತೊಬ್ಬನ ಗುರುತಿ ಪತ್ತೆಯಾಗಿಲ್ಲ.
ಸೋಮವಾರ ರಾತ್ರಿ ಕುಡಿದು ಜಗಳವಾಡಿಕೊಂಡು ಈ ಕೊಲೆಗಳನ್ನು ಮಾಡಿರುವಂತೆ ವಾತಾವರಣ ಸೃಷ್ಟಿಯಾಗಿದ್ದು, ಕೊಲೆಗಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರ ವೃಕ್ತಿಗಳ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಲಾಗಿದ್ದು, ಬಸ್‌ನಿಲ್ದಾಣದಲ್ಲಿ ರಕ್ತದ ಕಲೆಗಳಿಂದ ಕೂಡಿದ್ದವು.
ಕಳೆದ ಎರಡು ದಿನಗಳ ಹಿಂದಷ್ಟೆ ವ್ಯಕ್ತಿಯೊಬ್ಬನ್ನು ಇದೇ ರೀತಿಯಲ್ಲಿ ಬಸ್ ನಿಲ್ದಾಣದಲ್ಲೇ ಕೊಲೆ ಮಾಡಲಾಗಿತ್ತು.
ಇದಲ್ಲದೆ ಕಳೆದ ವಾರ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥನನ್ನು ಕೊಲೆ ಮಾಡಿ ಇಲ್ಲಿಗೆ ತಂದು ಬಿಸಾಡಿ ಪೆಟ್ರೋಲ್ ಹಾಕಿ ಸುಡಲಾಗಿತ್ತು. ಒಂದರ ಹಿಂದೆ ಸರಣಿ ಕೊಲೆ ಪ್ರಕರಣಗಳು ಪಟ್ಟಣದಲ್ಲಿ ಸಂಭವಿಸುತ್ತಿರುವುದು ನಾಗರಿಕರನ್ನು ಬೆಚ್ಚಿ ಬೀಳಿಸಿದೆ.
ಜೋಡಿ ಕೊಲೆ ನಡೆದ ಸ್ಥಳಕ್ಕೆ ಡಿಐಜಿ ಅರುಣ್‌ಕುಮಾರ್‌ಪಾಂಡೆ ಭೇಟಿ ನೀಡಿ ಪರಿಶೀಲಿಸಿದರು.ಪಟ್ಟಣದಲ್ಲಿ ಇತ್ತೀಚಿಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಜೋಡಿ ಕೊಲೆ ಆರೋಪಿಗಳನ್ನು ತ್ವರಿತವಾಗಿ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಅತಿ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ನಾಗರಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಜನರ ರಕ್ಷಣೆಗೆ ಇಲಾಖೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ಕೆಜಿಎಫ್ ರಕ್ಷಣಾಧಿಕಾರಿ ರೋಹಿಣಿ, ಕೋಲಾರ ಎಸ್ಪಿ ರಾಮ್‌ನಿವಾಸ್, ಸಿಐ ವೆಂಕಟಾಚಲಪತಿ ಉಪಸ್ಥಿತರಿದ್ದರು.


ಹೆಚ್ಚಿದ ಕೊಲೆ ಪ್ರಕರಣ; ಜನರ ತಲ್ಲಣ
ಕ.ಪ್ರ.ವಾರ್ತೆ ,  ಕೋಲಾರ ,  ಜು. 2

ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಕೋಲಾರ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ 8ಕ್ಕೂ ಹೆಚ್ಚು ಕೊಲೆ ಪ್ರಕರಣಗಳು ಮತ್ತು ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಹತ್ತಾರು ಪ್ರಕರಣಗಳಿಂದಾಗಿ ಜನತೆ ತಲ್ಲಣಗೊಂಡಿದ್ದಾರೆ.
ಗಾಢ ನಿದ್ರೆಯಲ್ಲಿದವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವುದು, ಜಮೀನು ವಿವಾದ, ವೈಷಮ್ಯ ಮುಂತಾದ ಕಾರಣಗಳಿಂದ ನಡೆದಿರುವ ಕೊಲೆಗಳು ಪೊಲೀಸ್ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದ್ದು, ಆರೋಪಿಗಳ ಬಂಧನ ಸವಾಲಾಗಿದೆ.
ಕೆಜಿಎಫ್ ಪೊಲೀಸ್ ವಿಭಾಗದಲ್ಲೂ ಕೊಲೆಗಳು ಹೆಚ್ಚಾಗಿದೆ, ಬಂಗಾರಪೇಟೆ ಬಸ್‌ನಿಲ್ದಾಣದಲ್ಲಿ ದುಷ್ಕರ್ಮಿಗಳು ಇಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವುದು ಸಾರ್ವಜನಿಕರ ಎದೆ ನಡುಗಿಸಿದೆ. ಕೆಜಿಎಫ್‌ನಲ್ಲಿ 2013ರ ಜೂನ್ ತಿಂಗಳವರೆಗೆ ನಡೆದಿರುವ ಕೊಲೆಗಳು ಪೊಲೀಸರ ನಿದ್ರೆಗೆಡಿಸಿದೆ.
ಕೋಲಾರ ನಗರದ ಜಮಾಲಲ್ಷಾ ನಗರದಲ್ಲಿ ದುಷ್ಕರ್ಮಿಗಳು ಎಪಿಎಂಸಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸೈಯದ್ಖ್‌ಲೀಲ್ ಎಂಬುವರನ್ನು ಕೊಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮನೆಗೆ ಹೋಗದೆ ಬೇರೊಬ್ಬರ ಮನೆಯ ಮಹಡಿ ಮೇಲೆ ಮಲಗಿದ್ದ ಖಲೀಲ್ ಅವರ ತೆಲೆ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಎಎಸ್ಪಿ ಭಗವಾನ್‌ದಾಸ್, ಡಿವೈಎಸ್ಪಿ ಶ್ರೀಹರಿ ಬರಗೂರು ಹಾಗೂ ನಗರ ಠಾಣೆಯ ಪಿಎಸ್‌ಐ ಪ್ರಕಾಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ರೀತಿ ಬಂಗಾರಪೇಟೆಯಲ್ಲಿ ಇಬ್ಬರ ಕೊಲೆಯಾಗಿದ್ದು ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖೆ ಕೈಗೊಂಡಿದ್ದಾರೆ.
ಜನವರಿ ತಿಂಗಳಲ್ಲಿ 1, ಫೆಬ್ರವರಿಯಲ್ಲಿ 2, ಮಾರ್ಚ್‌ನಲ್ಲಿ 2, ಮೇ.ನಲ್ಲಿ 1 ಹಾಗೂ ಜುಲೈನಲ್ಲಿ 1 ಪ್ರಕರಣ ದಾಖಲು ಆಗಿದೆ.

ಪತ್ನಿ ಕೊಲೆ ಮಾಡಿ ಮಗನೊಂದಿಗೆ ಆರೋಪಿ ಪರಾರಿ
ಕೋಲಾರ:
ಶ್ರೀನಿವಾಸಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಬೈರಪಲ್ಲಿ ಗ್ರಾಮದಲ್ಲಿ ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿ ಮಗುವಿನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ. ಬೈರಪಲ್ಲಿ ಗ್ರಾಮದ ಪಟೇಲ್ ರಾಮರೆಡ್ಡಿ ಮಾವಿನ ತೋಪಿನಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಗಿರಿ ಎಂಬುವರು ಅಲ್ಲಿಯೇ ವಾಸವಾಗಿದ್ದು ಈ ಕೃತ್ಯವನ್ನು ಎಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ರಾಮರೆಡ್ಡಿ ರವರ ಮಾವಿನ ಫಸಲನ್ನು ಖರೀದಿಸಿದ್ದ ರಾಮಪ್ಪ ಎಂಬುವರು ಜು.1ರಂದು ರಾತ್ರಿ 10 ಗಂಟೆ ಸಮಯದಲ್ಲಿ ತೋಪಿಗೆ ಹೋದಾಗ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.

