ಸಮಯಕ್ಕೆ ಬಾರದ ಬಸ್; ದಲಿತ ಸೇನೆ ಪ್ರತಿಭಟನೆ
ಕೆಜಿಎಫ್: ಗ್ರಾಮಾಂತರ ಭಾಗಗಳಿಂದ ಬರುವ ಶಾಲಾ ಮಕ್ಕಳಿಗೆ ಸರಿಯಾದ ಸಮಯಕ್ಕೆ ರಾಜ್ಯ ಸಾರಿಗೆ ಬಸ್ಸುಗಳನ್ನು ಒದಗಿಸುವಂತೆ ಆಗ್ರಹಿಸಿ ಕೆಜಿಎಫ್ ರಾಜ್ಯ ಸಾರಿಗೆ ಬಸ್ ಘಟಕದ ಎದುರು ಕರ್ನಾಟಕ ದಲಿತ ಸಿಂಹ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಾಮಸಮುದ್ರಂ, ವಲಗಮಾದಿ, ಮುಂತಾದ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ನಗರದ ಸೆಂಟ್ ಜೋಸೆಫ್ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ.
ಮನೆಗೆ ತೆರಳಲು ತೊಂದರೆ: ಶಾಲೆ ಬಿಟ್ಟ ನಂತರ ಶಾಲಾ ಮಕ್ಕಳಿಗೆ ಮನೆಗೆ ತೆರಳಲು ಸರಿಯಾಗಿ ಬಸ್ಗಳು ಒದಗಿಸಿಲ್ಲ ಇದರಿಂದ ಕತ್ತಲು ಆವರಿಸುವುದರಿಂದ ಮಕ್ಕಳು ಆಟೋಗಳು ಮತ್ತು ಇತರೆ ಖಾಸಗಿ ವಾಹನಗಳ ಮೂಲಕ ಮನೆಗಳನ್ನು ಸೇರುತ್ತಿದ್ದಾರೆ. ಇದರಿಂದ ಶಾಲಾ ಮಕ್ಕಳಿಗೆ ಸೂಕ್ತ ರಕ್ಷಣೆಯಿಲ್ಲದ ಕಾರಣ ಪೋಷಕರು ಆತಂಕಕ್ಕೀಡಾಗಿದ್ದಾರೆ ಆದ್ದರಿಂದ ಕೆಜಿಎಫ್ ಘಟಕದ ವ್ಯವಸ್ಥಾಪಕರು ಕೂಡಲೇ ಇತ್ತ ಗಮನಹರಿಸಿ ವಿವಿಧ ಪ್ರದೇಶಗಳಿಂದ ಬರುವ ಶಾಲಾ ಮಕ್ಕಳಿಗೆ ಸೂಕ್ತ ಸಮಯಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಸೌಲಭ್ಯವನ್ನು ಕಲ್ಪಿಸಬೇಕು ಎಂದು ದಲಿತ ಸಿಂಹ ಸೇನೆ ಕಾರ್ಯಕರ್ತರು ಒತ್ತಾಯಿಸಿದರು.
ಅಧಿಕಾರಿಯಿಂದ ಸಮಾಧಾನ: ಈ ವೇಳೆ ಮಾತನಾಡಿದ ಘಟಕದ ಅಧಿಕಾರಿ ತಮ್ಮ ಇಲಾಖೆಯ ವತಿಯಿಂದ ಇಗಾಗಲೇ ಈ ವಿಷಯಕ್ಕೆ ಸಂಬಂಧಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಿ ಬಸ್ ಸೌಲಭ್ಯವನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.