ಸುದ್ದಿ ಸಂಕ್ಷೇಪ
ಪಡಿತರ ಫೋಟೋ ಲಂಚ: ಗ್ರಾಮಸ್ಥರ ತೀವ್ರ ಆಕ್ರೋಶ
ಚಿಂತಾಮಣಿ: ಚಿಂತಾಮಣಿ ತಾಲೂಕಿನ ನಂದಿಗಾನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ರೇಷನ್‌ಕಾರ್ಡ್ ಬಯೋವುಟ್ರಿಕ್ ಫೋಟೋ ತೆಗೆಯಲು ಪ್ರತಿಕಾರ್ಡ್‌ವೊಂದಕ್ಕೆ ರು.150 ನಂತೆ ಗ್ರಾಮಸ್ಥರಿಂದ ವಸೂಲಿ ಮಾಡುತ್ತಿದ್ದಾರೆ ಎಂಬ ಕೂಗು ಪಂಚಾಯ್ತಿ ವ್ಯಾಪ್ತಿಯ ಹಲವಾರು ಗ್ರಾಮಸ್ಥರಿಂದ ಕೇಳಿಬರುತ್ತಿದೆ. ಇಲ್ಲಿನ ಪಂಚಾಯ್ತಿ ವ್ಯಾಪ್ತಿಯಲ್ಲಿ ಶೇ.85 ರಷ್ಟು ಕೂಲಿ ಕಾರ್ಮಿಕರು ವಾಸಿಸುತ್ತಿದ್ದು, ಕೂಲಿ-ನಾಲಿ ಮಾಡಿ ಜೀವನ ನಡೆಸುತ್ತಿದ್ದು,ಬಯೋವುಟ್ರಿಕ್ ಕೇಂದ್ರಕ್ಕೆ ಬಂದು ದಿನವೆಲ್ಲಾ ಸಾಲಿನಲ್ಲಿ ನಿಂತು ಫೋಟೋ ತೆಗೆಸಲು ಹೋದಾಗ ಆಪರೇಟರ್‌ಗಳು ಪ್ರತಿ ರೇಷನ್ ಕಾರ್ಡ್‌ಗೆ ಕೇಳುತ್ತಿರುವ 150 ಪಾವತಿಸಲಾರದೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡ ಗ್ರಾಮಸ್ಥರ ಆಸೆಗೆ ತಣ್ಣೀರೆರಚುತ್ತಿರುವ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತಿನ ಕ್ರಮ ಜರುಗಿಸಿ ಗ್ರಾಮಸ್ಥರಿಗೆ ನ್ಯಾಯ ದೊರಕಿಸಿಕೊಡಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
11ರಂದು ಸೀಳು ತುಟಿ ಶಸ್ತ್ರ ಚಿಕಿತ್ಸೆ
ಶಿಡ್ಲಘಟ್ಟ: ಸೀಳು ತುಟಿ ಮತ್ತು ಅಂಗಳದ ಶಸ್ತ್ರ ಚಿಕಿತ್ಸೆಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಜು.11 ರಂದು ಉಚಿತವಾಗಿ ಹಮ್ಮಿಕೊಳ್ಳಲಾಗಿದ್ದು, ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‌ಕುಮಾರ್ ಕೋರಿದ್ದಾರೆ. ಟ್ರಿನಿಟಿ ಕೇರ್ ಫೌಂಡೇಷನ್ ಮತ್ತು ಆರೋಗ್ಯ ಮತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೀಳು ತುಟಿ ಮತ್ತು ಮುಖದ ವಿಕಲಾಂಗತೆ ಶಸ್ತ್ರ ಚಿಕಿತ್ಸಾ ಶಿಬಿರ 11ರಂದು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಬೆ.10-30 ರಿಂದ ಪ್ರಾರಂಭವಾಗಿ ಮಧ್ಯಾಹ್ನ 2 ಗಂಟೆವರೆಗೆ ಆಯೋಜಿಸಲಾಗಿದೆ. ಬಡತನದ ರೇಖೆಗಿಂತ ಕೆಳಗಿರುವವರು, ಮಕ್ಕಳು, ಯುವಕರು, ಯುವತಿಯರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಶಿಬಿರದ ಪ್ರಯೋಜನವನ್ನು ಪಡೆಯಬೇಕೆಂದು ಆಯ್ಕೆಯಾದವರಿಗೆ ಶಸ್ತ್ರಚಿಕಿತ್ಸೆ ಉಚಿತವಾಗಿದ್ದು, ಈ ಶಿಬಿರದ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು. ಮಾಹಿತಿಗೆ ಮೊ.98803-94959, ಹಾಗೂ 90355-25974 ಇಲ್ಲಿಗೆ ಸಂಪರ್ಕಿಸಲು ಕೋರಿದ್ದಾರೆ.
ಇಂದು ರೈತಸಂಘ ಸಮ್ಮೇಳನ
ಕೋಲಾರ: ಕರ್ನಾಟಕ ಪ್ರಾಂತ ರೈತ ಸಂಘದ 6ನೇ ಕೋಲಾರ ತಾಲೂಕು ಸಮ್ಮೇಳನವನ್ನು ಜು.9 ರಂದು ಬೆಳಗ್ಗೆ 11 ಗಂಟೆಗೆ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ ಉದ್ಘಾಟಿಸಲಿದ್ದು, ಜಿಲ್ಲಾಧ್ಯಕ್ಷ ಪಿ.ಆರ್.ಸೂರ್ಯಯನಾರಾಯಣ, ಮುಖಂಡರಾದ ಗಂಗಮ್ಮ, ಪಿ.ಶ್ರೀನಿವಾಸ್ ಮತ್ತಿತರರು ಭಾಗವಹಿಸಲಿದ್ದಾರೆ.