ಕ್ಯಾಂಟರ್ ಡಿಕ್ಕಿ-ಬೈಕ್ ಸವಾರ ಸಾವು
ಕೋಲಾರ:
ತಾಲೂಕಿನ ವೇಮಗಲ್ ಪೊಲೀಸ್ ಠಾಣೆಯ ಎನ್.ಹೆಚ್-4 ರಸ್ತೆಯ ನರಸಾಪುರ ಬೈಪಾಸ್‌ನಲ್ಲಿ ಕಳೆದ ರಾತ್ರಿ ಮೋಟಾರ್ ಬೈಕ್ ರಸ್ತೆಬದಿ ನಿಲ್ಲಿಸಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಾಲೂರು ತಾಲೂಕಿನ ಯಶವಂತಪುರ ಗ್ರಾಮದ ಲಕ್ಷ್ಮಣ ಎಂಬುವರು ಮೃತಪಟ್ಟಿದ್ದು ಮತ್ತೊಬ್ಬ ಗೋಪಾಲ್ ತೀವ್ರವಾಗಿ ಗಾಯಗೊಂಡಿದ್ದಾರೆ. ಲಕ್ಷ್ಮಣ ಮತ್ತು ಗೋಪಾಲ್ ಮೋಟಾರ್‌ಬೈಕ್‌ನಲ್ಲಿ ಹೋಗುತ್ತಿದ್ದರು. ಕತ್ತಲ್ಲಿ ಕ್ಯಾಂಟರ್ ನಿಲ್ಲಿಸಿರುವುದು ತಿಳಿಯದೆ ಕ್ಯಾಂಟರ್ ಹಿಂಭಾಗಕ್ಕೆ ಡಿಕ್ಕಿ ಹೊಡೆದಿರುವುದರಿಂದ ಅಪಘಾತ ಸಂಭವಿಸಿದೆ.

ಪೊಲೀಸ್ ವಾಹನ ಚಾಲಕ ಸಾವು
ಕೋಲಾರ:
ತಾಲೂಕಿನ ನರಸಾಪುರದ ಬಳಿ ಸೋಮವಾರ ರಾತ್ರಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಜಖಂಗೊಂಡಿದ್ದ ವಾಹನಗಳ ತೆರವು ಕಾರ್ಯಾಚರಣೆಗಾಗಿ ಹೋಗಿದ್ದ ಪೊಲೀಸ್ ಇಲಾಖೆಯ ಗಜೇಂದ್ರ ವಾಹನ ಚಾಲಕ ರೇಣುಕಾ ಪ್ರಸನ್ನ ಕುಮಾರೆ ಬೆಂಗಳೂರಿನಿಂದ ಬರುತ್ತಿದ್ದ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ನಡೆದಿದೆ.
ಮಂಗಳವಾರ ಬೆಳಿಗ್ಗೆ ರೇಣುಕಾ ಪ್ರಸನ್ನ ಕುಮಾರ್ ಗಜೇಂದ್ರ ವಾಹನದೊಂದಿಗೆ ಅಪಘಾತ ಸ್ಥಳಕ್ಕೆ ಹೋಗಿ ಲ್ಯಾಂಕೋ ಕಂಪನಿಯ ಸಿಬ್ಬಂದಿಯೊಂದಿಗೆ ವಾಹನಗಳ ತೆರವು ಕಾರ್ಯದಲ್ಲಿ ನಿತರರಾಗಿದ್ದಾಗ ಟ್ಯಾಂಕರ್‌ನ ಚಾಲಕ ವೇಗವಾಗಿ ತನ್ನ ವಾಹನ ಓಡಿಸಿಕೊಂಡು ಬಂದು ಮೊದಲು ಲ್ಯಾಂಕೋ ಕಂಪನಿಯ ಈಚರ್ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ಗಜೇಂದ್ರ ಕ್ರೈನ್ ವಾಹನದ ಮುಂದೆ ನಿಂತಿದ್ದ ರೇಣುಕಾ ಪ್ರಸನ್ನ ಕುಮಾರ್‌ಗೆ ಡಿಕ್ಕಿ ಹೊಡೆದಿದ್ದರಿಂದ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement