ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೃಷಿ ಭೂಮಿ ಸ್ವಾಧೀನಕ್ಕೆ ಅವಕಾಶ ನೀಡಲ್ಲ

Vishwanath S
Updated On : 7 Jul 2013, 12:40 pm

ಕ.ಪ್ರ. ವಾರ್ತೆ ,  ಕೋಲಾರ ,  ಜು.6
ಕೋಲಾರ-ವೈಟ್‌ಫೀಲ್ಡ್ ನಡುವೆ ರೈಲು ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಿರುವ ಕೇಂದ್ರ ಸರ್ಕಾರ ಮುಂದುವರಿದ ಭಾಗವಾಗಿ ಕೋಲಾರ-ಮುಳಬಾಗಿಲು ರೈಲು ಮಾರ್ಗಕ್ಕೆ ಸಮೀಕ್ಷೆ ನಡೆಸುತ್ತಿರುವುದು ರೈತರಲ್ಲಿ ಆತಂಕ ಉಂಟು ಮಾಡಿದೆ.
ಕಡಪದಿಂದ ಮುಳಬಾಗಿಲುವರೆಗೆ ರೈಲು ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ. ಮುಳಬಾಗಿಲಿನಿಂದ ಕೋಲಾರಕ್ಕೆ ರೈಲು ಮಾರ್ಗವಾದಲ್ಲಿ ವೈಟ್‌ಫೀಲ್ಡ್‌ವರೆಗೆ ರೈಲು ಸಂಪರ್ಕ ಕಲ್ಪಿಸಬಹುದೆಂಬ ಉದ್ದೇಶದಿಂದ ರೇಲ್ವೆ ಇಲಾಖೆಯವರು ಕೋಲಾರ-ಮುಳಬಾಗಿಲು ರೇಲ್ವೆ ಮಾರ್ಗಕ್ಕಾಗಿ ಸರ್ವೆ ಕಾರ್ಯ ನಡೆಸುತ್ತಿದ್ದಾರೆ.
36 ಕಿಮೀ ವ್ಯಾಪ್ತಿಯ ಕೋಲಾರ-ಮುಳಬಾಗಿಲು ರೈಲು ಮಾರ್ಗ ನಿರ್ಮಾಣಕ್ಕಾಗಿ ಕಳೆದ ವರ್ಷವೇ ರೇಲ್ವೆ ಇಲಾಖೆಯವರು ಕೋಲಾರ ತಾಲೂಕಿನ ಅರಹಳ್ಳಿ, ಕೋಡಿಕಣ್ಣೂರು, ಬಾರಂಡಹಳ್ಳಿ, ವದಲವಾಡಿ ಸೇರಿದಂತೆ ವಿವಿಧ ಕಡೆ ರೈತರ ಜಮೀನುಗಳಲ್ಲಿ ಉದ್ದೇಶಿತ ಯೋಜನೆಗಾಗಿ ಗುರುತು ಕಲ್ಲುಗಳನ್ನು ನೆಟ್ಟಿದ್ದು, ಅಂತಿಮ ವರದಿ ನೀಡುವ ಸಲುವಾಗಿ ಸರ್ವೆ ಕಾರ್ಯ ಆರಂಭಿಸಿದ್ದಾರೆ.
ಬೆಂಗಳೂರಿನ ಯಲಹಂಕದ ರಾಮ್ಸುನ್ ಸರ್ವೆ ಕನ್ಸಲ್ಟೆನ್ಸಿ ಸಂಸ್ಥೆಯು ಕೋಲಾರ-ಮುಳಬಾಗಿಲು ರೈಲು ಮಾರ್ಗದ ಸರ್ವೇ ಕಾರ್ಯಕ್ಕೆ ಗುತ್ತಿಗೆ ಪಡೆದಿದೆ. ಸಂಸ್ಥೆಯ ಸರ್ವೆಯರ್ ವೆಂಕಟರೆಡ್ಡಿ ಹಾಗೂ ಸಿಬ್ಬಂದಿ ಶನಿವಾರ ತಾಲೂಕಿನ ವದಲವಾಡಿ ಬಳಿ ರೈತರ ಜಮೀನುಗಳಲ್ಲಿ ಸರ್ವೆ ನಡೆಸುತ್ತಿದ್ದಾಗ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕೋಲಾರ- ಮುಳಬಾಗಿಲು ನಡುವೆ ರೈಲು ಸಂಚಾರಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಅರಹಳ್ಳಿ, ಕೋಡಿಕಣ್ಣೂರು, ವದಲವಾಡಿಯ ಮೂಲಕ ರೈಲು ಮಾರ್ಗ ನಿರ್ಮಾಣದ ಅವಶ್ಯಕತೆಯಿಲ್ಲ, ರೈತರ ಫಲವತ್ತಾದ ಭೂಮಿಯನ್ನು ರೈಲು ಮಾರ್ಗಕ್ಕೆ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲವೆಂದು ಪ್ರತಿಭಟನೆ ವ್ಯಕ್ತವಡಿಸಿದರು.
ಕೆಲ ರೈತರು ಸರ್ವೆಯರ್‌ಗಳನ್ನು ಗ್ರಾಮದಿಂದ ವಾಪಸ್ ಹೋಗುವಂತೆ ಒತ್ತಾಯಿಸಿದರೆ, ಕೆಲವರು ರೇಲ್ವೆ ಇಲಾಖೆಯವರು ಈ ಹಿಂದೆ ಜಮೀನುಗಳಲ್ಲಿ ನೆಟ್ಟಿರುವ ಗುರುತಿನ ಕಲ್ಲುಗಳನ್ನು ಕಿತ್ತು ಹಾಕಿದರು.
