ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಜೆಟ್‌ನಲ್ಲಿ ಜೀತ ವಿಮುಕ್ತರಿಗೆ ವಿಶೇಷ ಅನುದಾನ ಮೀಸಲಿಗೆ ಒತ್ತಾಯ: ಧರಣಿ

Vishwanath S
Updated On : 7 Jul 2013, 12:41 pm

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಮಂಡಿಸಲಿರುವ ಈ ಬಾರಿಯ ಬಜೆಟ್‌ನಲ್ಲಿ ಜೀತ ವಿಮುಕ್ತರಿಗೆ ವಿಶೇಷ ಅನುದಾನವನ್ನು ಮೀಸಲಿಡಬೇಕು. ಜೀತದಾಳುಗಳ ಹಿತರಕ್ಷಣೆಗೆ ಪ್ರಮುಖವಾಗಿ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಜೀತ ವಿಮುಕ್ತಿ-ಕರ್ನಾಟಕ, ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟ ಪ್ರತಿಭಟನೆ ನಡೆಸಿತು.
ನಗರದ ಪ್ರವಾಸಿ ಮಂದಿರದಿಂದ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕೆಂದು ಘೋಷಣೆಗಳನ್ನು ಕೂಗುತ್ತ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ಕುಳಿತರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜೀವಿಕ ಸಂಘಟನೆ ರಾಜ್ಯ ಸಂಚಾಲಕ ಗೋಪಾಲ್, 2013 ರ ಸಾಲಿನಲ್ಲಿ ಮಂಡನೆಯಾಗುತ್ತಿರುವ ರಾಜ್ಯ ಬಜೆಟ್‌ನಲ್ಲಿ ಜೀತ ವಿಮುಕ್ತರಿಗೆ ಪ್ರತ್ಯೇಕವಾಗಿ ಹಣವನ್ನು ಮೀಸಲಿಡಬೇಕು. ಮಧುಗಿರಿ 916, ಹೆಚ್.ಡಿ.ಕೋಟೆ 609, ಚಿಕ್ಕಬಳ್ಳಾಪುರದಲ್ಲಿ 923 ಮಂದಿ ಜೀತದಿಂದ ವಿಮುಕ್ತರಾಗಿದ್ದು ಇವರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಪರಿಹಾರವನ್ನು ಒದಗಿಸಬೇಕೆಂದು ಒತ್ತಾಯಿಸಿದರು.
ಪ್ರತಿ ವರ್ಷ ರಾಜ್ಯಾದ್ಯಂತ ಏಕಕಾಲದಲ್ಲಿ ಜೀತದಾಳುಗಳ ಮರು ಸಮೀಕ್ಷೆ ನಡೆಸುವುದಲ್ಲದೇ ಜೀತ ವಿಮುಕ್ತರಿಗೆ ಈಗ ನೀಡುತ್ತಿರುವ 20 ಸಾವಿರ ಪರಿಹಾರ ಧನವನ್ನು 2 ಲಕ್ಷ ರು.ಗಳಿಗೆ ಹೆಚ್ಚಿಸಬೇಕು. ಜೀತ ನಿರ್ಮೂಲನೆಯ ಸಮಗ್ರ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕವಾಗಿ ಒಬ್ಬ ಹಿರಿಯ ಶ್ರೇಣಿಯ ಅಧಿಕಾರಿಯನ್ನು ನೇಮಿಸಬೇಕೆಂದು ಒತ್ತಾಯಿಸಿದರು. ಜತೆಗೆ ಬಿಡುಗಡೆಗೊಂಡ ಜೀತದಾಳುಗಳಿಗೆ ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳ ಮೂಲಕ ಸೌಲಭ್ಯಗಳನ್ನು ನೀಡಬೇಕು. ಜೀತ ವಿಮುಕ್ತಿಯ ಜಾಗೃತ ಸಮಿತಿಗಳಲ್ಲಿ ಜೀತ ಪದ್ಧತಿಯ ಬಗ್ಗೆ ಅರಿವಿಲ್ಲದಿರುವವರನ್ನು ಸದಸ್ಯತ್ವದಿಂದ ಮುಕ್ತಗೊಳಿಸಬೇಕೆಂದು ಒತ್ತಾಯಿಸಿದರು.
ಜೀತ ವಿಮುಕ್ತ ಕುಟುಂಬದ ಮಕ್ಕಳಿಗೆ ಮತ್ತು ಬಾಲ ಜೀತದಾಳುಗಳಿಗೆ ವಿಶೇಷ ಆದ್ಯತೆ ಮೇರೆಗೆ ಪ್ರತಿಷ್ಠಿತ ವಸತಿ ಶಾಲೆಗಳಿಗೆ ಅವಕಾಶ ಕಲ್ಪಿಸಬೇಕು. ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಮುಖವಾಗಿ ಜೀತದಾಳು ಕುಟುಂಬದ ಮಹಿಳೆಯರು ಮತ್ತು ಪುರುಷರು ರಚಿಸಿರುವ ಸ್ವಸಹಾಯ ಗುಂಪುಗಳಿಗೆ ವಿಶೇಷ ಅನುದಾನ ಮತ್ತು ಸಾಲ ಸೌಲಭ್ಯವನ್ನು ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೀವಿಕ ಸಂಘಟನೆಯ ಮುಖಂಡರಾದ ರತ್ನಮ್ಮ, ಶ್ರೀನಿವಾಸ್, ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement