'ಬಂಗಾರಪೇಟೆ ಕಾಲೇಜು ಹಂತ ಹಂತವಾಗಿ ಅಭಿವೃದ್ಧಿ'
ಬಂಗಾರಪೇಟೆ: ಶೈಕ್ಷಣಿಕವಾಗಿ ಹಿಂದುಳಿದಿರುವ ಕ್ಷೇತ್ರಗಳಲ್ಲಿ ಶಿಕ್ಷಣ ಗುಣಮಟ್ಟ ಸುಧಾರಿಸಲು ರಾಜ್ಯ ಸರ್ಕಾರ ಹತ್ತಾರು ಯೋಜನೆ ಹಮ್ಮಿಕೊಂಡಿದೆ. ಈ ಮೂಲಕ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಶೈಕ್ಷಣಿಕವಾಗಿ ಪ್ರಗತಿ ಕಾಣಲು ಮುಂದಾಗಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಬಾಲಕರ ಜೂನಿಯರ್ ಕಾಲೇಜಿಗೆ ರಾಷ್ಟ್ರೀಯ ಮಧ್ಯಮ ಶಿಕ್ಷಣ ಅಭಿಯಾನ ಯೋಜನೆಯಲ್ಲಿ ಮಂಜೂರಾಗಿರುವ 79 ಲಕ್ಷ ವೆಚ್ಚದಲ್ಲಿ 5 ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭಾನುವಾರ ಭೂಮಿ ಪೂಜೆ ನರೆವೇರಿಸಿ ಅವರು ಮಾತನಾಡಿದರು.
ಹಲವು ವರ್ಷಗಳಿಂದ ಬಂಗಾರಪೇಟೆ ಕ್ಷೇತ್ರ ಎಲ್ಲಾ ರಂಗದಲ್ಲಿಯೂ ಬಹಳಷ್ಟು ಹಿಂದುಳಿಯುವಂತಾಗಿದೆ. ಸರ್ಕಾರ ಇಂತಹ ಕ್ಷೇತ್ರಗಳನ್ನು ಗುರುತಿಸಿ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಮುಂದುವರಿದ ಕ್ಷೇತ್ರವನ್ನಾಗಿ ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಬೂದಿಕೋಟೆ, ಗುಲ್ಲಹಳ್ಳಿ, ಕನಮನಹಳ್ಳಿ, ಗಾಜಗ ಸೇರಿದಂತೆ ಗಡಿ ಭಾಗದ ಅನುಕೂಲಗಳಿಲ್ಲದ ಸರ್ಕಾರಿ ಶಾಲೆಗಳಿಗೆ ಅಗತ್ಯ ಕೊಠಡಿ ಒದಗಿಸುವ ಜೊತೆಗೆ ಶಿಕ್ಷಕರ ಕೊರತೆ ಬಾರದಂತೆ ಎಚ್ಚರ ವಹಿಸಲು ಮುಂದಾಗಿದೆ.
ಬಾಲಕರ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವವರ ಪೈಕಿ ಬಹುಪಾಲ ಗ್ರಾಮಾಂತರ ಭಾಗದಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆಯೇ ಅಧಿಕವಾಗಿದೆ. ಇದರಿಂದ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಸೌಲಭ್ಯಗಳಿಲ್ಲದೆ ವಂಚಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಾಲೇಜು ಹಂತ ಹಂತವಾಗಿ ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದರು.
ವಿಧಾನಸಭೆ ಬಜೆಟ್ ಅಧಿವೇಶನ ಬಳಿಕ ತಾವು ಕ್ಷೇತ್ರ ಪ್ರವಾಸ ಕೈಗೊಂಡು ಪ್ರತಿ ಹಳ್ಳಿಗೂ ಭೇಟಿ ನೀಡಿ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆ ಸ್ಥಳದಲ್ಲೇ ಬಗೆಹರಿಸಲು ಅಭಿಲಾಷೆ ಹೊಂದಲಾಗಿದೆ. ಕ್ಷೇತ್ರ ಪ್ರವಾಸದಲ್ಲಿ ತಾಲೂಕುಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳನ್ನು ಗ್ರಾಮಗಳಿಗೆ ನನ್ನ ಜತೆ ಕರೆದುಕೊಂಡು ಹೋಗಲಾಗುವುದು. ಗ್ರಾಮಸ್ಥರು ತಮ್ಮ ಗ್ರಾಮ ಬಿಟ್ಟು ವಿನಾಕಾರಣ ಪಟ್ಟಣ ಪ್ರದೇಶವನ್ನು ಅಲೆಯುವುದನ್ನು ತಪ್ಪಿಸುವುದು ಈ ಪ್ರವಾಸದ ಉದ್ದೇಶ ಎಂದು ವಿವರಿಸಿದರು.
ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಬ್ಲಾಕ್ ಅಧ್ಯಕ್ಷ ಮಂಜುನಾಥಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಯರಾಜ್, ಅಕ್ಷರ ದಾಸೋಹ ಅಧಿಕಾರಿ ಸಿದ್ದರಾಜು, ಜಯದೇವ್ ಮತ್ತಿತರರು ಇದ್ದರು.