ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

3 ನಕಲಿ ಪರೀಕ್ಷಾರ್ಥಿಗಳ ಸೆರೆ

Mainashree
Updated On : 9 Jul 2013, 12:12 pm

ಕ.ಪ್ರ.ವಾರ್ತೆ  ಕೋಲಾರ  ಜು.8
ದ್ವಿತೀಯ ಪಿಯುಸಿ ಕನ್ನಡ ಪೂರಕ ಪರೀಕ್ಷೆ ಬರೆಯಲು ಅಸಲಿ ಪರೀಕ್ಷಾರ್ಥಿಗಳ ಬದಲಾಗಿ ಹಾಜರಾಗಿದ್ದ ಮೂವರು ನಕಲಿ ಪರೀಕ್ಷಾರ್ಥಿಗಳನ್ನು ಪಿಯು ಮಂಡಳಿ ಜಾಗೃತ ದಳ ಸಿಬ್ಬಂದಿ ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಬೆಳಿಗ್ಗೆ ನಡೆಯುತ್ತಿದ್ದ ಕನ್ನಡ ಪರೀಕ್ಷೆ ಸಂದರ್ಭದಲ್ಲಿ ತಮಗೆ ಸಿಕ್ಕ ಖಚಿತ ಮಾಹಿತಿ ಆಧರಿಸಿ ಜಾಗೃತ ದಳದ ಸಹಾಯಕ ಅಧೀಕ್ಷಕ ನಾಗಾನಂದ ಕೆಂಪರಾಜು ಹಾಗೂ ಇನ್ನಿತರ ಸಿಬ್ಬಂದಿ ಪರೀಕ್ಷಾರ್ಥಿಗಳ ಭಾವಚಿತ್ರಗಳು ಇರುವ ಆಲ್ಬಮ್‌ಗಳನ್ನು ಪರಿಶೀಲಿಸಿದಾಗ ಅನೇಕ ಅಸಲಿ ಪರೀಕ್ಷಾರ್ಥಿಗಳ ಬದಲಿಗೆ ಹಣದ ಆಸೆಗಾಗಿ ನಕಲಿ ಪರೀಕ್ಷಾರ್ಥಿಗಳು ಪರೀಕ್ಷೆಗೆ ಬಂದಿರುವುದು ಬೆಳಕಿಗೆ ಬಂದಿದೆ.
ಕೆಲವರು ತಪ್ಪಿಸಿಕೊಂಡಿದ್ದಾರೆ: ತಕ್ಷಣ ಜಾಗೃತ ದಳ ಸಿಬ್ಬಂದಿ ನಕಲಿ ಪರೀಕ್ಷಾರ್ಥಿಗಳನ್ನು ಹಿಡಿಯಲು ಮುಂದಾದಾಗ ಕೆಲವರು ತಪ್ಪಿಸಿಕೊಂಡಿದ್ದು, ತಾಲೂಕಿನ ವೇಮಗಲ್ ಗ್ರಾಮದವರೆನ್ನಲಾದ ಮುನೇಂದ್ರ, ಅರುಣ್ ಹಾಗೂ ಕಿಶೋರ್ ಎಂಬುವರು ಸಿಕ್ಕಿಬಿದ್ದು ಪೊಲೀಸ್ ಅತಿಥಿಗಳಾಗಿದ್ದಾರೆ.
ಅಸಲಿ ವಿದ್ಯಾರ್ಥಿಗಳಾದ ಕೋಲಾರ ಸರ್ಕಾರಿ ಪದವಿವೂರ್ವ ಕಾಲೇಜಿನ ಕಾರ್ತಿಕ್ ಎಂಬುವನ ಪರವಾಗಿ ಮುನೇಂದ್ರ, ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾದ ಸುಧಾಕರ್ ಮತ್ತು ನಾಗರಾಜು ಬದಲಿಗೆ ಅರುಣ್ ಮತ್ತು ಕಿಶೋರ್ ಪರೀಕ್ಷೆ ಬರೆಯುತ್ತಿದ್ದರು ಎಂದು