ಜೋಡಿ ಕೊಲೆ ಆರೋಪಿ ಸಲಿಂಗಕಾಮಿ ಬಂಧನ
ಕ.ಪ್ರ. ವಾರ್ತೆ, ಕೆಜಿಎಫ್, ಜು. 8-
ಕಳೆದ ಜು.1ರಂದು ಬಂಗಾರಪೇಟೆ ಬಸ್‌ನಿಲ್ದಾಣದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಜಿಎಫ್‌ನ ಚಾಂಪಿಯನ್‌ರೀಫ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಮಹಮದ್ ಬಷೀರ್(30)ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಬೂದಿಕೋಟೆ ನಿವಾಸಿ ಸತೀಶ್(27) ಮತ್ತು ಕೋಲಾರ ನಿವಾಸಿ ಕೃಷ್ಣಸ್ವಾಮಿ(28) ಮೂವರು ಒಟ್ಟಿಗೆ ಬಂಗಾರಪೇಟೆ ಪಟ್ಟಣ ಪ್ರದೇಶಗಳಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದು, ಬಂಗಾರಪೇಟೆ ಬಸ್‌ನಿಲ್ದಾಣದಲ್ಲಿ ಮಲಗುತ್ತಿದ್ದರು ಎನ್ನಲಾಗಿದೆ. ಆರೋಪಿ ಮಹಮದ್ ಬಷೀರ್ ಬೇಕಾಬಿಟ್ಟಿ ತಿರುಗಾಡಿಕೊಂಡು ಭಿಕ್ಷೆ ಬೇಡಿಕೊಂಡು ಕಾಲ ಕಳೆಯುತ್ತಿದ್ದ ಈತನನ್ನು ಈ ಹಿಂದೆ ಎರಡು ಬಾರಿ ನಿರಾಶ್ರಿತ ಕೇಂದ್ರದಲ್ಲಿ ದಾಖಲಿಸಲಾಗಿತ್ತು.
ಬಷೀರ್ ಸಲಿಂಗ ಕಾಮಿ: ಈ ಮೂವರು ಒಟ್ಟಿಗೆ ಮಲಗುವಾಗ ಆರೋಪಿ ಮಹಮದ್ ಬಷೀರ್ ಸಲಿಂಗ ಕಾಮಿಯಾಗಿದ್ದು, ಕೊಲೆಯಾದ ಸತೀಶ್ ಮತ್ತು ಕೃಷ್ಣಸ್ವಾಮಿ ಅವರೊಂದಿಗೆ ರಾತ್ರಿ ಮಲಗುವಾಗ ತನ್ನ ತೀಟೆ ತೀರಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತೀಳಿಸಿದ್ದಾರೆ.
ಒತ್ತಾಯಿಸಿದ್ದಾನೆ: ಅದೇ ರೀತಿ ಕೊಲೆಯಾದ ರಾತ್ರಿ ಸತೀಶ್ ಮತ್ತು ಕೃಷ್ಣಸ್ವಾಮಿ ಅವರನ್ನು ತೀಟೆ ತೀರಿಸಿಕೊಳ್ಳಲು ಕರೆದಿದ್ದು ಅದಕ್ಕೆ ಒಪ್ಪದ ಕಾರಣ ಕುಪಿತಗೊಂಡ ಆರೋಪಿ ಇಬ್ಬರ ಮೇಲೆ ಹಲ್ಲುಗಳಿಂದ ಹಲ್ಲೆ ನಡೆಸಿ ನಂತರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ವಾರದೊಳಗೇ ಆರೋಪಿ ಬಂಧನ: ಜೋಡಿ ಕೊಲೆ ನಡೆದ ಎರಡು ದಿನಗಳ ಹಿಂದೆ ಅದೇ ಬಸ್‌ನಿಲ್ದಾಣದಲ್ಲಿ ರಾತ್ರಿ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಇದರಿಂದ ಬಂಗಾರಪೇಟೆ ಮತ್ತು ಕೆಜಿಎಫ್‌ನ ಸಾರ್ವಜನಿಕರಲ್ಲಿ ಭೀತಿ ಉಂಟಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಆರೋಪಿ ಪತ್ತೆ ಹಚ್ಚಲು ವಿಶೇಷ ತಂಡ ರಚಿಸಿದ್ದು, ಕೊಲೆ ನಡೆದ ಒಂದು ವಾರದಲ್ಲೇ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.