ಗುಣಮಟ್ಟದ ಶಿಕ್ಷಣ ನೀಡಿ: ಶಿಕ್ಷಕರಿಗೆ ಶಾಸಕರ ಕಿವಿಮಾತು
ಕ.ಪ್ರ. ವಾರ್ತೆ , ಬಾಗೇಪಲ್ಲಿ , ಜು.7
ತಿಂಗಳ ಬಿಲ್ ಮಾಡಿಕೊಳ್ಳುವುದಕ್ಕೆ ಸೀಮಿತರಾಗದೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕರೆ ನೀಡಿದರು.
ತಾಲೂಕಿನ ಗೂಳೂರು ಹೋಬಳಿ ಕೇಂದ್ರದಲ್ಲಿನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಳೇ ವಿದ್ಯಾರ್ಥಿಗಳು ಹಾಗೂ ಗೂಳೂರು ಗ್ರಾ.ಪಂ. ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸುಬ್ಬಾರೆಡ್ಡಿ ಅವರಿಗೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಒಬ್ಬ ಶಾಸಕ ಕೆಟ್ಟರೆ ಇಡೀ ಕ್ಷೇತ್ರ ಕೆಡುತ್ತೆ, ಒಬ್ಬ ಅಧಿಕಾರಿ ಕೆಟ್ಟರೆ ಇಡೀ ಇಲಾಖೆ ಕೆಡುತ್ತೆ. ಆದರೆ ಒಬ್ಬ ಶಿಕ್ಷಕ ಕೆಟ್ಟರೆ ಇಡೀ ಸಮಾಜವೇ ಕೆಡುತ್ತೆ. ಇದನ್ನರಿತು ಶಿಕ್ಷಕರು ಉತ್ತಮ ಸಮಾಜ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದರು.
ಇಡೀ ಕ್ಷೇತ್ರದಲ್ಲಿಯೇ ಎಲ್ಲಾ ಶಾಲೆಗಳಿಗಿಂತ ನಾನು ಓದಿರುವಂತಹ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ಈ ಶಾಲೆಗೆ ಕೀರ್ತಿಯನ್ನು ತರುವಂತಾಗಲೀ ಎಂಬುದೇ ನನ್ನ ಆಸೆ. ಈ ಹಿನ್ನೆಲೆಯಲ್ಲಿ ಈ ಶಾಲೆಯಲ್ಲಿ ಓದುವಂತಹ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆಯಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸಿದ್ಧನಿದ್ದೇನೆ ಎಂದರು. ಇಡೀ ಕ್ಷೇತ್ರದಲ್ಲಿಯೇ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದ್ದು ನಾನು ಈ ವಿಷಯವನ್ನು ಸಂಬಂಧಪಟ್ಟ ಮಂತ್ರಿಗಳಿಗೆ ಹಾಗೂ ಸರ್ಕಾರದ ಗಮನಕ್ಕೆ ತಂದಿದ್ದೇನೆ ಎಂದರು.
ಪ್ರಥಮ ಹಂತವಾಗಿ ಈ ಶಾಲೆಯಲ್ಲಿ ಓದಿ ಉತ್ತಮ ಸ್ಥಾನದಲ್ಲಿರುವಂತಹ ಸಮಾನ ಮನಸ್ಕರಾದಂತಹ ಹಳೇ ವಿದ್ಯಾರ್ಥಿಗಳು ತಮ್ಮ ಸಂಘದ ವತಿಯಿಂದ ಗೌರವ ಧನವನ್ನು ನೀಡುವ ಮೂಲಕ ಶಿಕ್ಷಕರ ಕೊರತೆಯನ್ನು ನಿವಾರಿಸಲು ಮುಂದಾಗಿದ್ದಾರೆ. ಅದಕ್ಕೆ ನಾನು ಸಹ ಅವರ ಜೊತೆಯಲ್ಲಿ ಕೈಜೋಡಿಸುವುದಾಗಿ ತಿಳಿಸಿದರು.
ತಾಲ್ಲೂಕಿನ ಗೂಳೂರು ಹೋಬಳಿ ಕೇಂದ್ರದಲ್ಲಿ ಪಿ.ಯು ಕಾಲೇಜು ಪ್ರಾರಂಭಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದರು. ಶಿಕ್ಷಕರ ವಸತಿ ಗೃಹಗಳನ್ನು ನಿರ್ಮಿಸಲು ಈಗಾಗಲೇ ಒಂದು ಕೋಟಿ ರು. ಅನುದಾನವಿದ್ದು ಅತೀ ಶೀಘ್ರದಲ್ಲಿಯೇ ಕಾಮಗಾರಿಕೆಯನ್ನು ನೆರವೇರಿಸಲಾಗುವುದು, ತಿಮ್ಮಂಪಲ್ಲಿಯಿಂದ ಬಿಳ್ಳೂರಿನವರವಿಗೂ ಹದಗೆಟ್ಟಿರುವ ರಸ್ತೆ ಕಾಮಗಾರಿಕೆಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು. ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಸ್.ಎಸ್. ರಮೇಶ್ ಬಾಬು, ಕಾರ್ಯದರ್ಶಿ ನಾಗರಾಜ್, ನಿವೃತ್ತ ಲೋಕಾಯುಕ್ತ ಎಸ್.ಪಿ ಮೋಪುರಾರೆಡ್ಡಿ ಮುಂತಾದವರು ಮಾತನಾಡಿದರು.
ಇದಕ್ಕೂ ಮುನ್ನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಉದ್ಯಮಿ ಗೂಳೂರಿನ ಸತ್ಯನಾರಾಯಣ ಬಾಬು ರವರು ಗ್ರಂಥಾಲಯದ ಭವನಕ್ಕೆ ಭೂಮಿ ಪೂಜೆಯನ್ನು ಶಾಸಕರೊಂದಿಗೆ ನೆರವೇರಿಸಿದರು. ಈ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿರುವ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತ ಶಿಕ್ಷಣಾಧಿಕಾರಿ ಟಿ.ಎಸ್. ನಾಗರಾಜ ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ವೆಂಕಟೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹನುಮಂತರೆಡ್ಡಿ, ಮುಖ್ಯ ಶಿಕ್ಷಕ ಮುನಿರಾಜು, ಗ್ರಾ.ಪಂ. ಉಪಾಧ್ಯಕ್ಷ ಶಿವಪ್ಪ ಮುಂತಾದವರು ಭಾಗವಹಿಸಿದ್ದರು.