ಕುಡಿವ ನೀರಿನ ಸಮಸ್ಯೆ; ತ್ವರಿತ ಕ್ರಮ ಕೈಗೊಳ್ಳಿ
ಕ.ಪ್ರ. ವಾರ್ತೆ ಕೋಲಾರ ಜು.8
ಮಳೆ ಕೈ ಕೊಟ್ಟಿರುವುದರಿಂದ ಎಲ್ಲ ಕಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತದೆ, ಸರ್ಕಾರದಿಂದ ಬಿಡುಗಡೆಯಾಗಿರುವ ಹಣವನ್ನು ಸಕಾಲಕ್ಕೆ ವಿನಿಯೋಗ ಮಾಡಿ ಜನತೆಯ ದಾಹ ತೀರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಬಂಗಾರಪೇಟೆ ಶಾಸಕ ಕೆ.ಎಂ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಶಾಸಕರ ಅಧ್ಯಕ್ಷತೆಯಲ್ಲಿನ ಟಾಸ್ಕ್ಫೋರ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಹೊಸದಾಗಿ ಕೊರೆಸಿರುವ ಕೊಳವೆ ಬಾವಿಗಳಿಗೆ ತಕ್ಷಣ ಪಂಪು ಮತ್ತು ಮೋಟಾರ್ ಅಳವಡಿಸಿ, ಬೆಸ್ಕಾಂ ಸಹಕಾರದಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಜನತೆಗೆ ನೀರು ಒದಗಿಸಿ ಎಂದು ತಾಕೀತು ಮಾಡಿದರು.
ನೀರಿನ ಸಮಸ್ಯೆ ಉಲ್ಬಣ: ಬಂಗಾರಪೇಟೆ ತಾಲೂಕಿನಲ್ಲಿ 47ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಈಗ 30 ಟ್ಯಾಂಕರ್ಗಳಲ್ಲಿ ಹಾಗೂ ಖಾಸಗಿಯಾಗಿ ಬೋರ್ವೆಲ್ಗಳ ಮೂಲಕ 17 ಹಳ್ಳಿಗಳಿಗೆ ನೀರು ಕೊಡುತ್ತಿದ್ದು, ಸರ್ಕಾರಿಂದ ಕೊರೆಸಿರುವ ಕೊಳವೆ ಬಾವಿಗಳಿಗೆ ಅದಷ್ಟು ಬೇಗನೆ ಪಂಪು ಮೋಟಾರ್ ಅಳವಡಿಸಿ ನೀರಿಗೆ ಸಮಸ್ಯೆಯಾಗದಂತೆ ಎಚ್ಚರವಹಿಸಿ ಎಂದು ತಿಳಿಸಿದರು.
ಸರ್ಕಾರ ನೀಡಿರುವ ಅನುದಾನ ಸಾಕಾಗುವುದಿಲ್ಲ, ಹೊಸ ಪ್ರಸ್ತಾವನೆ
ಸರ್ಕಾರಕ್ಕೆ ಕಳುಹಿಸಬೇಕು ಜಿಲ್ಲೆಯ ಎಲ್ಲ ಶಾಸಕರು ಒಗ್ಗಟ್ಟಿನಿಂದ ಸರ್ಕಾರದ ಮೇಲೆ ಒತ್ತಡ ತರಲು ಬದ್ಧವಾಗಿದ್ದೇವೆ ಎಂದು ತಿಳಿಸಿದರು.
ಉದಾಸೀನ ಬೇಡ: ಅಧಿಕಾರಿಗಳು ಕುಡಿಯುವ ನೀರಿನ ವಿಚಾರದಲ್ಲಿ ಉದಾಸೀನ ಮಾಡಬಾರದು, ಸಮರೋಪಾದಿಯಲ್ಲಿ ಕೆಲಸ ಮಾಡಬೇಕು, ಟ್ಯಾಂಕರ್ಗಳ ಮೂಲಕ ಹಾಗೂ ಖಾಸಗಿ ಕೊಳವೆ ಬಾವಿಗಳಿಂದ ಒದಗಿಸುತ್ತಿರುವ ನೀರು ದುರ್ಬಳಕೆ ಆಗದಂತೆ ಎಚ್ಚರವಹಿಸಿ, ಬಂಗಾರಪೇಟೆ ಕ್ಷೇತ್ರ ಸೇರಿದಂತೆ ಎಲ್ಲ ಕಡೆ ಅಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ಮಾಡಿದಲ್ಲಿ ನೀರಿನ ಸಮಸ್ಯೆ ನಿವಾರಣೆ ಮಾಡುವುದಕ್ಕೆ ಕಷ್ಟವಾಗುವುದಿಲ್ಲ ಎಂದರು.
ಕಾಮಗಾರಿ ಶೀಘ್ರ ಮುಗಿಸಿ: ಕೆಜಿಎಫ್ ಶಾಸಕಿ ವೈ.ರಾಮಕ್ಕ ಮಾತನಾಡಿ, ಕೆಜಿಎಫ್ ಛತ್ರದಲ್ಲಿ ಹೊಸದಾಗಿ ಕೊರೆಸಿರುವ ಕೊಳವೆ ಬಾವಿಗಳಿಗೆ ಪಂಪು ಮತ್ತು ಮೋಟಾರ್ ಅಳವಡಿಸುವುದು ವಿಳಂಬವಾದರೆ ಅಂತರ್ಜಲ ಕಡಿಮೆಯಾಗಿ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುವುದರಿಂದ ಅಧಿಕಾರಿಗಳು ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಬೇಕೆಂದು ಹೇಳಿದರು.
ಜಿಪಂ ಸದಸ್ಯೆಯರಾದ ಮುತ್ಯಾಲಮ್ಮ, ನಾರಾಯಣಮ್ಮ ಮತ್ತಿರರರು ಕ್ಯಾಸಂಬಳ್ಳಿ ಮತ್ತು ಡಿ.ಕೆ.ಹಳ್ಳಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಜನತೆ ಸಮಸ್ಯೆ ನಿವಾರಣೆ ಮಾಡುವಂತೆ ಶಾಸಕರಿಗೆ ಮನವಿ ಮಾಡಿದರು.
ಸಭೆ ಮುಂದೂಡಿಕೆ: ಕೋಲಾರ, ಶ್ರೀನಿವಾಸಪುರ ಹಾಗೂ ಮುಳಬಾಗಿಲು ಶಾಸಕರು ಗೈರು ಹಾಜರಾಗಿದ್ದರಿಂದ ಟಾಸ್ಕ್ಫೋರ್ಸ್ ಸಭೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು. ಮಾಲೂರು ಶಾಸಕ ಮಂಜುನಾಥಗೌಡರ ಸೂಚನೆ ಮೇರೆಗೆ ಜಿ.ಪಂ ಸಿಇಒ ಝಲ್ಫಿಖಾರ್ ಉಲ್ಲಾ ಅವರು ಮಾಲೂರು ತಾಪಂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅತಿ ಹೆಚ್ಚು ಸಮಸ್ಯೆ ಮಾಲೂರು ತಾಲೂಕಿನಲ್ಲಿ ಇರುವುದರಿಂದ ಕೂಡಲೇ ಕ್ರಿಯಾ ಯೋಜನೆ ಪ್ರಕಾರ ಕಾಮಗಾರಿ ನಡೆಸುವಂತೆ ಹೇಳಿದರು.
ಜಿಪಂ ಅಧ್ಯಕ್ಷೆ ಚೌಡೇಶ್ವರಿ, ಉಪಾಧ್ಯಕ್ಷೆ ರತ್ನಮ್ಮ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಮೋಲ್ ಮೋಹನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ಆನಂದ್, ಜಿಪಂ ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.