ಮೂವರು ನಕಲಿ ಪರೀಕ್ಷಾರ್ಥಿಗಳ ಬಂಧನ
ಕೋಲಾರ: ದ್ವಿತೀಯ ಪಿಯುಸಿ ಕನ್ನಡ ಪೂರಕ ಪರೀಕ್ಷೆ ಬರೆಯಲು ಅಸಲಿ ಪರೀಕ್ಷಾರ್ಥಿಗಳ ಬದಲಾಗಿ ಹಾಜರಾಗಿದ್ದ ಮೂವರು ನಕಲಿ ಪರೀಕ್ಷಾರ್ಥಿಗಳನ್ನು ಪಿಯು ಮಂಡಳಿ ಜಾಗೃತ ದಳ ಸಿಬ್ಬಂದಿ ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಬೆಳಿಗ್ಗೆ ನಡೆಯುತ್ತಿದ್ದ ಕನ್ನಡ ಪರೀಕ್ಷೆ ಸಂದರ್ಭದಲ್ಲಿ ತಮಗೆ ಸಿಕ್ಕ ಖಚಿತ ಮಾಹಿತಿ ಆಧರಿಸಿ ಜಾಗೃತ ದಳದ ಸಹಾಯಕ ಅಧೀಕ್ಷಕ ನಾಗಾನಂದ ಕೆಂಪರಾಜು ಹಾಗೂ ಇನ್ನಿತರ ಸಿಬ್ಬಂದಿ ಪರೀಕ್ಷಾರ್ಥಿಗಳ ಭಾವಚಿತ್ರಗಳು ಇರುವ ಆಲ್ಬಮ್‌ಗಳನ್ನು ಪರಿಶೀಲಿಸಿದಾಗ ಅನೇಕ ಅಸಲಿ ಪರೀಕ್ಷಾರ್ಥಿಗಳ ಬದಲಿಗೆ ಹಣದ ಆಸೆಗಾಗಿ ನಕಲಿ ಪರೀಕ್ಷಾರ್ಥಿಗಳು ಪರೀಕ್ಷೆಗೆ ಬಂದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಜಾಗೃತ ದಳ ಸಿಬ್ಬಂದಿ ನಕಲಿ ಪರೀಕ್ಷಾರ್ಥಿಗಳನ್ನು ಹಿಡಿಯಲು ಮುಂದಾದಾಗ ಕೆಲವರು ತಪ್ಪಿಸಿಕೊಂಡಿದ್ದು, ತಾಲೂಕಿನ ವೇಮಗಲ್ ಗ್ರಾಮದವರೆನ್ನಲಾದ ಮುನೇಂದ್ರ, ಅರುಣ್ ಹಾಗೂ ಕಿಶೋರ್ ಎಂಬುವರು ಸಿಕ್ಕಿಬಿದ್ದು ಪೊಲೀಸ್ ಅತಿಥಿಗಳಾಗಿದ್ದಾರೆ.
ಎಚ್ಚರಿಕೆ ಗಂಟೆ: ಮಂಗಳವಾರ ಇಂಗ್ಲಿಷ್ ಪರೀಕ್ಷೆಯಿದ್ದು, ಬದಲಿ ಪರೀಕ್ಷಾರ್ಥಿಗಳ ಮೇಲಿನ ಕ್ರಮದಿಂದ ಮುಂದೆ ನಡೆಯುವ ಪರೀಕ್ಷೆಗಳಿಗೆ ಬರುವ ಬದಲಿ ಪರೀಕ್ಷಾರ್ಥಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.