88.83 ಲಕ್ಷ ವೆಚ್ಚದ ಸೇತುವೆ ಉದ್ಘಾಟಿಸಿದ ಶಾಸಕಿ ರಾಮಕ್ಕ
ಕೆಜಿಎಫ್: ಕೆಜಿಎಫ್ ಕ್ಷೇತ್ರದ ನಗರ ಮತ್ತು ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅದ್ಯತೆ ನೀಡಲಾಗಿದೆ. ಈ ಭಾಗದ ಬಹು ವರ್ಷಗಳ ಬೇಡಿಕೆಯಾಗಿದ್ದ ಸೇತುವೆ ನಿರ್ಮಾಣವನ್ನು ಈ ಭಾಗದ ಜನರ ಕೋರಿಕೆ ಮೇರೆಗೆ ನೆರವೇರಿಸಲಾಗಿದೆ ಎಂದು ಶಾಸಕಿ ವೈ.ರಾಮಕ್ಕ ಹೇಳಿದರು.
ಇಲ್ಲಿನ ಬೇತಮಂಗಲ ಹೋಬಳಿಯ ತೊಂಗಲ್ ಕುಪ್ಪ ಗ್ರಾಮದ ಬಳಿ ಪಾಲಾರ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಉದ್ಘಾಟಿಸಿ ಮಾತನಾಡಿದರು. ನಬಾರ್ಡ್ನ ಆರ್ಐಡಿಎಸ್ ಯೋಜನೆಯಡಿ ಸುಮಾರು 88.83 ಲಕ್ಷ ವೆಚ್ಚದಲ್ಲಿ ಈ ಸೇತುವೆ ನಿರ್ಮಿಸಲಾಗಿದೆ ಎಂದರು.
ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಬೇತಮಂಗಲ ಹೋಬಳಿಯ ಸುತ್ತಮುತ್ತಲಿನ ಗ್ರಾಮಸ್ಥರಿಗೆ ವಿದ್ಯಾರ್ಥಿಗಳಿಗೆ ಸೇತುವೆ ನಿರ್ಮಾಣದಿಂದ ಹೆಚ್ಚಿನ ಅನುಕೂಲವಾಗಿದೆ. ತಾವು ಶಾಸಕರಾಗಿದ್ದ ಅವಧಿಯಲ್ಲಿ ಈ ಭಾಗದ ಗ್ರಾಮಸ್ಥರ ಸಮಸ್ಯೆಗೆ ಓಗೊಟ್ಟು ಪಾಲಾರ್ ನದಿಯ ಅಡ್ಡ ಸೇತುವೆ ನಿರ್ಮಾಣದಿಂದ ಜನರ ಬೇಡಿಕೆ ಈಡೇರಿಸಿದಂತಾಗಿದೆ ಎಂದರು.
ಈ ವೇಳೆ ಮುಖಂಡರಾದ ಮುನಿಸ್ವಾಮಿರೆಡ್ಡಿ, ಮಾಜಿ ನಗರಸಭಾ ಸದಸ್ಯೆ ಸುಮಾ ನಾಗರಾಜ್, ಎಂಜಿನಿಯರ್ ಮಂಜುನಾಥ್. ತೊಂಗಲಕುಪ್ಪ ಗ್ರಾಮದ ಮುಖಂಡರು, ಪಂಚಾಯಿತಿ ಸದಸ್ಯರು ಹಾಜರಿದ್ದರು.