ಮನೆಗಳ ಬೀಗ ಒಡೆದು ಸರಣಿ ಕಳವು
ಚಿಕ್ಕಬಳ್ಳಾಪುರ: ನಗರದ ಚಾಮರಾಜಪೇಟೆಯ ಅಂಬೇಡ್ಕರ್ ಕಾಲೋನಿಯಲ್ಲಿ ಶನಿವಾರ ಬೆಳ್ಳಂಬೆಳಿಗ್ಗೆ ಸರಣಿ ಕಳ್ಳತನ ನಡೆದಿದ್ದು ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಅರಿತ ದುಷ್ಕರ್ಮಿಗಳು, ಮನೆಗಳ ಬೀಗ ಹೊಡೆದು ಒಳಗೆಲ್ಲಾ ಜಾಲಾಡಿ ತಮಗೆ ಬೇಕಾದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.
ಅಂಬೇಡ್ಕರ್ ಕಾಲೋನಿಯ ನಿವಾಸಿಗಳಾದ ಹೆಚ್. ಶ್ರೀನಿವಾಸ್, ನರಸಿಂಹಮೂರ್ತಿ, ವೆಂಕಟಪ್ಪ, ಸುಗುಣಮ್ಮ, ಮುನಿಯಮ್ಮ, ರತ್ನಮ್ಮ ಸೇರಿದಂತೆ 6 ಮನೆಗಳಲ್ಲಿ ಕಳ್ಳತನ ನಡೆದಿದೆ.
ಕಾಲೋನಿಯಲ್ಲಿ ಬೀಗ ಹಾಕಿರುವ ಮನೆಗಳನ್ನು ಮಾತ್ರ ಗುರುತಿಸಿ ಕೈ ಚಳಕವನ್ನು ತೋರಿಸಿರುವ ಕದೀಮರು, ಮನೆಗಳಲ್ಲಿ ಬೀರುಗಳನ್ನು ತೆಗೆದು ಅದರೊಳಗಿದ್ದ ಹಣವನ್ನು ಕದ್ದಿದ್ದಾರೆ. ಒಂದು ಮನೆಯಲ್ಲಿ ಮರಕೆಲಸಕ್ಕಾಗಿ ಬಳಸುವ ಯಂತ್ರ, ಮತ್ತೊಂದು ಮನೆಯಲ್ಲಿ ಸುಮಾರು 10 ಸಾವಿರ ರು. ಹಣ, ಬೇರೊಂದು ಮನೆಯಲ್ಲಿ ಓಲೆ ಸೇರಿದಂತೆ ಆಭರಣಗಳನ್ನು ಕಳವು ಮಾಡಲಾಗಿದೆ. ಶನಿವಾರ ರಾತ್ರಿ 1 ಗಂಟೆ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳು ಓಡಾಡುವಾಗ ಕೇಳಿದ ಶಬ್ದದಿಂದ ಎಚ್ಚೆತ್ತುಕೊಂಡ ಸ್ಥಳೀಯ ನಿವಾಸಿಗಳು ಹೋಗಿ ನೋಡುವಷ್ಟರಲ್ಲಿ ಪರಾರಿಯಾಗಿದ್ದಾರೆ. ಅಕ್ಕಪಕ್ಕದಲ್ಲಿ ಮನೆಗಳಿದ್ದರೂ ಸಹ ಯಾರೂ ಇಲ್ಲದೇ ಬೀಗ ಹಾಕಿಕೊಂಡು ಹೋಗಿರುವ ಏಳೆಂಟು ಮನೆಗಳಲ್ಲಿ ಕಳ್ಳತನವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರೇ ದುಷ್ಕೃತ್ಯ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಬಡವರೇ ಹೆಚ್ಚಾಗಿರುವ ಅಂಬೇಡ್ಕರ್ ಕಾಲೋನಿಯಲ್ಲಿ ಈ ಹಿಂದೆ ಎಂದೂ ಸರಣಿ ಕಳ್ಳತನ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಮನೆಗಳನ್ನು ಗುರುತಿಸಿಕೊಂಡು ಕಳ್ಳತನ ಮಾಡಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ನಗರ ಠಾಣೆಯ ಪೊಲೀಸರು ಕಳ್ಳತನವಾಗಿರುವ ಮನೆಗಳಲ್ಲಿ ತಪಾಸಣೆ ನಡೆಸಿದರು. ಮಾಲೀಕರಿಂದ ಮಾಹಿತಿಯನ್ನು ಪಡೆದುಕೊಂಡರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮನೆ ಬೀಗ ಮುಗಿದು ಕಳ್ಳತನ
