'ನಾಲ್ಕು ತಿಂಗಳಲ್ಲಿ ಡಬಲ್ ರಸ್ತೆ ನಿರ್ಮಾಣಕ್ಕೆ ಚಾಲನೆ'
ಬಂಗಾರಪೇಟೆ: ಇನ್ನು 4 ತಿಂಗಳಲ್ಲಿ ಪಟ್ಟಣದ ನಾಗರಿಕರ ಬಹುದಿನಗಳ ಕನಸಾಗಿರುವ ಎಸ್.ಎನ್. ರೆಸಾರ್ಟ್ನಿಂದ ದೇಶಿಹಳ್ಳಿವರೆಗೂ ಡಬಲ್ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ತಾಪಂ ಕಚೇರಿ ಮುಂಭಾಗದಲ್ಲಿ ನಂದಿನಿ ಹಾಲಿನ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಸರ್ವೆ ಕಾರ್ಯ ನಡೆಯುತ್ತಿದೆ. ಮಧ್ಯ ರಸ್ತೆಯಿಂದ 45 ಅಡಿಗಳ ಜಾಗ ರಸ್ತೆಗಾಗಿ ಆಕ್ರಮಿಸಿಕೊಳ್ಳಲಾಗುವುದು. ಈ ಕಾರ್ಯದಲ್ಲಿ ಹಲವು ಮನೆಗಳು, ಅಂಗಡಿಗಳು, ಕಚೇರಿಗಳು ಮತ್ತಿತರೆ ಸಾರ್ವಜನಿಕರ ಆಸ್ತಿಗೆ ಹಾನಿಯಾಗಲಿದೆ. ಪಟ್ಟಣ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಸಹಕಾರ ನೀಡಬೇಕೆಂದು ಶಾಸಕರು ಮನವಿ ಮಾಡಿದರು.
ಈ ಯೋಜನೆಗೆ ಬಜೆಟ್ನಲ್ಲಿ ಹಣ ಮೀಸಲಿಡುವಂತೆ ಕೋರಲಾಗಿದೆ. ಈ ಯೋಜನೆ ಕಾರ್ಯಗತವಾದರೆ ರಸ್ತೆ ಅಪಘಾತಗಳು ಕಡಿಮೆಯಾಗಲಿವೆ. ಕ್ಷೇತ್ರವನ್ನು 5 ವರ್ಷದಲ್ಲಿ ಹಂತ ಹಂತವಾಗಿ ಅಭಿವೃದ್ಧಿಗೊಳಿಸಿ, ಮಾದರಿ ಕ್ಷೇತ್ರ ನಿರ್ಮಾಣ ಮಾಡುವುದೇ ನನ್ನ ಮೊದಲ ಆದ್ಯತೆ ಎಂದು ವಿವರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತರ ಪರವಾಗಿದೆ. ಇದೇ ತಿಂಗಳು ಅವರು ಮಂಡಿಸಲಿರುವ ಬಜೆಟ್ನಲ್ಲಿ ರೈತರಿಗಾಗಿ ವಿಶೇಷ ಆದ್ಯತೆ ನೀಡುವರು. ರೈತರು ಡೈರಿಗೆ ಸರಬರಾಜು ಮಾಡುವ ಹಾಲಿನಲ್ಲಿ ನೀರು ಬೆರೆಸದೆ ಗುಣಮಟ್ಟ ಕಾಪಾಡಿ ಸಂಸ್ಥೆ ಜತೆ ನೀವೂ ಅಭಿವೃದ್ದಿ ಹೊಂದಿದೆ ಎಂದು ಮನವಿ ಮಾಡಿದರು.
ಈ ವೇಳೆ ಕೋಲಾರ ಹಾಲು ಒಕ್ಕೂಟದ ನಿರ್ದೇಶಕರಾದ ಜಯಸಿಂಹ ಕೃಷ್ಣಪ್ಪ, ಮಂಜುನಾಥಗೌಡ, ಕೋಲಾರ ಒಕ್ಕೂಟದ ಎಂ.ಡಿ. ಹನುಮೇಶ್, ಡಿ.ಎಂ. ಡಾ. ವೆಂಕಟರಮಣ, ಚಂದ್ರಶೇಖರರಾಜು, ದೇವೇಂದ್ರಪ್ಪ, ಪ್ರಕಾಶ್, ವೇಣುಗೋಪಾಲ್, ಬಾಬುರೆಡ್ಡಿ ಮತ್ತಿತರರು ಇದ್ದರು.