ನಿಸ್ವಾರ್ಥ ಸೇವೆಗೆ ಗೌರವ ಸಲ್ಲಲಿ: ಡಾ.ಶಶಿಧರ್
ಕ.ಪ್ರ.ವಾರ್ತೆ , ಗೌರಿಬಿದನೂರು , ಜು. 6
ಶಿಸ್ತುಬದ್ಧ ಸೇವೆ ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಸೇವಾ ಒಡನಾಟದಿಂದ ಜನಪರ ಕಾಳಜಿಯಿಂದ ಗೌರವ, ಪ್ರಶಸ್ತಿ, ಪದಕಗಳು ತಂತಾನೇ ಒಲಿದುಬರುತ್ತವೆ ಎಂದು ಮಾನಸ ಗ್ರೂಪ್ಸ್ ಮುಖ್ಯಸ್ಥ, ವೈದ್ಯ ಡಾ.ಶಶಿಧರ್ ಅಭಿಪ್ರಾಯಪಟ್ಟರು.
ಪಟ್ಟಣದ ಸುಮಂಗಲಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಆಟೋ ಚಾಲಕರ ಸಂಘವು ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತರಾದ ಚಿಕ್ಕಬಳ್ಳಾಪುರ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಮಹೇಶಕುಮಾರ್ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಳೆದ 6 ವರ್ಷಗಳ ಹಿಂದೆ ಗೌರಿಬಿದನೂರಿನಲ್ಲಿ ಪಿಎಸ್ಐ ಆಗಿದ್ದ ಮಹೇಶಕುಮಾರ್ ಕನ್ನಡ ಭಾಷೆಗೆ ಹಾಗೂ ಕನ್ನಡ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಅಪರಾಧ ಪ್ರಕರಣಗಳನ್ನು ಬೇಧಿಸುವ ಹಾಗೂ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರಿಂದ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಬಂದಿದೆ. ಅವರು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದ ಅವರು ತಮ್ಮ ಅಭಿನಂದನೆ ಸಲ್ಲಿಸಿದರು.
ತಹಸೀಲ್ದಾರ್ ಡಾ.ಎನ್.ಭಾಸ್ಕರ್ ಮಾತನಾಡಿ, ಮಹೇಶಕುಮಾರ್ ಅವರ ಕರ್ತವ್ಯ ನಿಷ್ಠೆ, ಸಾಹಸಗಳನ್ನು ಮೆಚ್ಚಿ ಸರ್ಕಾರ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿರುವುದು ಉಳಿದ ಅಧಿಕಾರಿಗಳಿಗೆ ಮಾರ್ಗದರ್ಶನ ಆಗುವುದರ ಜೊತೆಗೆ ಪೊಲೀಸರು ಮತ್ತಷ್ಟು ಕಾರ್ಯಪ್ರವೃತ್ತರಾಗಲು ಸಹಕಾರಿ ಆಗಲಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ಮಹೇಶ್ಕುಮಾರ್, ಚಿನ್ನದ ಪದಕ ಪಡೆದಿರುವುದರಿಂದ ಕರ್ತವ್ಯವದಲ್ಲಿ ಮತ್ತಷ್ಟು ಜವಾಬ್ದಾರಿ ಬಂದಂತಾಗಿದೆ. ಕಾನೂನು ಜೊತೆಗೆ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರು.
ನಾಲ್ಕು ವರ್ಷಗಳ ಕಾಲ ಗೌರಿಬಿದನೂರು ಪಟ್ಟಣದಲ್ಲಿ ಪುರ ಠಾಣೆಯಲ್ಲಿ ಸಬ್ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಲು ಇಲ್ಲಿನ ನಾಗರಿಕರು ನೀಡಿರುವ ಸಹಕಾರ ಎಂದೆಂದಿಗೂ ಮರೆಯಲಾರೆ. ನಾಗರಿಕರು ಪೊಲೀಸರೊಂದಿಗೆ ಉತ್ತಮ ಸಂಪರ್ಕ ಹೊಂದಬೇಕು. ತಾಲೂಕಿನ ಶಾಂತಿ ಸುವ್ಯವಸ್ಥೆಗೆ ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ್ತರ ಸಂಘದ ಅಧ್ಯಕ್ಷ ದೇವಿ ಮಂಜುನಾಥ್ ಮಾತನಾಡಿ, 4 ವರ್ಷಗಳ ಕಾಲ ಪಟ್ಟಣದ ಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮಹೇಶಕುಮಾರ್ ಅವರು ಕೇವಲ ಕಾನೂನು ಪಾಲನೆಗೆ ಸೀಮಿತವಾಗದೆ, ಸಾರ್ವಜನಿಕರ ಅಚ್ಚುಮೆಚ್ಚಿನ ಅಧಿಕಾರಿಯಾಗಿ ಜನಮನ್ನಣೆ ಪಡೆದಿದ್ದರು ಎಂದರು.
ಆರ್ಯವೈಶ್ಯ ಮಂಡಳಿ, ತಾಲೂಕಿನ ವಿವಿಧ ಗ್ರಾಮಗಳ ಆಟೋ ಚಾಲಕರ ಸಂಘ, ವಿದ್ಯಾ ನಿಧಿ ಪಬ್ಲಿಕ್ ಶಾಲೆ, ತಾಲೂಕು ಛಾಯಾಗ್ರಾಹಕರ ಸಂಘ, ದಲಿತ ಮುಖಂಡರು, ವಾಣಿಜ್ಯೋದ್ಯಮಿಗಳು, ಮುಸ್ಲಿಂ ಮುಖಂಡರು ಮಹೇಶ್ಕುಮಾರ್ ಅವರನ್ನು ಗೌರವಿಸಿ, ಅಂಭಿನಂದಿಸಿದರು.
ವೃತ್ತ ನಿರೀಕ್ಷ ವಿ.ಲಕ್ಷ್ಮಯ್ಯ ಮಾತನಾಡಿದರು. ಮಾನಸ ಗ್ರೂಪ್ಸ್ನ ಡಾ. ಎಚ್.ಎಸ್. ಶಶಿಧರ್, ಮಣಿಕಂಠ ಏಜೆನ್ಸಿಯ ಮಾಲೀಕ ಡಿ.ಎನ್. ವೆಂಕಟರೆಡ್ಡಿ, ಸಬ್ಇನ್ಸ್ಪೆಕ್ಟರ್ಗಳಾದ ಬಿ.ಎಸ್. ಯಶ್ವಂತ್, ದಯಾನಂದ್, ಪತ್ರಕರ್ತರ ಸಂಘದ ಉಪಾಧ್ಯಕ್ಷ ಸಿದ್ದಪ್ಪ, ಕಾರ್ಯದರ್ಶಿ ಎಸ್.ಸಿ.ಜಗನ್ನಾಥರೆಡ್ಡಿ, ಖಜಾಂಚಿ ಪಠಾಣ ಸೈಪುಲ್ಲಾ, ಎಚ್.ಆರ್. ವೆಂಕಟರಾವ್, ಆಟೋ ಚಾಲಕರ ಸಂಘದ ಅಧ್ಯಕ್ಷ ಕೃಷ್ಣ, ಉಪಾಧ್ಯಕ್ಷ ವೆಂಕಟಾಚಲ ಇದ್ದರು.