ಮೂಲ ಸೌಲಭ್ಯ ವಂಚಿತ ಡಿವಿಜಿ ಶಾಲೆ
ಕ.ಪ್ರ.ವಾರ್ತೆ , ಮುಳಬಾಗಲು , ಜು. 6
ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿದ ಡಿವಿಜಿ ಅವರು ಹುಟ್ಟಿ ಬೆಳೆದ ಮನೆ ಅನಂತರದ ನೂರು ವರ್ಷಗಳ ಬಳಿಕ ಶಾಲೆಯಾಗಿದೆ. ಅಂಥ ಮಹನೀಯರು ಹುಟ್ಟಿದ ಶಾಲೆಗೆ ಕನಿಷ್ಠ ಮೂಲ ಸೌಕರ್ಯ ಕೂಡ ಇಲ್ಲದ ಬಗ್ಗೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ದಿಗ್ಭ್ರಮೆ ವ್ಯಕ್ತಪಡಿಸಿದರು.
ಪಟ್ಟಣದ ಡಿವಿಜಿ ರಸ್ತೆಯ ಡಿ.ವಿ. ಗುಂಡಪ್ಪ ಅವರ ಹುಟ್ಚಿದ ಮನೆ ಶಾಲೆಯಾಗಿ ಪರಿವರ್ತಿತವಾದ ಶಾಲೆಗೆ ಭೇಟೆ ನೀಡಿದ ಸಂದರ್ಭ ಹಾಲಂಬಿ ಅವರು ಡಿವಿಜಿ ಮಕ್ಕಳೊಂದಿಗೆ ಮಾತುಕತೆ ನಡೆಸಿದರು. ಸ್ಧಳೀಯರು ಜನಪ್ರತಿನಿಧಿಗಳನ್ನು ಎಚ್ಚರಿಸಿ ಮೂಲ ಸೌಕರ್ಯಗಳಿಗೆ ಒತ್ತಾಯ ಹೇರಬೇಕು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯ ಪರಿಷತ್ಗೆ ಮನವಿ ನೀಡಿದಲ್ಲಿ ತಾವು ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಿ ಶಾಲೆ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಡಿವಿಜಿ ಅವರ ಹೆಸರಿನಲ್ಲಿ ಭಂಡಾರ ತೆಗೆದರೆ ಅಗತ್ಯ ನೆರವು ದಾನಿಗಳ ಮೂಲಕ ನೀಡಲಾಗುವುದು. ತಾವು ವೈಯಕ್ತಿಕವಾಗಿ 5000 ನೆರವು ನೀಡಲಾಗುವುದು. ಪ್ರಾಥಮಿಕ ಶಾಲೆಯ ಹಂತದವರೆವಿಗೂ ರಾಜ್ಯದ ಎಲ್ಲಾ ಮಕ್ಕಳು ಕನ್ನಡ ಕಲಿಯಬೇಕು ನಂತರ ಆಂಗ್ಲ ಹಾಗೂ ಇತರೆ ಭಾಷೆ ಕಲಿಯಲು ಯಾವುದೇ ಅಭ್ಯಂತರವಿಲ್ಲ ಎಂದು ನುಡಿದರು.
ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ. ನಾಗರಾಜ್, ತಾಲೂಕು ಸಾಹಿತ್ಯ ಪರಿಷತತ್ ನಿಕಟಪೂರ್ವ ಅಧ್ಯಕ್ಷ ಎಂ.ವಿ. ಜನಾರ್ದನ್, ಪದ್ಮನಾಭರಾವ್, ಶಂಕರಕೇಸರಿ, ಶ್ರೀನಿವಾಸಗೌಡ, ಶಿಕ್ಷಕ ಸೊಣ್ಣಪ್ಪ, ಎ.ಅಪ್ಪಾಜಿಗೌಡ, ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.
ಜಿಲ್ಲಾ ಡಿವಿಜಿ ಪ್ರತಿಷ್ಠಾನದ ಬಗ್ಗೆ ಅಪಸ್ವರ: ಕೋಲಾರ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿವಿಜಿ ಪ್ರತಿಷ್ಠಾನ ಸ್ಧಳೀಯರನ್ನು ಕಡೆಗಣಿಸಿ ಕಾರ್ಯಕ್ರಮಗಳು ನಡೆಸುತ್ತಿದೆ ಎಂದು ಕನ್ನಡ ಭಾಷಾಭಿಮಾನಿಗಳು ಹಾಲಂಬಿ ಎದುರು ತಮ್ಮ ಅಸಮಾಧಾನ ತೋಡಿಕೊಂಡರು.