ಜಾಗೃತ ದಳ ಅಧಿಕಾರಿಗಳು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಚೋದಕರ ಬಣ್ಣ ಬಯಲು: ಅಸಲಿ ವಿದ್ಯಾರ್ಥಿಗಳ ಬದಲಿಗೆ ಪರೀಕ್ಷೆ ಬರೆಯುತ್ತಿದ್ದಾಗ ಸಿಕ್ಕಿಬಿದ್ದಿರುವ ಮೂವರು ಆರೋಪಿಗಳು ತಮಗೆ ಈ ಕೆಲಸ ಮಾಡುವಂತೆ ಕೋಲಾರ ತಾಲೂಕಿನ ರಾಜಕಲ್ಲಹಳ್ಳಿಯ ಸುರೇಶ್ ಹಾಗೂ ಪುರಹಳ್ಳಿಯ ಅಶೋಕ್ ಎಂಬುವರು ಕುಮ್ಮಕ್ಕು ನೀಡಿದ್ದಾರೆ ಎಂದು ಪ್ರಚೋದಕರ ಬಣ್ಣ ಬಯಲು ಮಾಡಿದ್ದಾರೆ.
ಪರೀಕ್ಷಾರ್ಥಿಗಳ ಪ್ರವೇಶ ಪತ್ರದ ಮೇಲೆ ಲಗತ್ತಿಸುವ ಅಸಲಿ ವಿದ್ಯಾರ್ಥಿಗಳ ಭಾವಚಿತ್ರದ ಮೇಲೆ ನಕಲಿ ಪರೀಕ್ಷಾರ್ಥಿಗಳ ಭಾವಚಿತ್ರ ಅಂಟಿಸಿ, ಅದರ ಮೇಲೆ ಸಂಬಂಧಪಟ್ಟ ಕಾಲೇಜು ಪ್ರಾಂಶುಪಾಲರ ಸಹಿ ಮತ್ತು ಮೋಹರು ಹಾಕುವುದಲ್ಲದೆ, ಬದಲಿ ಪರೀಕ್ಷೆ ಬರೆಯುವವರಿಗೆ ಪ್ರತಿ ವಿಷಯಕ್ಕೆ ರು.1500 ನೀಡುವುದಾಗಿ ಭರವಸೆ ನೀಡಿದ್ದರಿಂದ ಹಣದಾಸೆಗಾಗಿ ನಕಲಿ ಪರೀಕ್ಷಾರ್ಥಿಗಳಾಗಿದ್ದೇವೆ ಎಂದು ಆರೋಪಿಗಳು ವಿಚಾರಣೆ ಸಮಯದಲ್ಲಿ ಪೊಲೀಸರ ಮುಂದೆ ತಪ್ಪೊಪ್ಪಿಗೆ ನೀಡಿದ್ದಾರೆ ಎಂದು ಜಾಗೃತದಳದ ಸಹಾಯಕ ಅಧೀಕ್ಷಕ ನಾಗಾನಂದ ಕೆಂಪರಾಜು ತಿಳಿಸಿದ್ದಾರೆ.
ಪ್ರಮುಖ ಆರೋಪಿಗಳಿಗಾಗಿ ಶೋಧ: ಅಸಲಿ ವಿದ್ಯಾರ್ಥಿಗಳ ಪರವಾಗಿ ಬದಲಿ ಪರೀಕ್ಷಾರ್ಥಿಗಳನ್ನು ಸೃಷ್ಟಿಮಾಡಿರುವ ಆರೋಪದ ಮೇರೆಗೆ ಪೊಲೀಸರು ರಾಜಕಲ್ಲಹಳ್ಳಿಯ ಸುರೇಶ್ ಮತ್ತು ಪುರಹಳ್ಳಿಯ ಅಶೋಕ್‌ಗಾಗಿ ಶೋಧ ಕಾರ್ಯ  ಮುಂದುವರೆಸಿದ್ದಾರೆ.
ಎಚ್ಚರಿಕೆ ಗಂಟೆ: ಮಂಗಳವಾರ ಇಂಗ್ಲಿಷ್ ಪರೀಕ್ಷೆಯಿದ್ದು, ಬದಲಿ ಪರೀಕ್ಷಾರ್ಥಿಗಳ ಮೇಲಿನ ಕ್ರಮದಿಂದ ಮುಂದೆ ಬರುವ ಬದಲಿ ಪರೀಕ್ಷಾರ್ಥಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement