ಉಜ್ವಲ ಭವಿಷ್ಯಕ್ಕೆ ಉತ್ತಮ ಆರೋಗ್ಯ ಮುಖ್ಯ
ಕ.ಪ್ರ.ವಾರ್ತೆ, ಕೆಜಿಎಫ್, ಜು.7
ಆರೋಗ್ಯವಂತರಾಗಿದ್ದರೆ ಮಾತ್ರ ಉತ್ತಮ ಜೀವನ ಮೂಲಕ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. 3 ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕೆಜಿಎಫ್ ಕ್ಷೇತ್ರದ ಶಾಸಕಿ ವೈ.ರಾಮಕ್ಕ ಹೇಳಿದರು.
ಇಲ್ಲಿನ ಭಗವಾನ್ ಮಹಾವೀರ್ ಜೈನ್ ಕಾಲೇಜು ಆವರಣದಲ್ಲಿ ಭಾನುವಾರ ಅಟಲ್ ಬಿಹಾರಿ ವಾಜಪೇಯಿ ಕ್ಷೇಮಾಭಿವೃದ್ಧಿ ಸಂಘದಿಂದ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚಾರಣೆ ಅಂಗವಾಗಿ ಡಾ. ಎಸ್. ಅರಿವಳಗನ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಯಸ್ಸಾದ ಹಿರಿಯರುಗಿಂತ ಯುವಕರಿಗೆ ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ದೇಶದ ಮುಂದಿನ ಭವಿಷ್ಯ ರೂಪಿಸುವ ಯುವಕರು ಮತ್ತು ವಿದ್ಯಾರ್ಥಿಗಳು ತಮ್ಮ ಆರೋಗ್ಯ ರಕ್ಷಿಸಿಕೊಳ್ಳಲು ಹೆಚ್ಚಿನ ಗಮನ ಹರಿಸಬೇಕು ಎಂದರು.
ಮೆಡಿಹೋಪ್ ಆಸ್ಪತ್ರೆಯ ಡಾ. ನಯನ್ಕುಮಾರ್, ವಾಸನ್ ಐ ಕೇರ್, ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಯ ವೈದ್ಯರಿಂದ ಚರ್ಮ, ಕಣ್ಣು, ಸಕ್ಕರೆ ಕಾಯಿಲೆ, ಇಸಿಜಿ, ಇಸಿಎಚ್ಒ, ಹೃದಯ ಪರಿಕ್ಷೆ, ರಕ್ತದೊತ್ತಡ ಮುಂತಾದ ರೋಗಗಳ ಪರೀಕ್ಷೆಯನ್ನು ನಡೆಸಲಾಯಿತು.ಶಿಬಿರದಲ್ಲಿ ಮುಖ್ಯವಾಗಿ ಬಡವರಿಗೆ ಮತ್ತು ಬಿಪಿಎಲ್ ಕಾರ್ಡ್ದಾರರಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಡಾ. ಎಸ್. ಅರಿವಳಗನ್ ತಿಳಿಸಿದರು.
ಬೆಳಗ್ಗೆ 8 ರಿಂದ ಸಂಜೆ 4ರ ವರೆಗೆ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ಕೆಜಿಎಫ್ ಕ್ಷೇತ್ರದ ನಗರ ಮತ್ತು ಗ್ರಾಮೀಣ ಭಾಗದ ಸುಮಾರು 300ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ವಿವಿಧ ರೋಗಗಳನ್ನು ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆದರು.
ಈ ವೇಳೆ ಅಟಲ್ ಬಿಹಾರಿ ವಾಜಪೇಯಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದೇವೆಂದ್ರನ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಸುರೇಶ್ನಾರಾಯಣ, ಮುಖಂಡರಾದ ಮುನಿಸ್ವಾಮಿರೆಡ್ಡಿ, ಅಮರನಾರಾಯಣರೆಡ್ಡಿ, ಶೇಖರ್, ನೈನಾರವಿ, ನಗರಸಭಾ ಸದಸ್ಯರಾದ ವಿಜಯಕುಮಾರ್, ಮಾಜಿ ಸದಸ್ಯೆ ಸುಮಾ ನಾಗರಾಜ್, ಗಣೇಶ್, ಜಯಕುಮಾರ್ ಸೇರಿದಂತೆ ಅಟಲ್ ಬಿಹಾರಿ ವಾಜಪೇಯಿ ಕ್ಷೇಮಾಭಿವೃದ್ಧಿ ಸಂಘ ಮತ್ತು ಸ್ವಾಮಿ ವಿವೇಕಾನಂದ ಸಂಘದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.