ಶಂಕಿತ ಡೆಂಘೀಗೆ ಯುವಕ ಬಲಿ
ಗೌರಿಬಿದನೂರು: ಶಂಕಿತ ಡೆಂಘೀರೋಗಕ್ಕೆ ವ್ಯಕ್ತಿಯೊಬ್ಬ ಬಲಿಯಾಗಿರುವ ಘಟನೆ ತಾಲೂಕಿನ ದಿನ್ನೇನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ನಾರಾಯಣಪ್ಪ ಎಂಬವರ ದ್ವಿತೀಯ ಪುತ್ರ ಕೃಷ್ಣ (21) ಮೃತಪಟ್ಟನು. ಐಟಿಐ ವಿದ್ಯಾಭ್ಯಾಸ ಮುಗಿಸಿ ಅಪ್ರೆಂಟಿಸ್‌ಗೆ ಹೋಗಲು ಗ್ರಾಮದಲ್ಲಿ ವಾಸವಾಗಿದ್ದ ಕೃಷ್ಣನಿಗೆ ಕೆಲ ದಿನಗಳಿಂದ ಆರೋಗ್ಯ ಸರಿ ಇರಲಿಲ್ಲ. ತಾಲೂಕು ಕೇಂದ್ರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ ಮೇರೆಗೆ ಅಲ್ಲಿನ ವೈದ್ಯರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರುವಂತೆ ಸಲಹೆ ನೀಡಿದ್ದರು. ಹೆಚ್ಚಿನ ಚಿಕಿತ್ಸೆ ಅಗತ್ಯದ ನಿಮಿತ್ತ ಕೃಷ್ಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಶನಿವಾರ ಬೆಳಗ್ಗೆ 5.30ಕ್ಕೆ ಆಸ್ಪತ್ರೆಯಲ್ಲಿ ನಿಧನರಾದರು. ಕೃಷ್ಣನ ಸ್ನೇಹಿತ ಬಾಲು ಎಂಬವರು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.