ಕೋಲಾರ: ಇಲ್ಲಿನ ಮುನೇಶ್ವರ ನಗರದ ನಿವಾಸಿ ಕೋಠೇಶ್ವರ ರಾವ್ ಎಂಬುವರ ಮನೆಯ ಬಾಗಿಲು ಮುರಿದು ಕಳ್ಳರು ನಗ-ನಾಣ್ಯ ದೋಚಿದ್ದಾರೆ. ಜು.4 ರಂದು ಕೋಟೇಶ್ವರರಾವ್ ಅವರು ತಮ್ಮ ಸಂಬಂಧಿಕರ ವಿವಾಹದ ನಿಮಿತ್ತ ಕುಟುಂಬ ಸದಸ್ಯರೊಡೆನೆ ಮನೆಗೆ ಬೀಗ ಹಾಕಿಕೊಂಡು ಹೊಗಿದ್ದರು. ಈ ಸಮಯದಲ್ಲಿ ಮನೆಯ ಬಾಗಿಲಿನ ಬೀಗವನ್ನು ಹೊಡೆದು ಒಳ ಪ್ರವೇಶಿಸಿರುವ ಯಾರೋ ಕಳ್ಳರು ಮನೆಯಲ್ಲಿದ್ದ 34 ಗ್ರಾಂ ತೂಕದ ಬಂಗಾರದ ಒಡವೆ ಹಾಗೂ ನಗದು ಸೇರಿದಂತೆ ಒಟ್ಟು 1 ಲಕ್ಷ ರು. ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ತಲೆ ಕತ್ತರಿಸಿದ ಪ್ರಕರಣ, ಮತ್ತೊಬ್ಬ ಬಂಧನ
ಕೋಲಾರ: ತಾಲೂಕಿನ ಅಣ್ಣಿಹಳ್ಳಿಯಲ್ಲಿ ಗೋವಿಂದಪ್ಪ ಎಂಬುವರ ತಲೆ ಕತ್ತರಿಸಿ ಕೊಲೆ ಮಾಡಿರುವ ಪ್ರಕರಣದ ಮತ್ತೊಬ್ಬ ಆರೋಪಿ ಸಂತೋಷ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಶೇಖರ್ ಎಂಬುವ ತನ್ನ ಚಿಕ್ಕಪ್ಪನ ನಡವಳಿಕೆ ಸರಿಯಿಲ್ಲವೆಂದು ಕಳೆದ ಎರಡು ದಿನಗಳ ಹಿಂದೆ ಮಚ್ಚು ಮತ್ತು ಚಾಕುವಿನಿಂದ ಚಿಕ್ಕಪ್ಪನ ತಲೆ ಕತ್ತರಿಸಿ ರುಂಡವನ್ನು ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲಿಗೆ ಕೊಂಡೊಯ್ದಿದ್ದ. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಹಕಾರ ನೀಡಿದ್ದ ಆರೋಪಿಯ ಸ್ನೇಹಿತ ಸಂತೋಷ್ ಎಂಬುವನನ್ನು ಗ್ರಾಮಾಂತರ ಪೊಲೀಸರು ಬೆಂಗಳೂರಿನ ಯಲಹಂಕದಲ್ಲಿ ಬಂಧಿಸಿದ್ದಾರೆ.
ಕೊಲೆ ಆರೋಪಿಗಳ ಬಂಧನ
ಕೋಲಾರ: ನಗರದ ಜಮಾಲಲ್ ನಗರದಲ್ಲಿ ನಡೆದಿದ್ದ ಸೈಯದ್ ಅಜ್ಮಲ್ ಖಾನ್ ಕೊಲೆ ಸಂಬಂಧ ಪೊಲೀಸರು ಷಹೀನ್ಷಾ ನಗರದ ಅಬ್ದುಲ್ ರಶೀದ್ ಅಲಿಯಾಸ್ ಖಾಲು ಎಂಬುವನನ್ನು ಬಂಧಿಸಿದ್ದಾರೆ. ಮನೆ ಮೇಲಿನ ಮಹಡಿಯಲ್ಲಿ ಮಲಗಿದ್ದಾಗ ವೈಯಕ್ತಿಕ ದ್ವೇಷದಿಂದ ಅಬ್ದುಲ್ ರಶೀದ್ ಅಜ್ಮಲ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದನು. ಆರೋಪಿಯನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಸಿಪಿಐ ರಮೇಶ್ ಹಾಗೂ ತಂಡ ಯಶಸ್ವಿಯಾಗಿದೆ.