'ಜಾಗತೀಕರಣದಿಂದ ದೇಶದ ರೈತ ದಿವಾಳಿ'
ಚಿಂತಾಮಣಿ: ಬಹುರಾಷ್ಟ್ರೀಯ ಕಂಪನಿಗಳ ಪರ ನೀತಿಗಳಿಂದ ದೇಶದ ಜನತೆ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಗೋಪಿನಾಥ್ ಕಳವಳ ವ್ಯಕ್ತಪಡಿಸಿದರು. ಪಟ್ಟಣದ ಚೇಳೂರು ರಸ್ತೆಯ ಕಿಸಾನ್ ಫಂಕ್ಷನ್‌ಹಾಲ್‌ನಲ್ಲಿ ಮಂಗಳವಾರ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, 2 ದಶಕದ ಹಿಂದೆ ನಮ್ಮ ದೇಶದಲ್ಲಿ ಜಾರಿಗೊಳಿಸಿದ ಹೊಸ ಆರ್ಥಿಕ ನೀತಿಗಳ ಭಾಗವಾಗಿ ಬಂದ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳು ಇಡಿ ದೇಶವನ್ನೇ ದಿವಾಳಿ ಮಾಡುತ್ತಿವೆ ಎಂದರು. ದೇಶದಲ್ಲಿ ಆಹಾರ ಧಾನ್ಯಗಳ ಉತ್ಪತ್ತಿ ಕಡಿಮೆಯಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ವಿರೋಧಿ ನೀತಿಗಳ ಭಾಗವಾಗಿ ಕಳೆದ 10 ವರ್ಷಗಳಲ್ಲಿ 21 ಲಕ್ಷ ರೈತರು ಹಾಗೂ ರಾಜ್ಯದಲ್ಲಿ 50,035 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ರಾಜ್ಯವು ದೇಶದಲ್ಲಿ ರೈತರ ಆತ್ಮಹತ್ಯೆಗಳಲ್ಲಿ 3ನೇ ಸ್ಥಾನದಲ್ಲಿದೆ. ರೈತರಲ್ಲಿ ಆತ್ಮಸ್ಥೈರ್ಯ ತುಂಬಿಸುವ ರೈತಪರ ನೀತಿ ಜಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಕೃಷಿ ರಂಗದಲ್ಲಿ ಕಂಪನಿ ವ್ಯವಸಾಯ ಪದ್ಧತಿ ಜಾರಿಗೊಳಿಸಿದೆ ಎಂದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಜಾಥಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಗೋಪಸಂದ್ರ ಶ್ರೀನಿವಾಸರೆಡ್ಡಿ, ಗಂಜೂರು ಲಕ್ಷ್ಮಿನಾರಾಯಣರೆಡ್ಡಿ, ಮುನಿರೆಡ್ಡಿ, ಪಲ್ಲಿಗಡ್ಡ ಜಿ.ಕೆ.ವೆಂಕಟರವಣಪ್ಪ, ಶ್ರೀನಿವಾಸ್, ಜಿ.ಕೋಡಹಳ್ಳಿ ಬಾಬು, ಶ್ರೀನಾಥ್ ಇದ್ದರು.