ವರದಿ ನೋಡಿ ಮುಂದಿನ ಹೋರಾಟ:  ಅರಹಳ್ಳಿ, ಕೋಡಿಕಣ್ಣೂರು, ವದಲವಾಡಿ, ಬಾರಂಡಹಳ್ಳಿಯ ಸುಮಾರು 40 ರಿಂದ 60 ಎಕರೆ ಭೂಮಿಯಲ್ಲಿ ನೂರಾರು ರೈತರು ಕಷ್ಟಪಟ್ಟು ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಅರ್ಧ ಗುಂಟೆಯ ಜಮೀನು ಇರುವ ರೈತರು ಭೂಮಿ ಕಳೆದುಕೊಂಡಲ್ಲಿ ಜೀವನ ನಡೆಸುವುದು ಕಷ್ಟವಾಗುತ್ತದೆ. ಈ ಪ್ರದೇಶದಲ್ಲಿ 1 ಎಕರೆಗೆ 3 ಕೋಟಿ ಬೆಲೆ ಇದ್ದರೂ ರೈತರು ಭವಿಷ್ಯದ ದೃಷ್ಟಿಯಿಂದ ಭೂಮಿ ಮಾರಾಟ ಮಾಡುತ್ತಿಲ್ಲ. ರೇಲ್ವೆ ಇಲಾಖೆಯವರು ನೀಡುವ ಅಲ್ಪಪರಿಹಾರದಿಂದ ರೈತರ ಬದುಕುವುದು ಸಾಧ್ಯವೇ ಇಲ್ಲವೆಂದು ವದಲವಾಡಿಯ ರೈತ ವೆಂಕಟೇಶಪ್ಪ, ವಕೀಲ ಮಂಜುನಾಥ್, ಅಮರನಾಥ್ ಹಾಗೂ ನಾರಾಯಣಸ್ವಾಮಿ ಇನ್ನಿತರರು ತಿಳಿಸಿದರು.
ಸರ್ವೆ ಕಾರ್ಯದ ನಂತರ ಅಂತಿಮ ವರದಿಯನ್ನು ಗಮನಿಸಿ ನಂತರ ರೈತರನ್ನು ಸಂಘಟಿಸಿ ಪ್ರಬಲ ಹೋರಾಟ ನಡೆಸುವುದಾಗಿ ತಿಳಿಸಿದರು.
ರೈಲು ಮಾರ್ಗಕ್ಕೆ 30 ಮೀಟರ್ ಅಗಲದ ಜಾಗ ಬೇಕಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಭೂಮಿ ಹೊಂದಿರುವ ರೈತರು ರೈಲು ಮಾರ್ಗಕ್ಕೆ ಭೂಮಿ ನೀಡಿದಲ್ಲಿ ಮುಂದೆ ಕೃಷಿ ಮಾಡುವುದಕ್ಕೆ ಇಂಚು ಭೂಮಿ ಇಲ್ಲದೆ ಬೀದಿ ಪಾಲು ಆಗಬೇಕಾಗುತ್ತದೆ. ರೇಲ್ವೆ ಇಲಾಖೆಯವರು ನೀಡುವ ಪರಿಹಾರದಿಂದ ಮತ್ತೊಂದು ಫಲವತ್ತಾದ ಭೂಮಿ ಇಲ್ಲವೇ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲವೆಂದು ವಕೀಲ ವದಲವಾಡಿ ಮಂಜುನಾಥ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಪವರ್ ಗ್ರಿಟ್‌ನಿಂದ ನಷ್ಟ:  ಈ ಹಿಂದೆ ಪವರ್ ಗ್ರಿಡ್ ನಿರ್ಮಾಣಕ್ಕಾಗಿ ರೈತರು ಭೂಮಿ ನೀಡಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ರೈತರ ಹೊಲಗಳಲ್ಲಿ ವಿದ್ಯುತ್ ಕಂಬಗಳನ್ನು ನೆಟ್ಟಿರುವುದರಿಂದ ವಿದ್ಯುತ್ ಕಂಬಗಳ ಆಜುಬಾಜಿನ 50 ಅಡಿ ಪ್ರದೇಶದಲ್ಲಿ ಯಾವುದೇ ಬೆಳೆಗಳನ್ನು ಬೆಳೆಯಲು ಆಗುತ್ತಿಲ್ಲ. ಈಗ ರೈಲು ಮಾರ್ಗಕ್ಕೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಲ್ಲಿ ರೈತರು ಇನ್ನಷ್ಟು ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು.
ರೈತರ ವಿರೋಧದ ನಡುವೆಯೂ ಸರ್ವೆಯರ್‌ಗಳು ತಮ್ಮ ಕೆಲಸ ಮುಂದುವರಿಸಿದರು. ಈ ಸಂದರ್ಭ ಮಾತನಾಡಿದ ಸರ್ವೆಯರ್ ವೆಂಕಟರೆಡ್ಡಿ ಅವರು, ರೇಲ್ವೆ ಇಲಾಖೆಯವರು ನಮಗೆ ಟೆಂಡರ್ ನೀಡಿರುವುದರಿಂದ ಸರ್ವೆ ಕಾರ್ಯ ನಡೆಸುತ್ತಿದ್ದೇವೆ. ರೈತರಲ್ಲಿ ಆತಂಕವಿರುವುದು ನಿಜ. ನಮ್ಮ ಕೆಲಸ ಸರ್ವೆ ಮಾಡಿ ವರದಿ ನೀಡುವುದಷ್ಟೇ ಆಗಿದೆ. ಅಂತಿಮ ನಿರ್ಧಾರ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಳ್ಳುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement