'ಉತ್ತಮ ಆರೋಗ್ಯಕ್ಕಾಗಿ ಪರಿಸರ ಸಂರಕ್ಷಣೆ ಅಗತ್ಯ'
ಕೋಲಾರ: ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯಾ ಮುಂತಾದ ಕಾಯಿಲೆಗಳ ನಿಯಂತ್ರಣಕ್ಕೆ ಜನತೆ ತಮ್ಮ ಮನೆ, ಸುತ್ತಮುತ್ತಲ ಪರಿಸರದಲ್ಲಿ ನೈರ್ಮಲ್ಯ ಕಾಪಾಡುವುದು ಅಗತ್ಯ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಶಶಿಕಾಂತ್ ತಿಳಿಸಿದರು.
ತಾಲೂಕಿನ ಕೆಂಬೋಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಮತ್ತು ಹದಿಹರೆಯದವರ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಪರಿಸರದ ಬಗ್ಗೆ ತಿಳಿವಳಿಕೆ ಮೂಡಿಸುವ ಮೂಲಕ ಶಾಲೆಗಳಲ್ಲಿ ಹರಡುವ ರೋಗ ತಡೆಯಲು ಶಿಕ್ಷಕರು ಗಮನ ಹರಿಸಬೇಕೆಂದರು.
ಡಾ.ವೆಂಕಟೇಶ್‌ಬಾಬು, ಸಂಪನ್ಮೂಲ ವ್ಯಕ್ತಿಯಾಗಿದ್ದ ಮಹಿಳಾ ಜಾಗೃತಿ ವೇದಿಕೆಯ ಕಾರ್ಯದರ್ಶಿ ಮಮತಾ ರೆಡ್ಡಿ ಅವರು ಮಕ್ಕಳ ಹಕ್ಕುಗಳ ಬಗ್ಗೆ ಮತ್ತು ಪ್ರಸ್ತುತ ಸಮಾಜದಲ್ಲಿ ಮಕ್ಕಳ ಸ್ಥಿತಿಗತಿಗಳ ಕುರಿತು ಮಾತನಾಡಿದರು.
ಶಾಲಾ ಮುಖ್ಯೋಪಾಧ್ಯಾಯ ಪಿ.ಚೌಡಮ್ಮ, ಶಿಕ್ಷಕ ಎಂ.ಬಿ. ಗಜೇಂದ್ರ, ಕಾರ್ಯಕ್ರಮದ ಆಯೋಜಕರಾದ ನಾಗೇಶ್ ರಾಜ್, ಶಶಿಕಲಾ, ಭಾರತಿ, ಲಕ್ಷ್ಮೀದೇವಿ ಇದ್ದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ನಾಗೇಶ್ ಎಲ್ಲರನ್ನು ವಂದಿಸಿದರು.