ಪೌರಸೇವಾ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ
ಗುಡಿಬಂಡೆ: ಸ್ಥಳೀಯ ಪಪಂನಲ್ಲಿ ದಿನಗೂಲಿ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನದ ಆಧಾರದಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ವೇತನ ಪಾವತಿಸುವಲ್ಲಿ ಆಗುತ್ತಿರುವ ವಿಳಂಬ ಪ್ರತಿಭಟಿಸಿ ಅನಿರ್ದಿಷ್ಟ ಮುಷ್ಕರ ನಡೆಸಲಾಗುತ್ತಿದೆ ಎಂದು ಪೌರಸೇವಾ ನೌಕರರ ತಾಲೂಕು ಕಾರ್ಯದರ್ಶಿ ಚಿಕ್ಕಮುನಿಸ್ವಾಮಿ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ. ಪೌರಕಾರ್ಮಿಕರಿಗೆ ಕಳೆದ ಮಾರ್ಚ್ ತಿಂಗಳಿಂದ ವೇತನ ಪಾವತಿಸಿಲ್ಲ. ಈ ಹಿಂದೆ ಎಸ್ಎಫ್ಸಿ ಅನುದಾನದಲ್ಲಿ ಪ್ರತಿ ತಿಂಗಳೂ ಸಂಬಂಳ ನೀಡುತ್ತಿದ್ದು, ಇತ್ತೀಚಿನ ಆದೇಶವೊಂದರ ಪ್ರಕಾರ ಕಾಯಂ ನೌಕರರಿಗೆ ಹೊರತು ಪಡಿಸಿ ಉಳಿದ ಸಿಬ್ಬಂದಿಗೆ ಮೇಲ್ಕಂಡ ನಿಧಿಯಿಂದ ವೇತನ ನೀಡಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಸಮಸ್ಯೆ ಏರ್ಪಟ್ಟಿದ್ದು, ಭರವಸೆ ಈಡೇರದ ನಿಟ್ಟಿನಲ್ಲಿ ಸೋಮವಾರದಿಂದ ಮುಷ್ಕರ ನಡೆಸಲಾಗುತ್ತಿದೆ ಎಂದು ಪೌರ ಪ್ರತಿನಿಧಿಗಳು ತಿಳಿಸಿದರು.