ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಾಗೇಪಲ್ಲಿ ರೋಗಗ್ರಸ್ತ ಆಸ್ಪತ್ರೆಗೆ ಮೇಜರ್ ಸರ್ಜರಿ

Vishwanath S
Updated On : 3 Jul 2013, 12:58 pm

ಕ.ಪ್ರ. ವಾರ್ತೆ ,  ಬಾಗೇಪಲ್ಲಿ ,  ಜು.2
ರೋಗಗ್ರಸ್ತ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಮೂಲ ಸೌಲಭ್ಯ ಒದಗಿಸುವುದರ ಜತೆಗೆ ಕಾಡುತ್ತಿರುವ ಸಮಸ್ಯೆಗಳನ್ನು ಬಗೆಹರಿಸಿ ಮಾದರಿ ಆಸ್ಪತ್ರೆಯನ್ನಾಗಿಸುವುದಾಗಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಭರವಸೆ ನೀಡಿದರು.
ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿನ ವೈದ್ಯರು, ದಾದಿಯರು ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ವರ್ಗದವರ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 5ವರ್ಷಗಳಿಂದಲೂ ಈ ಆಸ್ಪತ್ರೆಯಲ್ಲಿನ ವಿದ್ಯಮಾನಗಳನ್ನು ಗಮನಿಸುತ್ತಿದ್ದೇನೆ. ಯಾವುದೇ ರೀತಿಯಲ್ಲಿ ಆಸ್ಪತ್ರೆಯು ಬದಲಾವಣೆಯಾಗಿಲ್ಲ. 12 ವೈದ್ಯರು ಇರುವ ಕಡೆ ಕೇವಲ 4 ವೈದ್ಯರು ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶೋಚನೀಯ ಸಂಗತಿ. ಪಟ್ಟಣ ಸೇರಿದಂತೆ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಬರುವಂತಹ ವೈದ್ಯರಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸುವಂತಹ ಪ್ರಯತ್ನವನ್ನು ಮಾಡುತ್ತೇನೆ. ಅಲ್ಲದೇ ವೈದ್ಯರು, ದಾದಿಯರು ಸೇರಿದಂತೆ ಸಿಬ್ಬಂದಿ ವರ್ಗದವರಿಗೆ ಸಮರ್ಪಕ ರಕ್ಷಣೆ ಒದಗಿಸುತ್ತೇನೆ. ಇನ್ನೂ ಸಿಬ್ಬಂದಿ ಭಯದ ವಾತಾವರಣದಿಂದ ಆಚೆ ಬಂದು ಮುಕ್ತವಾಗಿ,ಪ್ರಾಮಾಣಿಕವಾಗಿ ಬಡವರ ಸೇವೆಯನ್ನು ಮಾಡಬೇಕೆಂದು ಮನವಿ ಮಾಡಿದರು.
ತಾಲೂಕು ಕೇಂದ್ರ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಡವರಿಗೆ ಸರಿಯಾಗಿ ಚಿಕಿತ್ಸೆಯನ್ನು ನೀಡುತ್ತಿಲ್ಲ ಹಾಗೂ ಚೇಳೂರು ಆಸ್ಪತ್ರೆಗೆ ಬರುವಂತಹ ಬಡವರಿಗೆ ಸರಿಯಾಗಿ ಔಷಧಿಗಳನ್ನು ನೀಡದೇ ಚೀಟಿಗಳನ್ನು ಬರೆದು ಮೆಡಿಕಲ್ ಸ್ಟೋರ್‌ಗಳಿಗೆ ಕಳುಹಿಸುತ್ತಿರುವ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಇನ್ನು ಮುಂದೆ ಇಂತಹ ಘಟನೆಗಳಿಗೆ ಅವಕಾಶ ನೀಡಬೇಡಿ, ಔಷಧಿ ಮತ್ತು ಮಾತ್ರೆಗಳ ಕೊರತೆ ಕಂಡು ಬಂದಲ್ಲಿ ತಕ್ಷಣ ನನ್ನ ಗಮನಕ್ಕೆ ತನ್ನಿ ಎಂದರು.
ಶಾಸಕರ ಪ್ರಶ್ನೆಗೆ ಉತ್ತರಿಸಿದ ಫಾರ್ಮಸಿಸ್ಟ್ ಜಯಚಂದ್ರರೆಡ್ಡಿ, ತಾಲೂಕಿನಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲೂಕಿನ ಎಲ್ಲಾ ಪಿಹೆಚ್‌ಸಿ ಕೇಂದ್ರಗಳಿಗೆ 16 ಲಕ್ಷ 80 ಸಾವಿರ ರೂಗಳ ಅನುದಾನವನ್ನು ನೀಡಲಾಗುತ್ತಿದೆ ಈ ಹಣ ಸಾಕಾಗುವುದಿಲ್ಲ ಇನ್ನು ಆರು ಲಕ್ಷ ಕೊರತೆಯಿದೆ ಎಂದರು. ಆಗ ಶಾಸಕರು ಮಧ್ಯಪ್ರವೇಶ ಮಾಡಿ ಹಾವು ನಾಯಿಗಳು ಕಚ್ಚಿದರೆ ಔಷಧಿ ಮುಕ್ತವಾಗಿ ಸರಬರಾಜು ಆಗುತ್ತಿದೆ ಎಂದು ಪ್ರಶ್ನಿಸಿದರು. ಅದಕ್ಕೆ ಔಷಧಿಗಳನ್ನು ಖರೀದಿಸಲು ಹಣದ ಕೊರತೆ ಇದೆ ಎಂಬ ಉತ್ತರ ಬಂತು.
ಚಳಿಗಾಲ ಮತ್ತು ಮಳೆಗಾಲದಲ್ಲಿ ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಬೀಸಿ ನೀರು ಕೊಡಲು ಸಾಧ್ಯವಾಗುತ್ತಿಲ್ಲ, ಆಸ್ಪತ್ರೆಯಲ್ಲಿ ವೈರಿಂಗ್ ವ್ಯವಸ್ಥೆ ಸರಿಯಲ್ಲದ ಕಾರಣ ಪ್ಯಾನು, ಫ್ರಿಡ್ಜ್ ಇನ್ನು ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿವೆ, ಕುಡಿಯುವ ನೀರಿಗೆ ಪರದಾಡುವಂತಹ ಪರಿಸ್ಥಿತಿ ಇರುವುದರಿಂದ ಒಂದು ಕೊಳವೆ ಬಾವಿಯ ಅವಶ್ಯಕತೆಯಿದೆ ಎಂದು ದಾದಿ ಮಂಜುಳ ಅವರು ತಮ್ಮ ಅಸಹಾಯಕತೆ ಶಾಸಕರ ಮುಂದೆ ತೋಡಿಕೊಂಡಾಗ ಸ್ಪಂದಿಸಿದ ಶಾಸಕರು, 15 ದಿನಗಳಲ್ಲಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್, ಆಡಳಿತ ವೈದ್ಯಾಧಿಕಾರಿ ಮಂಜೇನಾಯಕ್, ಡಾ.ಸತ್ಯನಾರಾಯಣರೆಡ್ಡಿ, ಡಾ. ಪ್ರತಿಭಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎ.ಜಿ. ಸುಧಾಕರ್, ಜಿ.ಪಂ. ಮಾಜಿ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಹನುಮಂತರೆಡ್ಡಿ, ಮುಖಂಡ ಅಮರನಾಥರೆಡ್ಡಿ, ಪುರಸಭೆ ಸದಸ್ಯ ಎನ್. ನರಸಿಂಹಯ್ಯಶೆಟ್ಟಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement